ಗಿಲ್ಲಿ ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದ ಕಾವ್ಯ: ಅಧಿಕಾರ ಬಳಸಿ ಕಿತ್ತೊಗೆದ ರಜತ್, ಚೈತ್ರಾ

ಕ್ಯಾಪ್ಟನ್ ಧನುಷ್ ಅವರ ಪ್ರಕಾರ ಕಾವ್ಯ ನಂಬರ್ ಒನ್ ಆದರು. ಆದರೆ ರಜತ್, ಚೈತ್ರಾ ತಕರಾರು ತೆಗೆದರು. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ನಂಬರ್ 2 ಸ್ಥಾನ ಪಡೆದಿದ್ದಾರೆ. ಅದನ್ನು ಹಲವು ಸ್ಪರ್ಧಿಗಳು ವಿರೋಧಿಸಿದರು. ತಮ್ಮ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಲ್ಲ ಸ್ಪರ್ಧಿಗಳ ನಡುವೆ ವಾದ ಪ್ರತಿವಾದ ನಡೆಯಿತು.

ಗಿಲ್ಲಿ ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದ ಕಾವ್ಯ: ಅಧಿಕಾರ ಬಳಸಿ ಕಿತ್ತೊಗೆದ ರಜತ್, ಚೈತ್ರಾ
Kavya Shaiva, Gilli Nata

Updated on: Dec 01, 2025 | 10:42 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಯಾರು ಫೈನಲಿಸ್ಟ್ ಆಗುತ್ತಾರೆ? ಯಾರು ಟ್ರೋಫಿ ಗೆಲ್ಲುತ್ತಾರೆ? ಯಾರು ಶೀಘ್ರದಲ್ಲೇ ಎಲಿಮಿನೇಟ್ ಆಗುತ್ತಾರೆ ಎಂಬುದರ ಲೆಕ್ಕಾಚಾರ ಶುರುವಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ಬರಲಿದೆ. ಅದಕ್ಕಾಗಿ ಸ್ಪರ್ಧಿಗಳ ನಡುವಿನ ಪೈಪೋಟಿ ಜಾಸ್ತಿ ಆಗಿದೆ. ಈಗ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿದ್ದಾರೆ. ಈಗಾಗಲೇ ಇರುವ ಸ್ಪರ್ಧಿಗಳಲ್ಲಿ ಯಾರಿಗೆ ಹೆಚ್ಚು ರ‍್ಯಾಂಕಿಂಗ್ ಇದೆ ಎಂಬುದರ ಚರ್ಚೆ ಡಿಸೆಂಬರ್ 1ರ ಸಂಚಿಕೆಯಲ್ಲಿ ನಡೆದಿದೆ. ಗಿಲ್ಲಿ ನಟ (Gilli Nata) ಅವರು ನಂಬರ್ 2 ಸ್ಥಾನ ಪಡೆದಿದ್ದಾರೆ.

ಧನುಷ್ ಅವರು ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ರಜತ್ ಮತ್ತು ಚೈತ್ರಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಧನುಷ್ ಅವರು ರ‍್ಯಾಂಕಿಂಗ್ ನೀಡಿದರು. ಕಾವ್ಯ ಶೈವ ಅವರಿಗೆ ಧನುಷ್ ನಂಬರ್ 1 ಸ್ಥಾನ ನೀಡಿದರು. ಈ ನಿರ್ಧಾರದಿಂದ ಎಲ್ಲರಿಗೂ ಅಸಮಾಧಾನ ಆಯಿತು. ಬರೀ ಗಿಲ್ಲಿ ಜೊತೆ ಬೆರೆಯುವ ಕಾವ್ಯ ಅವರಿಗೆ ನಂಬರ್ 1 ಸ್ಥಾನ ನೀಡಿದ್ದು ಬಹುತೇಕರಿಗೆ ಸರಿ ಎನಿಸಲಿಲ್ಲ.

