KBC 13: ರಣವೀರ್ ನೀಡಿದ್ದ ಮಾತನ್ನು ನಡೆಸಿಕೊಟ್ಟಿಲ್ಲ ಎಂದು ಅಮಿತಾಭ್ ಬಳಿ ದೂರಿದ ದೀಪಿಕಾ; ಅಷ್ಟಕ್ಕೂ ಕಂಪ್ಲೇಂಟ್ ಏನು?
Deepika Padukone: ಕೆಬಿಸಿ 13 ಹಲವಾರು ಕುತೂಹಲಕರ ಸಂಗತಿಗಳನ್ನು ತೆರೆದಿಡುತ್ತಿದೆ. ಈ ವಾರ ಪ್ರಸಾರವಾಗಲಿರುವ ಸೆಲೆಬ್ರಿಟಿ ಸಂಚಿಕೆಯ ನೂತನ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ವಿರುದ್ಧ ಬಿಗ್ಬಿ ಬಳಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಅಮಿತಾಭ್ ಎದುರೇ ಪರಿಹಾರವೂ ಲಭ್ಯವಾಗಿದೆ. ಅಷ್ಟಕ್ಕೂ ದೀಪಿಕಾ ದೂರೇನು? ಮುಂದೆ ಓದಿ.
ಕೌನ್ ಬನೇಗ್ ಕರೋಡ್ಪತಿಯ 13ನೇ ಸೀಸನ್ನ ಸೆಲೆಬ್ರಿಟಿ ಸಂಚಿಕೆಯಲ್ಲಿ ಈ ವಾರ ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕಿ, ನೃತ್ಯ ಸಂಯೋಜಕಿ ಫರ್ಹಾ ಖಾನ್ ಕಾಣಿಸಿಕೊಳ್ಳಲಿದ್ದಾರೆ. ತಾರೆಗಳು ಹಂಚಿಕೊಂಡಿರುವ ಅಚ್ಚರಿಯ ಮಾಹಿತಿಗಳನ್ನು ಒಳಗೊಂಡ ಪ್ರೋಮೊಗಳು ಈಗಾಗಲೇ ವೀಕ್ಷಕರ ಕುತೂಹಲವನ್ನು ಹೆಚ್ಚಿಸಿವೆ. ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಮತ್ತೊಂದು ಪ್ರೋಮೊದಲ್ಲಿ ದೀಪಿಕಾ ತಮ್ಮ ಪತಿ ರಣವೀರ್ ಸಿಂಗ್ ಕುರಿತು ಅಮಿತಾಭ್ಗೆ ದೂರು ನೀಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಅಮಿತಾಭ್ ಬಚ್ಚನ್ ಬಳಿ ಪತಿ ರಣವೀರ್ ಸಿಂಗ್ ಕುರಿತು ದೂರಿರುವ ದೀಪಿಕಾ, ರಣವೀರ್ ಮಾತು ನೀಡಿದಂತೆ ನಡೆದುಕೊಂಡಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಅಷ್ಟಕ್ಕೂ ದೀಪಿಕಾಗೆ ರಣವೀರ್ ಏನೆಂದು ಮಾತುಕೊಟ್ಟಿದ್ದರು ಎಂಬ ಕುತೂಹಲಕ್ಕೆ ದೀಪಿಕಾ ಸ್ವತಃ ಉತ್ತರ ನೀಡಿದ್ದಾರೆ. ರಣವೀರ್ ಸಿಂಗ್ ದೀಪಿಕಾಗೆ ಬೆಳಗಿನ ಉಪಾಹಾರವನ್ನು ತಾವೇ ಕೈಯಾರೆ ಮಾಡಿಕೊಡುತ್ತೇನೆ ಎಂದು ಮಾತು ನೀಡಿದ್ದರಂತೆ. ಆದರೆ ಅದನ್ನು ಇದುವರೆಗೂ ನಡೆಸಿಕೊಟ್ಟಿಲ್ಲ ಎಂಬುದು ದೀಪಿಕಾ ಆರೋಪ. ಈ ಕುರಿತಂತೆ ಅಮಿತಾಭ್ ರಣವೀರ್ಗೆ ಕರೆ ಮಾಡಿ ಸ್ಪಷ್ಟನೆಯನ್ನೂ ಕೇಳಿದ್ದಾರೆ.
