
ನಟ ತ್ರಿವಿಕ್ರಂ (Trivikram) ಅವರು ‘ಬಿಗ್ ಬಾಸ್’ಗೆ ಹೋಗಿ ರನ್ನರ್ ಅಪ್ ಆಗಿ ಬಂದಿದ್ದಾರೆ. ಹಳ್ಳಿ ಹೈದ ಹನುಮಂತ ಎದುರು ಅವರು ಸೋಲಬೇಕಾಯಿತು. ಹಾಗಂತ ತ್ರಿವಿಕ್ರಂ ಅವರಿಗೆ ಕಡಿಮೆ ಏನೂ ವೋಟ್ ಬಿದ್ದಿರಲಿಲ್ಲ. ಅವರಿಗೆ ಬರೋಬ್ಬರಿ 2 ಕೋಟಿ ವೋಟ್ಗಳು ಬಿದ್ದಿದ್ದವು. ಈಗ ಅವರು ವೋಟ್ ಹಾಕಿದ ಅಭಿಮಾನಿಗಳಿಗೆ ಅವಮಾನ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು, ಅವರು ನೀಡಿದ ಸಂದರ್ಶನ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಕ್ಲಿಪ್ ಹರಿದಾಡುತ್ತಿದ್ದು, ಚರ್ಚೆ ಹುಟ್ಟುಹಾಕಿದೆ.
ತ್ರಿವಿಕ್ರಂ ಅವರು ‘ಬಾಸ್ ಟಿವಿ’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ಒಂದನ್ನು ನೀಡಿದ್ದರು. ಈ ಸಂದರ್ಶನದ ಕೆಲವು ಕ್ಲಿಪ್ಗಳು ಟ್ರೋಲ್ ಪೇಜ್ಗಳಲ್ಲಿ ವೈರಲ್ ಆಗಿದೆ. ಅದೇ ರೀತಿ ಅವರು ವೋಟ್ ಹಾಕಿದವರಿಗೆ ಅವಮಾನ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ‘ಆಟ ಮುಗಿದ ಮೇಲೆ ನೈಜ ಬಣ್ಣ ಹೊರ ಬರುತ್ತಿದೆ’ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಏನು ನೋಡೋಣ.
‘ಹೊರ ಬಂದ ಮೇಲೆ ಸಿಕ್ಕಿದರೆಲ್ಲ ವೋಟ್ ಹಾಕಿಸಿದ್ದೇನೆ ಅನ್ನೋಕೆ ಆರಂಭಿಸಿದರು. ವೋಟ್ ಹಾಕಿಸಿದೀಯಾ ಓಕೆ. ಆದರೆ, ಕೊನೆವರೆಗೂ ನನ್ನ ಏಕೆ ಕರೆತಂದೆ? ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ ಮಾತ್ರ ನೀವು ಸ್ಟೇಟಸ್ ಹಾಕೋದು. ಇಷ್ಟು ದಿನ ಕಾಣಿಸದ ಕೆಎಲ್ ರಾಹುಲ್ ಈಗ ಕಾಣಿಸಿಕೊಳ್ಳುತ್ತಿದ್ದಾನೆ ಎಂದರೆ 93 ಅನ್ನೋದು ಮ್ಯಾಟರ್ ಆಗುತ್ತದೆ’ ಎಂದರು ತ್ರಿವಿಕ್ರಂ.
‘ನಿಮಗೆ ಬೇಕಿರೋದು ಪ್ರೆಸೆಂಟ್. ನಿನಗೆ ಹೆಸರು ಬರುತ್ತದೆ ಎಂದರೆ ಸಪೋರ್ಟ್ ಮಾಡ್ತೀರಿ. ಅದಕ್ಕೆ ಕೆಲಸ ಮಾಡಿದವನು ನಾನು. 120 ದಿನ ಮೊಬೈಲ್ ಇಲ್ಲ, ಪಾಲಕರು ಇಲ್ಲ, ಫ್ರೆಂಡ್ಸ್ ಇಲ್ಲ. ದಿನವೂ ವೈರಿಗಳ ಜೊತೆಯೇ ಇರಬೇಕು. ಕೆಲಸ ನಾನು ಮಾಡಿದ್ನಾ? ನೀನು ಮಾಡಿದ್ಯಾ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಸಂಬಂಧ ಈಗ ಹೇಗಿದೆ? ಇಲ್ಲಿದೆ ಉತ್ತರ
‘ದಿನ ಎರಡು ಫೋನ್, ಟೆನ್ಶನ್ ಆದ್ರೆ ದಮ್, ಇನ್ನೂ ಟೆನ್ಶನ್ ಆದ್ರೆ ಎಣ್ಣೆ, ಇನ್ನೂ ಟೆನ್ಶನ್ ಆದ್ರೆ ಫ್ರೆಂಡ್ಸ್. ಅದಕ್ಕೂ ಮೇಲೆ ಟೆನ್ಶನ್ ಆದ್ರೆ ಟ್ರಿಪ್. ಇದೆಲ್ಲ ಇದ್ದಿದ್ದು ಯಾರಿಗೆ? ಆಚೆ ಇದ್ದವನಿಗೆ’ ಎಂದು ಅವರು ಹೇಳಿದ್ದಾರೆ. ಸದ್ಯ ಈ ಹೇಳಿಕೆ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ. ‘ಈ ಹೇಳಿಕೆ ನೀಡಬಾರದಿತ್ತು’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ತ್ರಿವಿಕ್ರಂ ಕ್ಷಮೆಯಾಚಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Sun, 20 April 25