ತಾಯಿಯ ನೆನೆದು ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚನ ಕಣ್ಣೀರು
Bigg Boss Kannada: ಕಿಚ್ಚ ಸುದೀಪ್ ಬಿಗ್ಬಾಸ್ ವೇದಿಕೆ ಮೇಲೆ ಇಷ್ಟು ವರ್ಷ ಕಾಣಿಸಿಕೊಂಡಿದ್ದಕ್ಕಿಂತಲೂ ಬೇರೆಯದ್ದೇ ರೀತಿಯಲ್ಲಿ ಇಂದು (ನವೆಂಬರ್ 02) ಕಾಣಿಸಿಕೊಂಡರು. ಸುದೀಪ್ ಇಂದು ಬಿಗ್ಬಾಸ್ ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದರು.
ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಸಾಮಾನ್ಯವಾಗಿ ಮೂರು ರೀತಿಯ ಷೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದೋ ಸಖತ್ ಖಡಕ್, ಇಲ್ಲ ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ ಕಾಣಿಸಿಕೊಳ್ಳುತ್ತಾರೆ. ಎರಡೂ ಅಲ್ಲದಿದ್ದರೆ ಫಿಲಾಸಫರ್ ರೀತಿ, ಗಂಭೀರ ವಿಶ್ಲೇಷಣಕಾರನಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂದು ಬಿಗ್ಬಾಸ್ ವೇದಿಕೆ ಮೇಲೆ ಬೇರೆಯದ್ದೇ ರೀತಿಯ ಸುದೀಪ್ ಕಾಣಿಸಿಕೊಂಡರು. ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಕಣ್ಣೀರು ಹಾಕಿದರು. ಹಲವು ಭಾರಿ ಗದ್ಗದಿತರಾದರು.
ಅಕ್ಟೋಬರ್ 19ರಂದು ಬಿಗ್ಬಾಸ್ ಶೋ ನಡೆಸಿಕೊಡುವಾಗಲೇ ತಾಯಿಯ ಅನಾರೋಗ್ಯದ ಸುದ್ದಿ ತಿಳಿದು ಅರ್ಧಕ್ಕೆ ಶೋ ನಿಲ್ಲಿಸಿ ಹೋಗಿದ್ದ ಸುದೀಪ್ ಒಂದು ವಾರದ ಗ್ಯಾಪ್ ಬಳಿಕ ಇಂದು ವಾಪಸ್ಸಾಗಿದ್ದಾರೆ. ಸುದೀಪ್, ತಮ್ಮ ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಬಿಗ್ಬಾಸ್ ವೇದಿಕೆಗೆ ವಾಪಸ್ಸಾಗಿದ್ದಾರೆ. ಸುದೀಪ್ ಅವರ ತಾಯಿಗೆ ಬಿಗ್ಬಾಸ್ ಸಹ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಭಾವುಕರಾಗಿದ್ದಾರೆ.
ಸುದೀಪ್, ಶನಿವಾರದ ಎಪಿಸೋಡ್ ಪ್ರಾರಂಭ ಮಾಡಿ ಮನೆಯ ಸದಸ್ಯರೊಂದಿಗೆ ಮಾತುಕತೆ ಪ್ರಾರಂಭ ಮಾಡುತ್ತಿದ್ದಂತೆ ಬಿಗ್ಬಾಸ್ ಧ್ವನಿ ಕೇಳಿ ಬಂತು. ಈ ಶೋ ಪ್ರಾರಂಭವಾದ ದಿನ, ‘ನೋಡಮ್ಮ ಶೇರ್ವಾನಿ ಧರಿಸಿದ್ದೀನಿ, ಬರಿಗಾಲಲ್ಲಿ ಇದ್ದೀನಿ, ಓಕೆ ನಾ’ ಎಂದು ತಮ್ಮ ತಾಯಿಯನ್ನು ಬಿಗ್ಬಾಸ್ ವೇದಿಕೆ ಮೂಲಕ ಮಾತನಾಡಿಸಿ ಶೋ ಪ್ರಾರಂಭ ಮಾಡಿದ್ದರು ಸುದೀಪ್. ಇದೇ ವಿಷಯವನ್ನು ಬಿಗ್ಬಾಸ್ ನೆನಪು ಮಾಡಿಸಿದರು. ತಮ್ಮ ಪ್ರೀತಿಯ ಮಾಣಿಕ್ಯವನ್ನು ಕರ್ನಾಟಕದ ಜನರ ಮಡಿಲಿಗೆ ಹಾಕಿದ ತಾಯಿಗೆ ಈ ವೇದಿಕೆ ಮೂಲಕ ಶ್ರದ್ಧಾಂಜಲಿ ನೀಡಬೇಕು ಎಂದುಕೊಂಡಿದ್ದೇವೆ’ ಎಂದು ಹೇಳಿದರು.
ಇದನ್ನೂ ಓದಿ:ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದ ನರೇಂದ್ರ ಮೋದಿ
ಆ ಬಳಿಕ ಮಾಜಿ ಬಿಗ್ಬಾಸ್ ಸ್ಪರ್ಧಿ, ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ವೇದಿಕೆಗೆ ಬಂದು ಪರಪಂಚ ನೀನೆ ಹಾಡು ಹಾಡಿದರು. ವೇದಿಕೆ ಮುಂದೆ ಕೂತಿದ್ದ ಪ್ರೇಕ್ಷಕರು ಮೇಣಬತ್ತಿ ಹಚ್ಚಿ ಎದ್ದು ನಿಂತರು, ವೇದಿಕೆ ಮೇಲಿರುವ ದೊಡ್ಡ ಎಲ್ಸಿಡಿಯಲ್ಲಿ ಸುದೀಪ್ ತಾಯಿಯವರ ದೊಡ್ಡ ಚಿತ್ರ ಮೂಡಿತು, ಬಿಗ್ಬಾಸ್ ಸ್ಪರ್ಧಿಗಳು ಸಹ ಎಲ್ಲರೂ ಎದ್ದು ನಿಂತು ಸುದೀಪ್ ತಾಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಹಾಡು ಮುಗಿದ ಮೇಲೆ ಮಾತನಾಡಿದ ವಾಸುಕಿ ವೈಭವ್, ‘ನಿಮ್ಮ ತಾಯಿಯವರಿಂದ ಹಲವು ಬಾರಿ ಆಶೀರ್ವಾದ ಪಡೆದಿದ್ದೇನೆ. ನಿಮಗೆ ಸಾಧ್ಯವಾದರೆ ತಾಯಿಯವರ ಬಗ್ಗೆ ಒಂದೆರಡು ಮಾತು ಮಾತನಾಡಬಹುದೆ? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸುದೀಪ್, ‘ಬಿಗ್ಬಾಸ್ ವೇದಿಕೆ ಮೇಲೆ ತಾಯಿಯ ಬಗ್ಗೆ ಮಾತನಾಡಲು ನನಗೆ ಏನೂ ತೋಚುತ್ತಿಲ್ಲ. ಆದರೆ ನನ್ನ ತಾಯಿಗೆ ಬಿಗ್ಬಾಸ್ ಶೋ ಬಹಳ ಇಷ್ಟದ ಶೋ ಆಗಿತ್ತು’ ಎಂದರು. ಆ ನಂತರ ನನಗೆ ಮಾಡಲು ಹೆಚ್ಚು ಕೆಲಸವಿದೆ ಎಂದು ಹೇಳಿ ‘ವಾರದ ಪಂಚಾಯಿತಿ’ ಆರಂಭಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