Manju pavagada: ಮಂಜು ಪಾವಗಡ ಕೊರಳಿಗೆ ಕನ್ನಡ ಬಿಗ್​ ಬಾಸ್​ 8 ವಿಜಯದ ಮಾಲೆ; ಸುದೀಪ್​ ಅಧಿಕೃತ ಘೋಷಣೆ

Bigg Boss Kannada Winner: ಬಿಗ್​ ಬಾಸ್​ ಕನ್ನಡ ಫಿನಾಲೆಯ ಟಾಪ್​ 3 ಸ್ಥಾನಕ್ಕೆ ಮಂಜು ಪಾವಗಡ, ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆಪಿ ಆಯ್ಕೆ ಆಗಿದ್ದರು. ಅಂತಿಮವಾಗಿ ಮಂಜು ಪಾವಗಡ ಅವರಿಗೆ ಬಿಗ್​ ಬಾಸ್​ ವಿನ್ನರ್​ ಪಟ್ಟ ಸಿಕ್ಕಿದೆ. ಅವರಿಗೆ ಎಲ್ಲರಿಂದ ಅಭಿನಂದನೆ ಸಲ್ಲಿಕೆ ಆಗುತ್ತಿದೆ.

Manju pavagada: ಮಂಜು ಪಾವಗಡ ಕೊರಳಿಗೆ ಕನ್ನಡ ಬಿಗ್​ ಬಾಸ್​ 8 ವಿಜಯದ ಮಾಲೆ; ಸುದೀಪ್​ ಅಧಿಕೃತ ಘೋಷಣೆ
ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ
Edited By:

Updated on: Aug 09, 2021 | 9:10 AM

Manju Pavagada | ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸುದೀರ್ಘ ಪ್ರಯಾಣ ಕೊನೆಗೊಂಡಿದೆ. ಮಂಜು ಪಾವಗಡ (Manju Pavagada) ಅವರು ಸೀಸನ್​ 8ರ ವಿನ್ನರ್​ (Bigg Boss Kannada Winner) ಆಗಿ ಹೊರ ಹೊಮ್ಮಿದ್ದಾರೆ. ಈ ಬಗ್ಗೆ ಸುದೀಪ್​ ಅವರು ಅದ್ದೂರಿ ವೇದಿಕೆ ಮೇಲೆ ಘೋಷಣೆ ಮಾಡಿದರು. ಈ ಮೂಲಕ ಬಿಗ್​ಬಾಸ್​ ಟ್ರೋಫಿ​ ಹಾಗೂ 53 ಲಕ್ಷ ನಗದು ಬಹುಮಾನ ಮಂಜು ಪಾವಗಡ ಅವರಿಗೆ ಸಿಕ್ಕಿದೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಹರಿದು ಬಂದಿದೆ. ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 8 ಈ ಬಾರಿ ಹಲವು ವಿಷಯಗಳಲ್ಲಿ ದಾಖಲೆ ಬರೆದಿದೆ. ಪ್ರತಿ ಸೀಸನ್​ನಲ್ಲಿ ಸ್ಪರ್ಧಿಗಳು ಎಲಿಮಿನೇಟ್ ಆದಾಗಲೂ ಅವರಿಗೆ ಬಂದಿರುವ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸಿಲ್ಲ ಎಂಬ ಕಾರಣಕ್ಕೆ ಈ ಹಿಂದಿನ ಸೀಸನ್​ಗಳಲ್ಲಿ ಅಸಮಾಧಾನ ಕೇಳಿಬಂದಿದ್ದವು. ಹೀಗಾಗಿ, ಇದೇ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಟಾಪ್ 5 ಸ್ಪರ್ಧಿಗಳು ಪಡೆದ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸಲಾಗಿತು.

ಈ ಸೀಸನ್​ನಲ್ಲಿ ವಿನ್ನರ್ ಆಗಿರುವ ಮಂಜು ಪಾವಗಡ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿರುವ ಅರವಿಂದ್​ ಕೆ.ಪಿ. 43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ ವೈಷ್ಣವಿ ಗೌಡ 10,21,831 ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ಪ್ರಶಾಂತ್ ಸಂಬರಗಿ 6,69,020 ಮತಗಳನ್ನು ಪಡೆದಿದ್ದಾರೆ.

