Bigg Boss Kannada 12: ಬಿಗ್ ಬಾಸ್ ಮನೆ ಖಾಲಿ ಮಾಡಿದ ಸ್ಪರ್ಧಿಗಳು; ಮುಂದಿನ ನಡೆ ಏನು?
‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿಗಳನ್ನು ಕೂಡಲೇ ಖಾಲಿ ಮಾಡಿಸಿ ರೆಸಾರ್ಟ್ಗೆ ಕಳಿಸಲಾಗಿದೆ. ಕಾನೂನಿನ ತೊಡಕು ಪರಿಹಾರ ಆಗುವ ತನಕ ಶೋ ಸ್ಥಗಿತ ಆಗಲಿದೆ. ಇದರಿಂದ ವೀಕ್ಷಕರಿಗೆ ಬೇಸರ ಆಗಿದೆ. ಈ ಹಿಂದೆ 2021ರಲ್ಲಿ ಕೊರೊನಾ ಕಾರಣದಿಂದ ಇದೇ ರೀತಿ ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತಿತ್ತು.

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದ ಕಾರಣದಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಸ್ಥಗಿತಗೊಂಡಿದೆ. ಕೆಲವೇ ದಿನಗಳ ಹಿಂದೆ ಆರಂಭ ಆಗಿದ್ದ ಈ ಕಾರ್ಯಕ್ರಮಕ್ಕೆ ಕಾನೂನಿನ ತೊಡಕು ಉಂಟಾಗಿದೆ. ಇಂದು (ಅಕ್ಟೋಬರ್ 7) ಬಿಗ್ ಬಾಸ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ಗೆ (Jollywood Studios) ರಾಮನಗರ ಜಿಲ್ಲಾಡಳಿತ ಅಧಿಕಾರಿಗಳು ಬೀಗ ಹಾಕಿದ್ದಾರೆ. ಅದರಿಂದಾಗಿ ಶೋ ನಿಲ್ಲುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಮುಂದಿನ ನಡೆಯ ಬಗ್ಗೆ ಆಯೋಜಕರು ಚರ್ಚೆ ನಡೆಸಿದ್ದಾರೆ.
ಈ ಮೊದಲು ಕೂಡ ಬಿಗ್ ಬಾಸ್ ಅರ್ಧದಲ್ಲೇ ಸ್ಥಗಿತಗೊಂಡಿತ್ತು. 2021ರಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ ನಡೆಯುತ್ತಿತ್ತು. 70 ದಿನಗಳ ಕಾಲ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಬಂದಿತ್ತು. ಆದರೆ ಆ ಸಂದರ್ಭದಲ್ಲಿ ಕೊರೊನಾ ವೈರಸ್ ಹೆಚ್ಚಾಯಿತು. ಕಾನೂನಿನ ಪ್ರಕಾರ ಬಿಗ್ ಬಾಸ್ ಶೋ ನಿಲ್ಲಿಸುವುದು ಅನಿವಾರ್ಯ ಆಯಿತು. ಆಗ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿತ್ತು.
ಕೊರನಾ ಹಾವಳಿ ಕಡಿಮೆ ಆದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತ್ತು. ಹಾಗಾಗಿ ಒಂದೂವರೆ ತಿಂಗಳ ನಂತರ ಮತ್ತೆ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಆರಂಭಿಸಲಾಗಿತ್ತು. ಈಗ ಕೂಡ ಅದೇ ರೀತಿ ಆಗಲಿದೆ. ಸದ್ಯಕ್ಕೆ ಉಂಟಾಗಿರುವ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಂಡ ನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಪುನಃ ಆರಂಭ ಆಗಲಿದೆ. ಆದರೆ ಎಷ್ಟು ದಿನಗಳ ಸಮಯ ಹಿಡಿಯಬಹುದು ಎಂಬುದು ಸದ್ಯಕ್ಕೆ ತಿಳಿದಿಲ್ಲ.
ಕಾಕ್ರೋಜ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ ಶೆಟ್ಟಿ, ರಾಶಿಕಾ, ಧ್ರುವಂತ್ ಮುಂತಾದವರು ಬಿಗ್ ಬಾಸ್ ಸ್ಪರ್ಧಿಗಳಾಗಿದ್ದರು. ಅವರೆಲ್ಲರನ್ನೂ ಈಗ ಮನೆಯಿಂದ ಹೊರಗೆ ಕಳಿಸಲಾಗಿದೆ. ಎಲ್ಲ ಸ್ಪರ್ಧಿಗಳನ್ನು ರಾಮನಗರ ತಾಲೂಕಿನ ಬಿಡಿದಿಯಲ್ಲಿರುವ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ. ಈ ರೆಸಾರ್ಟ್ಬಲ್ಲಿ 12 ರೂಮ್ ಬುಕ್ ಮಾಡಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯ ಅಸಲಿ ಆಟ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ
ಮುಂದಿನ ತೀರ್ಮಾನ ತೆಗೆದುಕೊಳ್ಳುವ ತನಕ ಎಲ್ಲರನ್ನು ಒಂದು ಕಡೆ ಇರಿಸಲಾಗುತ್ತದೆ. ಬಿಗ್ ಬಾಸ್ ಆಯೋಜಕರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ನ್ಯಾಯಾಲಯ ನೀಡುವ ಆದೇಶದ ಮೇಲೆ ಬಿಗ್ ಬಾಸ್ ಮುಂದಿನ ಭವಿಷ್ಯ ನಿರ್ಧಾರ ಆಗಲಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆ ಖಾಲಿ ಖಾಲಿ ಆಗಿದೆ. ಕೆಲವೇ ಗಂಟೆಗಳ ಹಿಂದೆ ಕಲರ್ಫುಲ್ ಬೆಳಕಿನಿಂದ ಝಗಮಗಿಸುತ್ತಿದ್ದ ದೊಡ್ಮನೆಯಲ್ಲಿ ಈಗ ಕತ್ತಲು ಆವರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




