‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ರನ್ನರ್ಅಪ್ ಡ್ರೋನ್ ಪ್ರತಾಪ್ ಅವರು ಈಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮುಗಿದು ಹಲವು ದಿನಗಳು ಕಳೆದಿದ್ದರೂ ಅವರ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಿಂತಿಲ್ಲ. ‘ಬಿಗ್ ಬಾಸ್’ನಿಂದ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಈಗ ಡ್ರೋನ್ ಪ್ರತಾಪ್ ಅವರು ಆಟೋ ಓಡಿಸಿ ಗಮನ ಸೆಳೆದಿದ್ದಾರೆ. ಆಟೋ ಚಾಲಕರಿಗೆ ಅವರು ವಿಶ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲು ಅವರ ಮೇಲೆ ಸಾಕಷ್ಟು ಆರೋಪ ಇತ್ತು. ಅವರನ್ನು ಏಕೆ ದೊಡ್ಮನೆಗೆ ಕರೆತರಲಾಯಿತು ಎನ್ನುವ ಅಭಿಪ್ರಾಯ ಅನೇಕರಲ್ಲಿತ್ತು. ಆದರೆ, ಬಹುತೇಕರಿಗೆ ಈ ಅಭಿಪ್ರಾಯ ಬದಲಾಗಿದೆ. ಅವರ ಮೇಲೆ ಸಿಂಪತಿ ಮೂಡಿದೆ. ಇದಕ್ಕೆ ವಿನಯ್ ಗೌಡ ಹಾಗೂ ಅವರ ಗ್ಯಾಂಗ್ ನಡೆದುಕೊಂಡಿದ್ದೂ ಒಂದು ಕಾರಣ. ಬಿಗ್ ಬಾಸ್ ಜರ್ನಿ ಪ್ರತಾಪ್ಗೆ ಅನೇಕ ವಿಚಾರಗಳನ್ನು ಮರಳಿ ನೀಡಿದೆ. ಇದರಿಂದ ಅವರು ಖುಷಿಯಾಗಿದ್ದಾರೆ. ಮತ್ತೆ ಕುಟುಂಬದ ಜೊತೆ ಸೇರಿದ್ದಾರೆ.
ಶಂಕರ್ ನಾಗ್ ಅವರು ‘ಆಟೋ ರಾಜ’ ಎಂದೇ ಫೇಮಸ್. ಡ್ರೋನ್ ಪ್ರತಾಪ್ ಕೂಡ ಆಟೋ ಓಡಿಸುವಾಗ ಶಂಕರ್ನಾಗ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಓಡಿಸಿದ್ದು ಅವರ ಅಭಿಮಾನಿಯ ಆಟೋ ಎನ್ನಲಾಗಿದೆ. ಆಟೋ ಓಡಿಸಿದ ಬಳಿಕ ಅವರು ಸಮಸ್ತ ಕರ್ನಾಟಕದ ಆಟೋ ಚಾಲಕರಿಗೆ ಹಾರೈಸಿದ್ದಾರೆ. ಈ ವಿಡಿಯೋ ಅವರ ಅಭಿಮಾನಿ ವಲಯದಲ್ಲಿ ವೈರಲ್ ಆಗುತ್ತಿದೆ.
ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಬಳಿಕ ಸಾಕಷ್ಟು ಸುದ್ದಿ ಆದರು. ಅವರು ಒಮ್ಮೆ ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಅಷ್ಟೇ ಅಲ್ಲದೆ ಅವರು ಹಸಿವಿನಿಂದ ಹಾಗೆಯೇ ಇದ್ದ ಕಾರಣ ಅನಾರೋಗ್ಯ ಉಂಟಾಗಿತ್ತು. ಈ ಕಾರಣಕ್ಕೂ ಅವರು ಆಸ್ಪತ್ರೆ ಸೇರಬೇಕಾಗಿ ಬಂದಿತ್ತು. ಬಿಗ್ ಬಾಸ್ ಮುಗಿದ ಬಳಿಕ ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರ ಆಗುವ ‘ಗಿಚ್ಚಿ ಗಿಲಿಗಿಲಿ 3’ ಶೋನಲ್ಲೂ ಅವರು ಭಾಗಿ ಆಗುತ್ತಿದ್ದಾರೆ.
ಇದನ್ನೂ ಓದಿ: ರೆಸ್ಟೊರೆಂಟ್ನಲ್ಲಿ ರೊಚ್ಚಿಗೆದ್ದ ಬಿಗ್ ಬಾಸ್ ವಿನ್ನರ್; ನಡೆದೋಯ್ತು ರಾದ್ಧಾಂತ
ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಅವರು ಊರಿಗೆ ಮರಳಿದ್ದಾರೆ. ಅಲ್ಲಿಂದ ಡ್ರೋನ್ ಪ್ರತಾಪ್ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಅವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಆಗಮಿಸಿ ಪ್ರತಾಪ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಹಿಂಬಾಲಕ ಸಂಖ್ಯೆ ಹೆಚ್ಚಿದೆ. ಲಕ್ಷಾಂತರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇನ್ನೂ ಕೆಲವರು ಡ್ರೋನ್ ಪ್ರತಾಪ್ ಅವರು ಜನರ ಕಣ್ಣಿಗ ಮಣ್ಣೆರೆಚಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Tue, 13 February 24