ಬಳಿಕ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ ಮತ್ತು ರಜತ್ ಅವರಿಗೆ ಬಿಗ್ ಬಾಸ್ ಒಂದು ಅಧಿಕಾರ ನೀಡಿದರು. ಇಬ್ಬರೂ ಚರ್ಚಿಸಿ ಯಾವುದಾದರೂ ಒಂದು ಸ್ಥಾನವನ್ನು ಅದಲು ಬದಲು ಮಾಡುವಂತೆ ಸೂಚಿಸಲಾಯಿತು. ಕಾವ್ಯ ಅವರನ್ನು ನಂಬರ್ ಸ್ಥಾನದಿಂದ ಕಿತ್ತೊಗೆಯಲಾಯಿತು. 6ನೇ ಸ್ಥಾನದಲ್ಲಿ ಇದ್ದ ರಘು ಅವರನ್ನು ನಂಬರ್ 1 ಸ್ಥಾನಕ್ಕೆ ತರಲಾಯಿತು. ಆಗ ಕಾವ್ಯ ಅವರಿಗೆ 6ನೇ ಸ್ಥಾನ ನೀಡಲಾಯಿತು.

ಗಿಲ್ಲಿ ನಟ ಅವರು ನಂಬರ್ 2 ಸ್ಥಾನವನ್ನು ಕಾಪಾಡಿಕೊಂಡರು. ಗಿಲ್ಲಿಗೆ ಆ ಸ್ಥಾನ ನೀಡಿದ್ದಕ್ಕೆ ಹಲವರಿಗೆ ಅಸಮಾಧಾನ ಆಯಿತು. ಮನೆಯ ಕೆಲಸಗಳಲ್ಲಿ ಗಿಲ್ಲಿ ಸಕ್ರಿಯವಾಗಿ ಇರುವುದಿಲ್ಲ ಎಂಬ ಆರೋಪವನ್ನು ಎಲ್ಲರೂ ಮಾಡಿದರು. ಆದರೆ ತಾವು ಇಲ್ಲಿ ಮನೆ ಕೆಲಸ ಮಾಡೋಕೆ ಬಂದಿಲ್ಲ ಎಂದು ಗಿಲ್ಲಿ ಅವರು ವಾದ ಮಾಡಿದರು. ರಕ್ಷಿತಾ ಶೆಟ್ಟಿ ಕೂಡ ಗಿಲ್ಲಿಯ ಸ್ಥಾನವನ್ನು ವಿರೋಧಿಸಿದರು.

ಇದನ್ನೂ ಓದಿ: ಗಿಲ್ಲಿ-ರಘು ಗೆಳೆತನದಲ್ಲಿ ಬಿರುಕು; ಜಗಳ ತಪ್ಪಿಸಲು ಇಡೀ ಮನೆ ಬರಬೇಕಾಯ್ತು

ಇಷ್ಟು ವಾರಗಳ ಕಾಲ ಕಾವ್ಯ ಅವರು ನಾಮಿನೇಷನ್​ನಿಂದ ಪಾರಾಗುತ್ತಿದ್ದರು. ಆದರೆ ಈ ವಾರ ಅವರು ಕೆಲವರ ಟಾರ್ಗೆಟ್ ಆಗಿದ್ದಾರೆ. ಬಿಗ್ ಬಾಸ್ ಆರಂಭ ಆದಾಗಿನಿಂದ ಕಾವ್ಯ ಮತ್ತು ಗಿಲ್ಲಿ ಅವರು ಆಪ್ತವಾಗಿದ್ದಾರೆ. ಅವರಿಬ್ಬರೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಅದನ್ನೇ ಕಾರಣವನ್ನಾಗಿ ಇಟ್ಟುಕೊಂಡು ಎಲ್ಲ ಸದಸ್ಯರು ಕಾವ್ಯ ಅವರನ್ನು ಟೀಕಿಸುತ್ತಿದ್ದಾರೆ. ಒಂದು ವೇಳೆ ಕಾವ್ಯ ಅವರು ಆಟದ ಶೈಲಿ ಬದಲಾಯಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.