AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಮತ್ತೆ ಬರ್ತಾರಾ ವರ್ತೂರು ಪ್ರಕಾಶ್​? ಏನು ಹೇಳಿದರು ಸುದೀಪ್?

Bigg Boss Kannada: ಹುಲಿ ಉಗುರು ಪ್ರಕರಣದಲ್ಲಿ ಜಾಮೀನು ಪಡೆದಿರುವ ವರ್ತೂರು ಸಂತೋಷ್ ಮತ್ತೆ ಬಿಗ್​ಬಾಸ್ ಮನೆ ಪ್ರವೇಶ ಮಾಡುತ್ತಾರಾ? ಸುದೀಪ್ ಹೇಳಿದ್ದೇನು? ಇಲ್ಲಿದೆ ಮಾಹಿತಿ.

ಬಿಗ್​ಬಾಸ್ ಮನೆಗೆ ಮತ್ತೆ ಬರ್ತಾರಾ ವರ್ತೂರು ಪ್ರಕಾಶ್​? ಏನು ಹೇಳಿದರು ಸುದೀಪ್?
ಸಂತೋಷ್
ಮಂಜುನಾಥ ಸಿ.
|

Updated on:Oct 29, 2023 | 11:46 PM

Share

ಬಿಗ್​ಬಾಸ್ ಕನ್ನಡ ಸೀಸನ್ 10ರ (Bigg Boss) ಸ್ಪರ್ಧಿಯಾಗಿ ಬಿಗ್​ಬಾಸ್ ಮನೆಗೆ ಪ್ರವೇಶ ಪಡೆದಿದ್ದ ರೈತ ವರ್ತೂರು ಸಂತೋಷ್, ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಂಧಿತರಾಗಿ ಜೈಲು ವಾಸಿಯಾಗಿದ್ದರು. ವಾರದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಸಹ ಆಗಿದ್ದಾರೆ. ಬಿಡುಗಡೆ ಆದ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಗೆ ಹೋದರೋ ಇಲ್ಲವೋ ಎಂಬ ಬಗ್ಗೆ ಈ ವರೆಗೆ ಯಾವುದೇ ಖಾತ್ರಿ ಇಲ್ಲ. ಕೆಲವು ಸುದ್ದಿಗಳ ಪ್ರಕಾರ, ವರ್ತೂರು ಸಂತೋಷ್ ಮತ್ತೆ ಬಿಗ್​ಬಾಸ್ ಮನೆಗೆ ಹೋಗಿದ್ದಾರೆ. ಇಂದು (ಭಾನುವಾರ) ಎಪಿಸೋಡ್​ನಲ್ಲಿ ಸುದೀಪ್ ವರ್ತೂರು ಸಂತೋಷ್ ವಿಷಯ ಚರ್ಚೆಗೆ ತಂದರು. ಸಂತೋಷ್ ಮತ್ತೆ ಮನೆಗೆ ಬರುತ್ತಾರಾ ಎಂಬ ಬಗ್ಗೆಯೂ ಸುದೀಪ್ ಮಾತನಾಡಿದರು.

ಸ್ಪರ್ಧಿಗಳೊಟ್ಟಿಗೆ ಮಾತನಾಡುವಾಗ ಯಾರೋ ಒಬ್ಬರು ವರ್ತೂರು ಸಂತೋಷ್ ವಿಷಯವನ್ನು ತಂದರು. ಆಗ ಸುಮ್ಮನಿದ್ದ ಸುದೀಪ್, ಆ ಸಂವಾದ ಮುಗಿದ ಬಳಿಕ ಉಗುರು ಕಟ್ ಮಾಡಿಕೊಳ್ಳುವಾಗ ಜಾಗೃತೆಯಾಗಿರಿ. ಯಾರದ್ದೇ ಉಗುರಾಗಿರಲಿ ಬಹಳ ಸಮಸ್ಯೆ ತಂದು ಬಿಡಬಹುದು ಎಂದು ಒಗಟಿನ ರೀತಿ ಬಿಗ್​ಬಾಸ್ ಸದಸ್ಯರ ಮುಂದೆ ಹೇಳಿದರು. ಮನೆಯ ಸದಸ್ಯರು, ಸುದೀಪ್ ಮಾತು ಅರ್ಥವಾಗದೆ ತಲೆ ಕೆರೆದುಕೊಂಡರು. ಸುದೀಪ್ ಮಾತ್ರ ಸುಮ್ಮನೆ ಹುಸಿ ನಗೆ ನಕ್ಕು ಮುಂದಿನ ವಿಷಯಕ್ಕೆ ವಿಷಯಾಂತರ ಮಾಡಿದರು.

