ವಾಪಸ್ ಕರೆಸಬೇಕು ಅಂದ್ರೆ ಹುಚ್ಚ ವೆಂಕಟ್​ನೂ ಕರೆಸಬೇಕಾಗತ್ತೆ, ಅದು ಆಗಲ್ಲ: ಸುದೀಪ್ ಖಡಕ್ ನಿರ್ಧಾರ

|

Updated on: Oct 20, 2024 | 11:11 PM

ಜಗದೀಶ್ ಮಾಡಿದ ಅವಾಂತರದಿಂದ ಇಡೀ ಬಿಗ್ ಬಾಸ್ ಮನೆಯ ವಾತಾವರಣ ಹಾಳಾಗಿದೆ. ಅವರ ಮೇಲೆ ಕೈ ಮಾಡಿದ್ದಕ್ಕಾಗಿ ರಂಜಿತ್ ಅವರನ್ನು ಹೊರಗೆ ಹಾಕಲಾಗಿದೆ. ಆದರೆ ತಮ್ಮನ್ನು ಮತ್ತೆ ಬಿಗ್ ಬಾಸ್​ ಮನೆಗೆ ಕರೆಸಿಕೊಳ್ಳಿ ಎಂದು ಜಗದೀಶ್ ಅವರು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಅವರು ತಮ್ಮ ನಿರ್ಧಾರ ಏನು ಎಂಬುದನ್ನು ತಿಳಿಸಿದ್ದಾರೆ.

ವಾಪಸ್ ಕರೆಸಬೇಕು ಅಂದ್ರೆ ಹುಚ್ಚ ವೆಂಕಟ್​ನೂ ಕರೆಸಬೇಕಾಗತ್ತೆ, ಅದು ಆಗಲ್ಲ: ಸುದೀಪ್ ಖಡಕ್ ನಿರ್ಧಾರ
ಹುಚ್ಚ ವೆಂಕಟ್, ಜಗದೀಶ್, ಕಿಚ್ಚ ಸುದೀಪ್​
Follow us on

ವಿವಾದಗಳಿಂದಲೇ ತುಂಬಿರುವ ಬಿಗ್ ಬಾಸ್​ ಕಾರ್ಯಕ್ರಮದ ನಿರೂಪಣೆ ಮಾಡುವುದು ಸುಲಭವೇ ಅಲ್ಲ. ಅದರಲ್ಲೂ ದೊಡ್ಮನೆ ಒಳಗೆ ಇರುವ ಸ್ಪರ್ಧಿಗಳು ಮಿತಿ ಮೀರಿ ನಡೆದುಕೊಂಡಾಗ ಅವರನ್ನು ದಾರಿಗೆ ತರುವುದು ಕೂಡ ಕಷ್ಟದ ಕೆಲಸ. ಯಾರಿಗೂ ಅನ್ಯಾಯ ಆಗದೇ ರೀತಿಯಲ್ಲಿ ಸುದೀಪ್ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಈ ಸೀಸನ್​ನಲ್ಲಿ ಒಂದಷ್ಟು ಟ್ವಿಸ್ಟ್​ಗಳು ಎದುರಾಗಿವೆ. ಜಗದೀಶ್ ಅವರನ್ನು ಮಿಡ್ ವೀಕ್​ನಲ್ಲೇ ಹೊರಗೆ ಹಾಕಲಾಗಿದೆ. ರಂಜಿತ್ ಕೂಡ ನಿಯಮ ಉಲ್ಲಂಘಿಸಿ ಎಲಿಮಿನೇಟ್ ಆಗಿದ್ದಾರೆ. ಆದರೆ ತಮಗೆ ಇನ್ನೊಂದು ಅವಕಾಶ ಬೇಕು ಎಂದು ಜಗದೀಶ್ ಕೇಳಿದ್ದಾರೆ.