ಫೆಬ್ರವರಿ 28ರಂದು ಬಿಗ್​ ಬಾಸ್​ ಸೀಸನ್​ 8 ಆರಂಭವಾಗಿತ್ತು. ಅದ್ದೂರಿ ವೇದಿಕೆ ಏರಿದ 17 ಸ್ಪರ್ಧಿಗಳು ಬಿಗ್​ ಬಾಸ್ ಪ್ರವೇಶಿಸಿದ್ದರು. ಈ ಮಧ್ಯೆ ಮೂರು ಸ್ಪರ್ಧಿಗಳು ವೈಲ್ಡ್​ ಕಾರ್ಡ್​ ಮೂಲಕ ಮನೆಗೆ ಎಂಟ್ರಿ ಪಡೆದುಕೊಂಡಿದ್ದರು. ಆದರೆ, ಕೊರೊನಾ ವಕ್ರದೃಷ್ಟಿ ಬಿಗ್​ ಬಾಸ್​ ಮೇಲೆ ಬಿದ್ದಿತ್ತು. ಕೊವಿಡ್​ ನಿಯಂತ್ರಣಕ್ಕೆ ಹೇರಿದ್ದ ಲಾಕ್​ಡೌನ್​ನಿಂದಾಗಿ ಬಿಗ್​ ಬಾಸ್ ಅರ್ಧಕ್ಕೆ ನಿಂತಿತ್ತು. ಮೇ 8ರಂದು ಈ ಬಗ್ಗೆ ಅಧಿಕೃತ ಘೋಷಣೆ ಆಗಿತ್ತು.

43 ದಿನಗಳ ನಂತರದಲ್ಲಿ ಮತ್ತೆ ಶೋ ಆರಂಭಗೊಂಡಿತು. ಅಂದರೆ, ಜೂನ್​ 23ರಿಂದ ಸೆಕೆಂಡ್​​ ಇನ್ನಿಂಗ್ಸ್​ ಆರಂಭಿಸುವುದಾಗಿ ಬಿಗ್​ ಬಾಸ್​ ಘೋಷಣೆ ಮಾಡಿದರು. ಈ ಮೂಲಕ ಒಟ್ಟು 115ಕ್ಕೂ ಅಧಿಕ ದಿನಗಳ ಬಿಗ್​​ ಬಾಸ್​ ನಡೆಯಿತು.

ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ರಘು ಗೌಡ, ಚಕ್ರವರ್ತಿ ಚಂದ್ರಚೂಡ್​, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಶುಭಾ ಪೂಂಜಾ, ವೈಷ್ಣವಿ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಇದ್ದರು. ಫಿನಾಲೆ ವೀಕ್​ನಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ದಿವ್ಯಾ ಉರುಡುಗ, ಶುಭಾ ಪೂಂಜಾ, ವೈಷ್ಣವಿ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಉಳಿದುಕೊಂಡಿದ್ದರು. ಈ ಪೈಕಿ ಮಂಜು ಪಾವಗಡ ವಿನ್​ ಆಗಿದ್ದಾರೆ.

ಈ ಬಾರಿಯ ಬಿಗ್​ ಬಾಸ್​ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿತ್ತು. ಶಮಂತ್​ ಬ್ರೋ ಗೌಡ ಅವರು ಒಮ್ಮೆ ಎಲಿಮಿನೇಟ್​ ಆದರೂ ಕೂಡ ಅವರು ಬಚಾವ್​ ಆಗಿದ್ದರು. ವೈಜಯಂತಿ ಅಡಿಗ ನಾಮಿನೇಟ್​ ಆಗದೇ ಎಲಿಮಿನೇಟ್​ ಆದರು. ಇನ್ನು, ಒಂದಷ್ಟು ದಿನಗಳ ಕಾಲ ಗ್ಯಾಪ್​ ಪಡೆದು ಸ್ಪರ್ಧಿಗಳು ಮನೆ ಪ್ರವೇಶಿಸಿದ್ದು ಇದೇ ಮೊದಲು.

ಇದನ್ನೂ ಓದಿ:
ಬಿಗ್​ ಬಾಸ್​ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್​ ಕೆಪಿ

ಬಿಗ್​ ಬಾಸ್​ ಪ್ರಶಸ್ತಿ ಮೊತ್ತದಲ್ಲಿ ಏರಿಕೆ; ಟಾಪ್​ 5ನಲ್ಲಿರುವ ಎಲ್ಲರಿಗೂ ಸಿಗುತ್ತಿದೆ ಪ್ರೈಜ್​​​ ಅಮೌಂಟ್​

Published On - 12:14 am, Mon, 9 August 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us