ಅಮಿತಾಭ್ ಕರೆಗೆ ಉತ್ತರಿಸಿರುವ ರಣವೀರ್, ದೀಪಿಕಾಗೆ ಮರು ಪ್ರಶ್ನೆಯೊಂದನ್ನು ಎಸೆದಿದ್ದಾರೆ. ‘‘ಶೋಗೆ ತೆರಳಿ ಅಮಿತಾಭ್ಗೆ ನನ್ನ ವಂದನೆಗಳನ್ನು ತಿಳಿಸುವುದನ್ನು ಬಿಟ್ಟು, ನನ್ನ ಕುರಿತೇ ದೂರು ನೀಡಿದ್ದೀಯಲ್ಲಾ’’ ಎಂದ ರಣವೀರ್, ಅಮಿತಾಭ್ ಎದುರೇ ದೀಪಿಕಾಗೆ ಹೊಸ ಭರವಸೆಯನ್ನೂ ನೀಡಿದ್ದಾರೆ. ‘‘ಅಮಿತಾಭ್ ಸರ್ ಹೇಳಿದ ಮೇಲೆ ನಿನಗೆ ನಾನು ಖಂಡಿತವಾಗಿಯೂ ಆಮ್ಲೆಟ್ ತಯಾರಿಸಿ, ತೊಡೆಯ ಮೇಲೆ ಕೂರಿಸಿಕೊಂಡು ತಿನ್ನಿಸುತ್ತೇನೆ’’ ಎಂದಿದ್ದಾರೆ ರಣವೀರ್. ತಕ್ಷಣ ಮಧ್ಯ ಪ್ರವೇಶಿಸಿದ ಫರ್ಹಾ ಖಾನ್, ‘‘ಇಲ್ಲಿ ಅಮಿತಾಭ್ ಇಲ್ಲಿ ಕೇಳಿರುವುದು ತಿಂಡಿಯ ಬಗ್ಗೆ ಮಾತ್ರ, ಹೇಗೆ ತಿನ್ನಿಸುತ್ತೀರಿ ಎಂದಲ್ಲ’’ ಅಂತ ತಮಾಷೆ ಮಾಡಿದ್ದಾರೆ. ಇದನ್ನು ಕೇಳಿದ ಎಲ್ಲರೂ ಮನತುಂಬಿ ನಕ್ಕಿದ್ದಾರೆ.
View this post on Instagram
ಕೌನ್ ಬನೇಗಾ ಕರೋಡ್ಪತಿಯಲ್ಲಿ ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ವಿಶೇಷ ಸಂಚಿಕೆ ಮೂಡಿಬರುತ್ತದೆ. ಅದರಲ್ಲಿ ಖ್ಯಾತ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. ಅವರಿಗೆ ಸ್ಪರ್ಧೆಯ ನಿಯಮಗಳು ತುಸು ಭಿನ್ನವಾಗಿರುತ್ತವೆ. ಅಂದರೆ, ನಿರ್ದಿಷ್ಟ ಸಮಯಾವಕಾಶದಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತಾರೋ ಅಷ್ಟು ಮೊತ್ತವನ್ನು ಅವರು ಪಡೆಯುತ್ತಾರೆ. ಕೆಬಿಸಿಯ 13ನೇ ಸೀಸನ್ನ ಪ್ರಥಮ ಸೆಲೆಬ್ರಿಟಿ ಸಂಚಿಕೆಯಲ್ಲಿ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಅವರು 25 ಲಕ್ಷ ರೂಗಳನ್ನು ಗಳಿಸಿದ್ದರು. ಅದನ್ನು ತಮ್ಮ ಚಾರಿಟಿಗೆ ದಾನ ಮಾಡುವುದಾಗಿ ಈರ್ವರೂ ತಿಳಿಸಿದ್ದರು. ದೀಪಿಕಾ ಹಾಗೂ ಫರ್ಹಾ ಭಾಗವಹಿಸಿದ ಈ ಸಂಚಿಕೆ ಶುಕ್ರವಾರ (ಸೆಪ್ಟೆಂಬರ್ 10) ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ:
ಆರಾಧ್ಯಾಳ ಆನ್ಲೈನ್ ತರಗತಿಗಳಿಗೆ ಸಹಾಯ ಮಾಡುವವರು ಯಾರು?; ಅಮಿತಾಭ್ ಹಂಚಿಕೊಂಡರು ಅಚ್ಚರಿಯ ಮಾಹಿತಿ
ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್ ಖಾನ್; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್ ಖಾನ್ ಬಿಚ್ಚಿಟ್ಟ ರಹಸ್ಯ
(Deepika complaints on Ranveer in front of Amitabh see the hilarious promo of KBC 13)
Published On - 12:08 pm, Tue, 7 September 21