ಕೈ-ಕೈ ಮಿಲಾಯಿಸಿದ ವಿನಯ್-ಕಾರ್ತಿಕ್, ಸಂಗೀತಾ-ನಮ್ರತಾ

|

Updated on: Dec 05, 2023 | 11:48 PM

Bigg Boss: ಬಿಗ್​ಬಾಸ್ ಮನೆಯಲ್ಲಿ ವಿನಯ್ ಹಾಗೂ ಕಾರ್ತಿಕ್ ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಟಾಸ್ಕ್​ ಒಂದನ್ನು ಆಡುವಾಗ ಇಬ್ಬರೂ ಪರಸ್ಪರ ತುಸು ಜೋರಾಗಿಯೇ ಪರಸ್ಪರ ಜಗಳವಾಡಿದ್ದಾರೆ.

ಕೈ-ಕೈ ಮಿಲಾಯಿಸಿದ ವಿನಯ್-ಕಾರ್ತಿಕ್, ಸಂಗೀತಾ-ನಮ್ರತಾ
Follow us on

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಆರಂಭವಾದಾಗಿನಿಂದಲೂ ವಿನಯ್ (Vinay) ಹಾಗೂ ಸಂಗೀತಾ (Sangeetha) ಅವರಿಬ್ಬರದ್ದೂ ಪರಸ್ಪರ ವಿರುದ್ಧ ತಂಡಗಳು ಎಂದಾಗಿದೆ. ವಿನಯ್ ಹಾಗೂ ಸಂಗೀತಾಗೆ ಪರಸ್ಪರರನ್ನು ಕಂಡರೆ ಉರಿವಷ್ಟು ಕೋಪ. ಸಂಗೀತಾ ತಂಡದಲ್ಲಿರುವ ಕಾರ್ತಿಕ್ ಸಹ ಸಂಗೀತಾಗೆ ಬೆಂಬಲಿಸುತ್ತಾ ವಿನಯ್​ರೊಟ್ಟಿಗೆ ವೈರತ್ವ ಬೆಳೆಸಿಕೊಂಡಿದ್ದಾರೆ. ಅಲ್ಲದೆ, ವಿನಯ್​ಗೆ ಬಿಗ್​ಬಾಸ್ ಮನೆಯಲ್ಲಿ ತಕ್ಕ ಎದುರಾಳಿಯೆಂದರೆ ಅದು ಕಾರ್ತಿಕ್ ಮಾತ್ರ.

ಮಂಗಳವಾರದ ಎಪಿಸೋಡ್​ನಲ್ಲಿ ಮನೆಯಲ್ಲಿ ಸಂಗೀತಾ ಹಾಗೂ ವರ್ತೂರು ಸಂತೋಷ್​ರನ್ನು ತಂಡದ ಲೀಡರ್​ಗಳನ್ನಾಗಿ ಮಾಡಲಾಗಿದೆ. ಸಂಗೀತಾ ತಂಡವನ್ನು ರಾಕ್ಷಸರ ತಂಡವೆಂದು, ವರ್ತೂರು ತಂಡವನ್ನು ಗಂಧರ್ವರ ತಂಡವೆಂದು ಕರೆಯಲಾಗಿದ್ದು, ಎರಡೂ ತಂಡಗಳ ನಡುವೆ ಟಾಸ್ಕ್ ಆಡಿಸಲಾಗುತ್ತಿದೆ. ವರ್ತೂರು ತಂಡದಲ್ಲಿ ವಿನಯ್ ಇದ್ದರೆ, ಸಂಗೀತಾ ತಂಡದಲ್ಲಿ ಕಾರ್ತಿಕ್ ಇದ್ದಾರೆ.

ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ ಬಳಿಕ, ಧ್ವಜಗಳನ್ನು ನೆಟ್ಟು ಅದನ್ನು ಕಾಪಾಡಿಕೊಳ್ಳುವ ಟಾಸ್ಕ್ ಒಂದನ್ನು ನೀಡಲಾಯ್ತು. ರಾಕ್ಷಸರ ಗುಂಪಿನವರು ಕೆಂಪು ಧ್ವಜ ನೆಡಬೇಕು, ಗಂಧರ್ವರು ಬಿಳಿ ಧ್ವಜ ನೆಟ್ಟು ಅದನ್ನು ಎದುರಾಳಿಗಳ ಕೈಗೆ ಸಿಗದಂತೆ ಕಾಪಾಡಬೇಕು ಎಂಬುದು ಟಾಸ್ಕ್ ಆಗಿತ್ತು. ಈ ಟಾಸ್ಕ್​ ಆಡುವಾಗ ವಿನಯ್ ಹಾಗೂ ಕಾರ್ತಿಕ್ ಪರಸ್ಪರ ಕೈ-ಕೈ ಮಿಲಾಯಿಸಿದರು. ಪರಸ್ಪರರು ಭುಜಗಳಿಂದ ಪರಸ್ಪರರನ್ನು ತಳ್ಳಾಡಿಕೊಂಡರು, ಎಳೆದಾಡಿದರು. ಕಾರ್ತಿಕ್ ಒಮ್ಮೆಯಂತೆ ವಿನಯ್ ಅನ್ನು ಎತ್ತಿಕೊಂಡು ಹೋಗಿ ದೂರ ಒಗೆದರು, ವಿನಯ್ ಸಹ ಕಾರ್ತಿಕ್ ಅನ್ನು ಎಳೆದಾಡಿದರು. ಈ ಹಂತದಲ್ಲಿ ಇಬ್ಬರಿಗೂ ಏಟು ತಗುಲಿತು.

ಇದನ್ನೂ ಓದಿ:ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?

ಇತ್ತ ವಿನಯ್ ಹಾಗೂ ಕಾರ್ತಿಕ್​ಗೆ ಜಗಳವಾಗುವ ಹೊತ್ತಿನಲ್ಲಿಯೇ ನಮ್ರತಾ ಹಾಗೂ ಸಂಗೀತಾ ಸಹ ಪರಸ್ಪರ ಕಿತ್ತಾಡಿದರು. ತಮ್ಮ-ತಮ್ಮ ಧ್ವಜ ರಕ್ಷಿಸಿಕೊಳ್ಳುವ ಭರದಲ್ಲಿ ಕತ್ತು ಹಿಡಿದು ಎಳೆದಾಡಿದರು. ತನಿಷಾ, ಸಿರಿ ಅವರುಗಳು ಬೇಡ, ಇಷ್ಟೋಂದು ದೈಹಿಕವಾಗಿ ಆಡುವುದು ಬೇಡ ಎಂದು ಕಿರುಚಿ, ಕ್ಯಾಪ್ಟನ್ ಸ್ನೇಹಿತ್​ರನ್ನು ಆಟ ನಿಲ್ಲಿಸುವಂತೆ ಹೇಳುವಂತೆ ಬೇಡಿದರೂ ಸ್ನೇಹಿತ್ ಆಟ ನಿಲ್ಲಿಸಲಿಲ್ಲ. ಕೊನೆಗೆ ಬಿಗ್​ಬಾಸ್, ಆಟವನ್ನು ನಿಲ್ಲಿಸುವಂತೆ ಹೇಳಿದರು. ಆಗ ತನಿಷಾ, ಸ್ನೇಹಿತ್ ಮೇಲೆ ಕೂಗಾಡಿ, ಎರಡೂ ಆಟಗಾರರಿಗೆ ಏಟಾಗುತ್ತಿದೆ ಇಂಥಹಾ ಸಮಯದಲ್ಲಿ ಆಟ ನಿಲ್ಲಿಸದಿದ್ದರೆ ಕ್ಯಾಪ್ಟನ್ ಆಗಿ ಪ್ರಯೋಜನವೇನು ಎಂದು ಕೂಗಾಡಿದರು. ಕೊನೆಗೆ ಆ ಜಗಳ ತುಕಾಲಿ ಮತ್ತು ತನಿಷಾಗೆ ಹತ್ತಿಕೊಂಡಿತು. ಅದಕ್ಕೆ ಮೂಗು ತೂರಿಸಿದ ಸಂಗೀತಾ ಸಹ ತುಕಾಲಿ ವಿರುದ್ಧ ಜಗಳ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