‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಪ್ರೇಮಕಾವ್ಯ’; ಆ.4ರಂದು ಪ್ರಸಾರ ಆರಂಭ
‘ಕಲರ್ಸ್ ಕನ್ನಡ’ ವಾಹಿನಿಯ ‘ಪ್ರೇಮಕಾವ್ಯ’ ಧಾರಾವಾಹಿಗೆ ರವೀನ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರಿಯಾ ಜೆ. ಆಚಾರ್, ರಾಘವೇಂದ್ರ, ವಿಕಾಸ್, ವೈಷ್ಣವಿ ಮುಂತಾದವರಿಗೆ ಈ ಸೀರಿಯಲ್ನಲ್ಲಿ ಪ್ರಮುಖ ಪಾತ್ರಗಳಿವೆ. ಆಗಸ್ಟ್ 4ರಿಂದ ‘ಪ್ರೇಮಕಾವ್ಯ’ ಧಾರಾವಾಹಿ ಪ್ರಸಾರ ಆರಂಭ ಆಗಲಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ (Kannada Serial) ನಡುವೆ ಸಖತ್ ಪೈಪೋಟಿ ಇದೆ. ಪ್ರೇಕ್ಷಕರನ್ನು ಸೆಳೆಯಲು ವಾಹಿನಿಗಳು ಹೊಸ ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಈಗ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಸೀರಿಯಲ್ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆದಿದೆ. ‘ಪ್ರೇಮ ಕಾವ್ಯ’ ಎಂಬುದು ಈ ಧಾರಾವಾಹಿಯ ಶೀರ್ಷಿಕೆ. ಆಗಸ್ಟ್ 4ರ ಸೋಮವಾರ ಸಂಜೆ 6.30ಕ್ಕೆ ಈ ಧಾರಾವಾಹಿಯ ಮೊದಲ ಎಪಿಸೋಡ್ ಪ್ರಸಾರ ಆಗಿದೆ. ಈ ಸೀರಿಯಲ್ ವಿಶೇಷತೆ ಏನು? ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ ಎಂಬಿತ್ಯಾದಿ ಮಾಹಿತಿ ಹಂಚಿಕೊಳ್ಳಲು ಇತ್ತೀಚೆಗೆ ‘ಪ್ರೇಮ ಕಾವ್ಯ’ (Prema Kavya) ತಂಡದಿಂದ ಸುದ್ದಿಗೋಷ್ಠಿ ಮಾಡಲಾಯಿತು.
‘ಪ್ರೇಮಕಾವ್ಯ’ ಧಾರಾವಾಹಿಯಲ್ಲಿ ಎರಡು ಜೋಡಿಗಳ ಪ್ರೇಮಕಥೆ ಇದೆ. ಪ್ರಿಯಾ ಜೆ. ಆಚಾರ್, ರಾಘವೇಂದ್ರ, ವಿಕಾಸ್, ವೈಷ್ಣವಿ ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಪ್ರೇಮ ಎಂಬ ಪಾತ್ರವನ್ನು ಪ್ರಿಯಾ ಜೆ. ಆಚಾರ್ ನಿಭಾಯಿಸುತ್ತಿದ್ದಾರೆ. ಕಾವ್ಯ ಎಂಬ ಪಾತ್ರವನ್ನು ವೈಷ್ಣವಿ ಮಾಡುತ್ತಿದ್ದಾರೆ. ರವೀನ್ ಕುಮಾರ್ ಅವರು ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶನ ಮಾಡುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಿಯಾ ಜೆ. ಆಚಾರ್ ಅವರು ಮಾತನಾಡಿ, ‘ನಾನು ಈ ಸೀರಿಯಲ್ನಲ್ಲಿ ಪ್ರೇಮ ಎಂಬ ಪಾತ್ರವನ್ನು ಮಾಡುತ್ತಿದ್ದೇನೆ. ತಂದೆ, ತಾಯಿ ಮತ್ತು ತಂಗಿ ಇದೇ ನನ್ನ ಒಂದು ಪುಟ್ಟ ಪ್ರಪಂಚ. ನಾನು ಹೆಚ್ಚು ವಿದ್ಯಾವಂತೆಯಲ್ಲ. ಆದರೆ ತಂಗಿಗೆ ಸೈಂಟಿಸ್ಟ್ ಆಗಬೇಕೆಂಬ ಆಸೆ. ಅವಳ ಕನಸಿಗೆ ಸಹಕಾರ ನೀಡುತ್ತಿರುತ್ತೇನೆ. ಬಾಲ್ಯದ ಗೆಳೆಯ ರಾಮ್ನನ್ನು ಪ್ರೀತಿಸುತ್ತಿರುತ್ತೇನೆ’ ಎಂದು ಮಾಹಿತಿ ಹಂಚಿಕೊಂಡರು.
