
ಬಿಗ್ಬಾಸ್ ಕನ್ನಡದ ಮೊದಲ ಶೋ ಒಂದು ರೀತಿ ಎವರ್ ಗ್ರೀನ್ ಶೋ. ಇತ್ತೀಚೆಗೆ ಸುದೀಪ್ ಸಹ ಹೇಳಿದಂತೆ ಅದೊಂದು ಅದ್ಭುತವಾದ ಆರಂಭ. ಯಾರಿಗೂ ಏನು ಮಾಡಬೇಕೋ ತಿಳಿಯದು ಆದರೆ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದರು. ಶೋಕ್ಕೆ ಅದ್ಭುತ ಆರಂಭ ದೊರಕಿಸಿಕೊಟ್ಟರು. ಆ ಶೋನಲ್ಲಿ ವಿಜಯ್ ರಾಘವೇಂದ್ರ ವಿಜೇತರಾಗಿದ್ದರು. ಅರುಣ್ ಸಾಗರ್ ರನ್ನರ್ ಅಪ್ ಆದರು.
ಮೊದಲ ಸೀಸನ್ ರೀತಿಯೇ ಕೆಲ ದೊಡ್ಡ ಹೆಸರುಗಳು ಬಿಗ್ಬಾಸ್ ಕನ್ನಡ ಸೀಸನ್ 2ರಲ್ಲೂ ಇತ್ತು. ಮಯೂರ್ ಪಟೇಲ್, ಆದಿ ಲೋಕೇಶ್, ಹರ್ಷಿಕಾ ಪೂಣಚ್ಚ, ಸೃಜನ್ ಲೋಕೇಶ್, ನೀತು ಶೆಟ್ಟಿ, ಶಕೀಲಾ ಹೀಗೆ ದೊಡ್ಡ ಹೆಸರುಗಳಿದ್ದವು. ಆದರೆ ಕೊನೆಗೆ ಗೆದ್ದಿದ್ದ ಅಕುಲ್ ಬಾಲಾಜಿ.
ಮೂರನೇ ಸೀಸನ್ನಲ್ಲಿ ಸಾಕಷ್ಟು ಡ್ರಾಮಾ ನಡೆದಿತ್ತು. ಆ ಶೋನಲ್ಲಿ ಹುಚ್ಚಾ ವೆಂಕಟ್ ಭಾಗಿ ಆಗಿದ್ದರು. ನಟಿ ಶ್ರುತಿ, ಮಾಸ್ಟರ್ ಆನಂದ್, ಪೂಜಾ ಗಾಂಧಿ, ಚಂದನ್ ಇನ್ನೂ ಕೆಲವು ಪ್ರಮುಖರು ಭಾಗಿ ಆಗಿದ್ದರು. ತಮಾಷೆಯಿಂದ ಕೂಡಿದ್ದ ಆ ಶೋನಲ್ಲಿ ಶ್ರುತಿ ವಿಜೇತರಾಗಿದ್ದರು.
ಬಿಗ್ಬಾಸ್ ಸೀಸನ್ 4, ಪ್ರೇಕ್ಷಕರು ಬಹು ಸಮಯ ನೆನಪಿಟ್ಟುಕೊಂಡಿದ್ದ ಶೋ. ಈ ಶೋನಿಂದಲೇ ಕನ್ನಡ ಮನೊರಂಜನಾ ಲೋಕಕ್ಕೆ ‘ಒಳ್ಳೆ ಹುಡುಗ ಪ್ರಥಮ್’ ಪರಿಚಯ ಆದದ್ದು. ಈ ಶೋನಲ್ಲಿ ಪ್ರಥಮ್ ವಿನ್ನರ್ ಆದರೆ ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದರು.
ಬಿಗ್ಬಾಸ್ ಕನ್ನಡ ಸೀಸನ್ 5 ಸಾಕಷ್ಟು ಗ್ಲಾಮರ್, ಸಂಗೀತ ಇದ್ದ ಶೋ. ಈ ಸೀಸನ್ನಲ್ಲಿ ಕೆಲ ಜಗಳಗಳು ಸಹ ಆದವು. ಈ ಸೀಸನ್ನಲ್ಲಿ ಚಂದನ್ ಗೌಡ ವಿನ್ನರ್ ಆದರೆ ಸಾಮಾನ್ಯನಾಗಿ ಒಳಗೆ ಹೋಗಿದ್ದ ದಿವಾಕರ್ ರನ್ನರ್ ಅಪ್ ಆದರು. ಶೋನಲ್ಲಿ ನಿವೇದಿತಾ ಸಹ ಭಾಗಿ ಆಗಿದ್ದರು.
ಬಿಗ್ಬಾಸ್ ಕನ್ನಡ ಸೀಸನ್ 6, ಸುದೀಪ್ ಅವರು ಹೇಳುವಂತೆ ಆ ಸೀಸನ್ ಅವರಿಗೆ ತುಸು ಕಷ್ಟಕರವಾದ ಶೋ ಆಗಿತ್ತು. ಆದರೆ ಆ ಶೋನಲ್ಲಿ ಸಾಮಾನ್ಯನಾಗಿ ಎಂಟ್ರಿ ಕೊಟ್ಟಿದ್ದ ಕೃಷಿಕ ಎಂದೇ ಪರಿಚಯಿಸಿಕೊಂಡಿದ್ದ ಶಶಿ ವಿನ್ನರ್ ಆಗಿದ್ದರು.
