ʻಗಂಗೆ ಗೌರಿʼ ಧಾರಾವಾಹಿಯಲ್ಲಿ ಮಲೆನಾಡಿನ ಸಹೋದರಿಯರ ಕಥೆ; ಡಿ.11ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ
ಡಿಸೆಂಬರ್ 11ರಿಂದ ಸೋಮವಾರದಿಂದ ಶನಿವಾರ ಪ್ರತಿ ಸಂಜೆ 6.30ಕ್ಕೆ ʻಗಂಗೆ ಗೌರಿʼ ಧಾರಾವಾಹಿ ಪ್ರಸಾರವಾಗಲಿದೆ. ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿರುವ ಗಂಗೆ ಮತ್ತು ಗೌರಿ ಎಂಬ ಅಕ್ಕ-ತಂಗಿಯರ ಕಥೆ ಇದು. ದರ್ಶ್ ಚಂದ್ರಪ್ಪ, ಶ್ರೀವಿದ್ಯಾ ಶಾಸ್ತ್ರಿ, ದರ್ಶಿನಿ ಗೌಡ ಮುಂತಾದವರು ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ದಶಕಗಳಿಂದಲೂ ಉದಯ ಟಿವಿಯಲ್ಲಿ ಅನೇಕ ಧಾರಾವಾಹಿಗಳು (Kannada serial) ಪ್ರಸಾರ ಕಂಡು ಫೇಮಸ್ ಆಗಿವೆ. ಫ್ಯಾಮಿಲಿ ಪ್ರೇಕ್ಷಕರ ಮನಸ್ಸು ಗೆಲ್ಲುವಂತಹ ಸೀರಿಯಲ್ಗಳನ್ನು ಉದಯ ವಾಹಿನಿ (Udaya Tv) ಬಿತ್ತರಿಸಿದೆ. ಈಗಲೂ ಹಲವು ಸೀರಿಯಲ್ಗಳು ಪ್ರಸಾರ ಕಾಣುತ್ತಿವೆ. ಹೊಸ ಹೊಸ ಧಾರಾವಾಹಿಗಳು ಸೇರ್ಪಡೆ ಆಗುತ್ತಲೇ ಇವೆ. ಬದಲಾದ ಕಾಲಕ್ಕೆ ತಕ್ಕಂತೆ, ಹೊಸ ರೀತಿಯ ಹಾಗೂ ವಿಭಿನ್ನ ಕಥೆಗಳನ್ನು ಹೊಂದಿರುವ ಸೀರಿಯಲ್ಗಳನ್ನು ಕೂಡ ಉದಯ ಟಿವಿ ಪರಿಚಯಿಸಿದೆ. ಈಗ ಹೊಚ್ಚ ಹೊಸ ‘ಗಂಗೆ ಗೌರಿ’ ಸೀರಿಯಲ್ (Gange Gowri serial) ಆರಂಭದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಏನು ಈ ಸೀರಿಯಲ್ ಕಹಾನಿ? ಇಲ್ಲಿದೆ ವಿವರ..
ಅಕ್ಕ-ತಂಗಿಯರ ನಡುವಿನ ಬಾಂಧವ್ಯದ ಕಹಾನಿಯನ್ನು ಹೇಳುವ ‘ಗಂಗೆ ಗೌರಿ’ ಸೀರಿಯಲ್ ಬಗ್ಗೆ ‘ಉದಯ’ ವಾಹಿನಿ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ‘ಕನ್ಯಾದಾನ’, ‘ಅಣ್ಣತಂಗಿ’, ‘ಆನಂದರಾಗ’, ‘ಸೇವಂತಿ’, ‘ಜನನಿ’, ‘ನಯನತಾರಾ’, ‘ರಾಧಿಕಾ’, ‘ಗೌರಿಪುರದ ಗಯ್ಯಾಳಿಗಳು’ ಸೇರಿದಂತೆ ಅನೇಕ ಕೌಟುಂಬಿಕ ಕಥಾಹಂದರದ ಸೀರಿಯಲ್ಗಳು ಜನರ ಮೆಚ್ಚುಗೆ ಗಳಿಸಿವೆ. ಅವುಗಳ ಸಾಲಿಗೆ ʻಗಂಗೆ ಗೌರಿʼ ಕೂಡ ಸೇರ್ಪಡೆ ಆಗುತ್ತಿದೆ. ಡಿಸೆಂಬರ್ 11ರಿಂದ ಸೋಮವಾರದಿಂದ ಶನಿವಾರ ಪ್ರತಿ ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.
ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿರುವ ಗಂಗೆ ಮತ್ತು ಗೌರಿ ಎಂಬ ಅಕ್ಕ-ತಂಗಿಯರ ಕಥೆ ಇದು. ಯಾರಿಗೂ ಜಗ್ಗದ ಯುವತಿಯರು ಇವರು. ಮಾತಿಗಿಂತಲೂ ಏಟೇ ಉತ್ತಮ ಎನ್ನುವ ಹುಡುಗಿ ಗಂಗೆ. ಆದರೆ ಆಕೆಯ ಅಕ್ಕ ಗೌರಿಯ ಸ್ವಭಾವ ಬೇರೆ. ಮೃದು ಮಾತಲ್ಲೇ ಎಲ್ಲರ ಮನ ಗೆಲ್ಲುವ ಶಾಂತ ಮೃದು ಸ್ವಭಾವದವಳು ಗೌರಿ. ಇಬ್ಬರ ಸ್ವಭಾವ ಬೇರೆ-ಬೇರೆ ಆಗಿದ್ದರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ. ಇವರ ಮಧ್ಯೆ ಒಬ್ಬ ಹುಡುಗ ಬಂದರೆ ಏನಾಗಬಹುದು? ಇಂಥ ಒಂದು ಕಥೆಯ ಎಳೆ ಇಟ್ಟುಕೊಂಡು ‘ಗಂಗೆ ಗೌರಿ’ ಸೀರಿಯಲ್ ಮೂಡಿಬರಲಿದೆ.
ಇದನ್ನೂ ಓದಿ: ಸೀರಿಯಲ್ಗೆ ಬಂದ ‘ಗಾಳಿಪಟ’ ನಟಿ ನೀತು; ‘ಕನ್ಯಾದಾನ’ ಧಾರಾವಾಹಿಯಲ್ಲಿ ವಿಶೇಷ ಪಾತ್ರ
ಹುಡುಗನ ಆಗಮನದ ಬಳಿಕ ಗಂಗೆ ಮತ್ತು ಗೌರಿಯ ಜೀವನದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ? ತಂಗಿಗಾಗಿ ಅಕ್ಕ ಗೌರಿಯು ತನ್ನ ಪ್ರೀತಿ ತ್ಯಾಗ ಮಾಡ್ತಾಳಾ? ಅಕ್ಕ ಹಾಗೂ ಪ್ರೀತಿಯ ನಡುವೆ ಗಂಗೆಯ ಆಯ್ಕೆ ಏನಾಗಿರುತ್ತದೆ? ಇವರ ಲೆಕ್ಕಾಚಾರಗಳನ್ನೂ ಮೀರಿ ದೇವರ ಇಚ್ಛೆ ಏನು ಎಂಬ ಕೌತುಕದ ಕಹಾನಿಯೇ ‘ಗಂಗೆ ಗೌರಿ’ ಸಾರಾಂಶ. ಕಳಸದ ಹಸಿರು ಪರಿಸರದ ಜೊತೆಗೆ ಮಲೆನಾಡಿನ ಸುಂದರ ಹಳ್ಳಿ ಬದುಕಿನ ಹಿನ್ನೆಲೆಯೊಂದಿಗೆ ಈ ಧಾರಾವಾಹಿ ಸಾಗುತ್ತದೆ. ಅದರಿಂದ ವೀಕ್ಷಕರಿಗೆ ಹೊಸ ಫೀಲ್ ಸಿಗಲಿದೆ.
ಇದನ್ನೂ ಓದಿ: Dinesh Phadnis: ‘ಸಿಐಡಿ’ ಧಾರಾವಾಹಿ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ; ಲಿವರ್ ಸಮಸ್ಯೆಯಿಂದ ನಿಧನ
‘ವೃದ್ಧಿ ಕ್ರಿಯೇಶನ್’ ಮೂಲಕ ‘ಗಂಗೆ ಗೌರಿ’ ಧಾರಾವಾಹಿ ನಿರ್ಮಾಣ ಆಗುತ್ತಿದೆ. ವಿನೋದ್ ದೋಂಡಾಳೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ದರ್ಶ್ ಚಂದ್ರಪ್ಪ, ಶ್ರೀವಿದ್ಯಾ ಶಾಸ್ತ್ರಿ, ದರ್ಶಿನಿ ಗೌಡ, ಹೇಮಾ ಬೆಳ್ಳೂರು, ರೇಣುಕಾ ಬಾಲಿ, ಅಪೂರ್ವ ಭಾರದ್ವಾಜ್, ರೋಹಿತ್ ಶ್ರೀನಾಥ್, ಲಕ್ಷ್ಮೀ ಸಿದ್ದಯ್ಯ, ಅಭಿಜಿತ್ ಮುಂತಾದ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ‘ನಮ್ಮ ಧಾರಾವಾಹಿಯ ನಡುವೆ ಕನ್ನಡದ ಭಾವಗೀತೆಗಳನ್ನು ಬಳಸಿದ್ದೇವೆ. ಇದರಲ್ಲಿ ಕನ್ನಡತನ ಎದ್ದು ಕಾಣುತ್ತದೆ. ನಮ್ಮ ಪ್ರೇಕ್ಷಕರಿಗೆ ಇದು ಖಂಡಿತ ಇಷ್ಟವಾಗುತ್ತದೆ’ ಎಂದು ನಿರ್ಮಾಪಕ ವರ್ಧನ್ ಹರಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.