ನಟಿ ವೈಷ್ಣವಿ ಅವರು ಮಾತನಾಡಿ, ‘ನನ್ನ ಪಾತ್ರದ ಹೆಸರು ಕಾವ್ಯ. ನಾನು ಈ ಸೀರಿಯಲ್ನಲ್ಲಿ ಬಹಳ ವಿದ್ಯಾವಂತೆ. ಬಾಹ್ಯಾಕಾಶ ವಿಜ್ಞಾನಿ ಆಗಬೇಕೆಂಬ ಆಸೆ ಇಟ್ಟುಕೊಂಡಿರುತ್ತೇನೆ. ಹಳ್ಳಿಯಲ್ಲಿ ಹೆಚ್ಚು ಇರಲ್ಲ. ನಗರದಲ್ಲೇ ಹೆಚ್ಚು ವಾಸ್ತವ್ಯ. ಸೌಮ್ಯ ಸ್ವಭಾವದ ಹುಡುಗಿಯ ಪಾತ್ರ’ ಎಂದು ಹೇಳಿದರು. ಈ ಮೊದಲು ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಸಾಕೇತ್ ಎಂಬ ಪಾತ್ರ ಮಾಡಿದ್ದ ರಾಘವೇಂದ್ರ ಅವರು ಈಗ ‘ಪ್ರೇಮಕಾವ್ಯ’ದಲ್ಲಿ ಮಾದೇವ ಎಂಬ ಪಾತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಶೋಗೆ ಮತ್ತೆ ಕಿಚ್ಚ ಸುದೀಪ್ ನಿರೂಪಣೆ
‘ಮಾದೇವನಾಗಿ ಪ್ರೇಕ್ಷಕರ ಮುಂದೆ ಬರಲಿದ್ದೇನೆ. ಮಾತು ಬಾರದ ತಂಗಿ ಇರುತ್ತಾಳೆ. ಅವಳೇ ನನ್ನ ಪ್ರಪಂಚ. ಅಮ್ಮನ ಮಾತೇ ನನಗೆ ವೇದವಾಕ್ಯ. ಕೆಟ್ಟದ್ದರ ಮತ್ತು ಕೆಟ್ಟವರ ವಿರುದ್ಧ ಹೋರಾಡುತ್ತೇನೆ. ಮುಂಗೋಪಿ ಕೂಡ. ಹಾಗಾಗಿ ಎಲ್ಲರೂ ನನ್ನನ್ನು ಕೆಟ್ಟವನನ್ನಾಗಿ ನೋಡುತ್ತಾರೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು ನಟ ರಾಘವೇಂದ್ರ.
‘ಪ್ರೇಮ ಕಾವ್ಯ’ ಸೀರಿಯಲ್ ಮೂಲಕ ನಟ ವಿಕಾಶ್ ಅವರು ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ‘ರಾಮ್ ಎಂಬುದು ನನ್ನ ಪಾತ್ರದ ಹೆಸರು. ಮೃದು ಸ್ವಭಾವದವನು. ವೃತ್ತಿಯಲ್ಲಿ ವೈದ್ಯ’ ಎಂದು ವಿಕಾಸ್ ಹೇಳಿದರು. ಧಾರಾವಾಹಿ ನಿರ್ಮಾಣ ಮತ್ತು ನಿರ್ದೇಶನಕ್ಕೆ ಅವಕಾಶ ಕೊಟ್ಟವರಿಗೆ ರವೀನ್ ಕುಮಾರ್ ಅವರು ಧನ್ಯವಾದ ತಿಳಿಸಿದರು. ಜನರಿಗೆ ಶೀರ್ಷಿಕೆ ಗೀತೆ ಮತ್ತು ಪ್ರೋಮೋ ಇಷ್ಟ ಆಗಿರುವುದು ನಿರ್ದೇಶಕರಿಗೆ ಖುಷಿ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