ಇದನ್ನೂ ಓದಿ: ಈ ವಾರ ಮನೆಯಿಂದ ಹೊರಬಂದಿದ್ದು ಯಾರು? ಸುದೀಪ್ ಕೊಟ್ಟರು ಟ್ವಿಸ್ಟ್

ಎಪಿಸೋಡ್​ನ ಕೊನೆಯಲ್ಲಿ ಪ್ರೇಕ್ಷಕರನ್ನುದ್ದೇಶಿಸಿ ಮತ್ತೆ ವರ್ತೂರು ಸಂತೋಷ್ ವಿಷಯ ಮಾತನಾಡಿದ ಸುದೀಪ್, ”ವಾರ್ತೆ ಸಂತೋಷ್ ಎಂದು ಅವರನ್ನು ಕರೆದು ಕರೆದು ನಿಜಕ್ಕೂ ವಾರ್ತೆ ಆಗಿಬಿಟ್ಟರು. ಎಲ್ಲರಿಗೂ ಗೊತ್ತಿರುವಂತೆ ವರ್ತೂರು ಸಂತೋಷ್ ಅವರಿಗೆ ಜಾಮೀನು ದೊರೆತಿದೆ. ಆದರೆ ಅವರು ಮತ್ತೆ ಬಿಗ್​ಬಾಸ್ ಮನೆಗೆ ಪ್ರವೇಶಿಸುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಸ್ವತಃ ಬಿಗ್​ಬಾಸ್ ಅವರೇ ಮಾಹಿತಿ ನೀಡುತ್ತಾರೆ” ಎಂದರು.

ಅಂದಹಾಗೆ ಬಿಗ್​ಬಾಸ್​ ಮನೆಯ ಒಳಗಿರುವವರಿಗೆ ವರ್ತೂರು ಸಂತೋಷ್ ಅವರು ಏಕೆ ಏಕಾ-ಏಕಿ ಮನೆಯಿಂದ ಹೊರಗೆ ಹೋದರು ಎಂಬ ವಿಷಯ ಗೊತ್ತಿಲ್ಲ. ಅವರ ಆಪ್ತರಿಗೆ ಸಮಸ್ಯೆ ಆಗಿರುವ ಸಂತೋಷ್ ಮನೆಯಿಂದ ಹೊರಗೆ ಹೋಗಿದ್ದಾರೆ ಎಂದಷ್ಟೆ ಮನೆಯ ಸದಸ್ಯರಿಗೆ ಗೊತ್ತು, ಹುಲಿ ಉಗುರಿನ ಕಾರಣಕ್ಕೆ ವರ್ತೂರು ಬಂಧನಕ್ಕೆ ಒಳಗಾಗಿ ಅವರು ಜೈಲು ವಾಸ ಸಹ ಅನುಭವಿಸಿದರು ಎಂಬ ವಿಷಯ ಗೊತ್ತಾದಲ್ಲಿ ಎಲ್ಲರೂ ಶಾಕ್ ಆಗಲಿದ್ದಾರೆ.

ಹುಲಿ ಉಗುರು ಪ್ರಕರಣದಲ್ಲಿ ಜಾಮೀನು ಪಡೆದಿರುವ ವರ್ತೂರು ಸಂತೋಷ್​ಗೆ ಗುರುತರವಾದ ಷರತ್ತುಗಳನ್ನು ನ್ಯಾಯಾಲಯ ವಿಧಿಸಿಲ್ಲವಾದ್ದರಿಂದ ಅವರು ಮತ್ತೆ ಬಿಗ್​ಬಾಸ್ ಮನೆಗೆ ಬಂದಿದ್ದಾರೆ ಎನ್ನಲಾಗುತ್ತಿದ್ದು, ಸೋಮವಾರದ ಎಪಿಸೋಡ್​ನಲ್ಲಿ ವರ್ತೂರು ಸಂತೋಷ್ ಅವರು ಕಾಣಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಲರ್ಸ್​ನವರು ಪ್ರೋಮೋ ಬಿಡುಗಡೆ ಮಾಡಿದ ಬಳಿಕವಷ್ಟೆ ಈ ಬಗ್ಗೆ ಖಾತ್ರಿ ಸಿಗಲಿದೆ. ಬಿಗ್​ಬಾಸ್ ಕನ್ನಡ ಸೀಸನ್ 10, ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:45 pm, Sun, 29 October 23