ಬಿಗ್ಬಾಸ್ ಕನ್ನಡ ಸೀಸನ್ 7 ಸುದೀಪ್ ಅವರ ಬಹಳ ಮೆಚ್ಚಿನ ಸೀಸನ್ ಅಂತೆ. ಅವರೇ ಹೇಳಿಕೊಂಡಿರುವಂತೆ ಏಳನೇ ಸೀಸನ್ ಅವರು ಖುಷಿ-ಖುಷಿಯಾಗಿ ನಡೆಸಿಕೊಟ್ಟರಂತೆ. ಈ ಸೀಸನ್ನಲ್ಲಿ ಶೈನ್ ಶೆಟ್ಟಿ, ವಾಸುಕಿ ವೈಭವ್, ದೀಪಿಕಾ ಇನ್ನೂ ಹಲವರು ಇದ್ದರು. ವಾಸುಕಿ ಈ ಸೀಸನ್ನಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ಆದರೆ ಕೊನೆಗೆ ಗೆದ್ದಿದ್ದು ಶೈನ್ ಶೆಟ್ಟಿ.
ಬಿಗ್ಬಾಸ್ ಕನ್ನಡ 8 ಸಾಕಷ್ಟು ತಮಾಷೆ, ಜಗಳ, ಮನೊರಂಜನೆಯಿಂದ ಕೂಡಿದ್ದ ಶೋ ಆಗಿತ್ತು. ಈ ಶೋನಲ್ಲಿ ಮೊದಲಿಗೆ ಹಾಸ್ಯನಟನೊಬ್ಬ ವಿಜೇತರಾಗಿದ್ದು ವಿಶೇಷ. ಈ ಶೋನಲ್ಲಿ ಭಾಗವಹಿಸಿದ್ದ ಮಂಜು ಪಾವಗಡ ಶೋ ಗೆದ್ದರು. ಕೋವಿಡ್ ಕಾರಣಕ್ಕೆ ಈ ಶೋ ಅನ್ನು ಎರಡು ಬಾರಿ ಮಾಡಲಾಗಿದ್ದು ಸಹ ಒಂದು ವಿಶೇಷ.
ಬಿಗ್ಬಾಸ್ ಕನ್ನಡ ಸೀಸನ್ 9 ಸಾಕಷ್ಟು ವಿಶೇಷವಾದ ಶೋ. ಒಟಿಟಿಯಲ್ಲಿ ಫಿನಾಲೆ ತಲುಪಿದ ಕೆಲವರನ್ನು ಟಿವಿ ಶೋಗೆ ಕರೆತರಲಾಗಿತ್ತು. ವಿಶೇಷವೆಂದರೆ ಒಟಿಟಿಯಲ್ಲಿ ಗೆದ್ದವರೇ ಮತ್ತೆ ಟಿವಿ ಶೋನಲ್ಲೂ ಫಿನಾಲೆಗೆ ಬಂದರು. ಈ ಶೋನಲ್ಲಿ ರೂಪೇಶ್ ಶೆಟ್ಟಿ ವಿಜೇತರಾದರೆ ರಾಕೇಶ್ ಅಡಿಗ ರನ್ನರ್ ಅಪ್ ಆದರು. ಸಾಕಷ್ಟು ಮನರಂಜನೆ ಇದ್ದ ಶೋ ಇದಾಗಿತ್ತು.
ಬಿಗ್ಬಾಸ್ ಕನ್ನಡ 10 ಭರ್ಜರಿ ಪೈಪೋಟಿ, ಜಗಳ ಇದ್ದ ಶೋ ಇದಾಗಿತ್ತು. ಸಂಗೀತ ಮತ್ತು ವಿನಯ್ ನಡುವಿನ ವೈರತ್ವ ರಾಜ್ಯದಾದ್ಯಂತ ಚರ್ಚೆ ಆಗಿತ್ತು. ಈ ಶೋ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಶೋನಲ್ಲಿ ಫಿನಾಲೆ ತಲುಪಿದ್ದು ಡ್ರೋನ್ ಪ್ರತಾಪ್ ಮತ್ತು ಕಾರ್ತಿಕ್. ಅಂತಿಮವಾಗಿ ಗೆದ್ದಿದ್ದು ಕಾರ್ತಿಕ್.
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದರು ಸಹ. ಕೆಲವರು ಎವಿಕ್ಟ್ ಸಹ ಆದರು. ಎರಡು ವಾರದ ಬಳಿಕ ಹನುಮಂತನನ್ನು ಶೋಗೆ ಕರೆತರಲಾಯ್ತು. ಜನಪದ ಕಲಾವಿದ ಹನುಮಂತ ಶೋನ ದಿಕ್ಕನ್ನೆ ಬದಲಿಸಿದ್ದು ಮಾತ್ರವಲ್ಲ ವಿನ್ನರ್ ಆಗಿ ಸಹ ಹೊರಹೊಮ್ಮಿದರು.
ಬಿಗ್ಬಾಸ್ ಕನ್ನಡ ಸೀಸನ್ 12 ಸಂಪೂರ್ಣ ಗಿಲ್ಲಿ ಮಯ ಆಗಿತ್ತು. ಗಿಲ್ಲಿ ಮಾಡಿದ್ದೆಲ್ಲ ವೈರಲ್ ಆಯ್ತು. ಗಿಲ್ಲಿ ಮತ್ತು ಕಾವ್ಯಾ ಜೋಡಿಗೆ ದೊಡ್ಡ ಅಭಿಮಾನಿ ವರ್ಗವೇ ಹೊರಗೆ ಹುಟ್ಟಿಕೊಂಡಿತ್ತು. ಬಹುತೇಕ ಎಲ್ಲರ ನಿರೀಕ್ಷೆಯಂತೆ ಗಿಲ್ಲಿ ಈ ಶೋನ ವಿಜೇತರಾದರು. ಈಗ ಹೀರೋ ಸಹ ಆಗಿದ್ದಾರೆ.