ಬಿಗ್ ಬಾಸ್​ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿ ಎಲಿಮಿನೇಟ್ ಆದವರನ್ನು ಮತ್ತೆ ವೇದಿಕೆಗೆ ಕರೆಸಿ ಸುದೀಪ್ ಅವರು ಮಾತನಾಡುವುದಿಲ್ಲ. ಆದರೆ ಈ ಬಾರಿ ಜಗದೀಶ್ ಅವರನ್ನು ವಿಡಿಯೋ ಕಾಲ್ ಮೂಲಕ ಸುದೀಪ್ ಅವರು ಮಾತನಾಡಿಸಿದರು. ತಾವು ಮಾಡಿದ ತಪ್ಪಿಗೆ ಜಗದೀಶ್ ಅವರು ಕ್ಷಮೆ ಕೇಳಿದ್ದಾರೆ. ಅಲ್ಲದೇ ಸಾಧ್ಯವಾದರೆ ತಮ್ಮನ್ನು ಪುನಃ ಬಿಗ್ ಬಾಸ್​ ಆಟಕ್ಕೆ ಸೇರಿಸಿಕೊಳ್ಳಿ ಎಂದು ಜಗದೀಶ್ ಅವರು ಮನವಿ ಮಾಡಿದ್ದಾರೆ.

ಈ ಬಾರಿ ಜಗದೀಶ್ ಅವರು ಎಲಿಮಿನೇಟ್​ ಆಗಿದ್ದಕ್ಕೆ ಕೇವಲ ಅವರೊಬ್ಬರ ತಪ್ಪು ಮಾತ್ರ ಕಾರಣವಲ್ಲ. ಬೇರೆಯವರ ಪ್ರಚೋಚನೆ ಕೂಡ ಕಾರಣ ಆಗಿದೆ. ಅಲ್ಲದೇ, ಇನ್ನುಳಿದವರು ಕೂಡ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಾದವನ್ನು ಕೂಡ ಕೇಳಬೇಕು ಎಂಬ ಉದ್ದೇಶದಿಂದ ವಿಡಿಯೋ ಕಾಲ್ ಮೂಲಕ ಅವರನ್ನು ಮಾತನಾಡಿಸಲಾಗಿದೆ. ಈ ವೇಳೆ ಅವರು ಮತ್ತೆ ಬಿಗ್ ಬಾಸ್​ ಮನೆಯ ಒಳಗೆ ಬರುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ವಿಡಿಯೋ ಬಹಳ ಕೆಟ್ಟದಾಗಿದೆ: ಚೈತ್ರಾ ಮುಖಕ್ಕೆ ಹೊಡೆದಂತೆ ಮಾತಾಡಿದ ಸುದೀಪ್

ಜಗದೀಶ್ ಅವರು ಮತ್ತೆ ಬಿಗ್ ಬಾಸ್​ ಮನೆಗೆ ಕಾಲಿಡುತ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಿಗೆ ಇದೆ. ಅದಕ್ಕೆ ಸುದೀಪ್ ಅವರು ತಮ್ಮ ನಿರ್ಧಾರ ತಿಳಿಸಿದ್ದಾರೆ. ತಪ್ಪು ಮಾಡಿ ಮನೆಯಿಂದ ಹೊರಗೆ ಹಾಕಿಸಿಕೊಂಡವರನ್ನು ಪುನಃ ಮನೆಯ ಒಳಗೆ ಕರೆಸಿಕೊಳ್ಳಬೇಕು ಎಂಬುದಾದರೆ 3ನೇ ಸೀಸನ್​ನಲ್ಲಿ ಹಲ್ಲೆ ಮಾಡಿ ಹೊರಹಾಕಿಸಿಕೊಂಡ ಹುಚ್ಚ ವೆಂಕಟ್​ ಅವರನ್ನು ಕೂಡ ಮತ್ತೆ ಕರೆಸಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲ. ಅದನ್ನು ಸುದೀಪ್ ಅವರು ಸ್ಪಷ್ಟಪಡಿಸಿದ್ದಾರೆ. ‘ಹೋಗಿರುವವರ ಬಗ್ಗೆ ಜಾಸ್ತಿ ಮಾತಾಡಲ್ಲ’ ಎನ್ನುವ ಮೂಲಕ ಸುದೀಪ್ ಅವರು ಎಪಿಸೋಡ್ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.