ಕಿಚ್ಚ ಸುದೀಪ್ ಅವರು ಮೊದಲ ಸೀಸನ್ನಿಂದ 10ನೇ ಸೀಸನ್ನ ತನಕ ಬಿಗ್ ಬಾಸ್ (Bigg Boss Kannada) ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅನೇಕ ಬಗೆಯ ಸ್ಪರ್ಧಿಗಳನ್ನು ಅವರು ನೋಡಿದ್ದಾರೆ. ಕೆಲವರು ಬಿಗ್ ಬಾಸ್ ಮನೆ ಒಳಗೆ ಇದ್ದಾಗ ಬಹಳ ವಿನಮ್ರವಾಗಿ ನಡೆದುಕೊಳ್ಳುತ್ತಾರೆ. ದೊಡ್ಮನೆಯಿಂದ ಹೊರಗೆ ಹೋದ ಬಳಿಕ ಬಿಗ್ ಬಾಸ್ ಶೋ ವಿರುದ್ಧವೇ ಮಾತನಾಡುತ್ತಾರೆ. ಅಂಥ ವರ್ತನೆಯನ್ನು ಸುದೀಪ್ ಅವರು ಎಂದಿಗೂ ಸಹಿಸುವುದಿಲ್ಲ. ಈಗ ಅವರು ರಕ್ಷಕ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಯಾಗಿದ್ದು, ನಂತರ ಎಲಿಮಿನೇಟ್ ಆದ ರಕ್ಷಕ್ (Rakshak Bullet) ಅವರು ಆಡಿದ ಕೆಲವು ಮಾತುಗಳನ್ನು ಸುದೀಪ್ (Kichcha Sudeep) ಅವರು ತೀವ್ರವಾಗಿ ಖಂಡಿಸಿದ್ದಾರೆ. ಜನವರಿ 20ರ ಸಂಚಿಕೆಯಲ್ಲಿ ಅವರು ಒಂದು ಎಚ್ಚರಿಕೆ ನೀಡಿದ್ದಾರೆ.
‘ರಕ್ಷಕ್ ಅವರು ಬುಲೆಟ್ ಪ್ರಕಾಶ್ ಮಗ ತಾನೇ? ಅವರಿಗೆ ವಯಸ್ಸು ಎಷ್ಟಿರಬಹುದು? 11 ಅಥವಾ 12? ಇಪ್ಪತ್ತೆರಡಾ? ನಿಮ್ಮ ತಂದೆ ಬಹಳ ಹೆಸರು ಮಾಡಿದ್ದ ಕಲಾವಿದ. ಅವರ ಮಗನಾಗಿದ್ದಕ್ಕೆ ಸಮಾಜ ನಿಮಗೆ ಕೊಡುವ ಗೌರವವನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಬಳಿಕ ನಿಮ್ಮ ಸಂದರ್ಶನ, ಬಿಗ್ ಬಾಸ್ ಬಗ್ಗೆ ನೀವು ಕೊಟ್ಟ ಹೇಳಿಕೆ.. ಎಲ್ಲವೂ ತಿಳಿದಿದೆ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಅವರು ಹೊರಬಂದ ಬಳಿಕ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದರು. ಆಗ ಅವರು ಸುದೀಪ್ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ಸುದೀಪ್ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಯ್ತು. ಬಳಿಕ ರಕ್ಷಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯನ್ನೂ ಕೇಳಿದರು. ಅಷ್ಟಕ್ಕೇ ರಕ್ಷಕ್ ಸುಮ್ಮನಾಗಲಿಲ್ಲ. ಅತಿಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಬಂದಾಗ ಡ್ರೋನ್ ಪ್ರತಾಪ್ರನ್ನು ಟಾರ್ಗೆಟ್ ಮಾಡಿ ಇಲ್ಲಸಲ್ಲದ ಮಾತನಾಡಿದರು. ಅದು ಸುದೀಪ್ ಅವರಿಗೆ ಸರಿ ಎನಿಸಿಲ್ಲ. ಹಾಗಾಗಿ ಸುದೀಪ್ ಅವರು ಖಡಕ್ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಹೆಸರಿನಲ್ಲಿ ಅಭಿಮಾನಿಗಳಿಂದ ಆಂಬ್ಯುಲೆನ್ಸ್ ಸೇವೆ ಆರಂಭ
ಸೋಶಿಯಲ್ ಮೀಡಿಯಾದಲ್ಲಿ ರಕ್ಷಕ್ ಅವರಿಗೆ ಟ್ರೋಲ್ ಹೊಸದೇನಲ್ಲ. ಹಲವು ಕಾರಣಗಳಿಗಾಗಿ ಅವರು ಈಗಾಗಲೇ ಟ್ರೋಲ್ ಆಗಿದ್ದಾರೆ. ಈಗ ಸುದೀಪ್ ಮತ್ತು ಬಿಗ್ ಬಾಸ್ ಬಗ್ಗೆ ಅವರು ಆಡಿದ ಮಾತುಗಳು ಟೀಕೆಗೆ ಗುರಿಯಾಗಿವೆ. ಕಿಚ್ಚ ಸುದೀಪ್ ಅವರು ಎಚ್ಚರಿಕೆ ನೀಡಿದ್ದಕ್ಕೆ ರಕ್ಷಕ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಅತಿಥಿಯಾಗಿ ಬಂದ ಸ್ನೇಹಿತ್ ಗೌಡ ಮತ್ತು ಈಶಾನಿ ಅವರು ಆಡಿದ ಮಾತುಗಳ ಬಗ್ಗೆಯೂ ಸುದೀಪ್ ಅವರು ಆಕ್ಷೇಪ ಎತ್ತಿದ್ದಾರೆ. ಆ ಮೂಲಕ ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಅವರು ಧೈರ್ಯ ತುಂಬಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