ಕರ್ನಾಟಕ ಮೂಲದ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಅವರು ತಮಿಳು ಹಾಗೂ ತೆಲುಗಿನಲ್ಲಿ ಗುರುತಿಸಿಕೊಂಡಿದ್ದೇ ಹೆಚ್ಚು. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಅವರ ಖಾಸಗಿ ಜೀವನದ ವಿಚಾರದ ಬಗೆಗಿನ ಚರ್ಚೆ ಜೋರಾಗಿತ್ತು. ತಮಿಳು ನಿರ್ದೇಶಕ ಬಾಲಾಜಿ ಮೋಹನ್ (Balaji Mohan) ಜತೆ ಅವರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಈಗ ಧನ್ಯಾ ಬಾಲಕೃಷ್ಣ ಹಾಗೂ ಬಾಲಾಜಿ ಮೋಹನ್ ಮದುವೆ ಆಗಿರುವ ವಿಚಾರ ಅಧಿಕೃತವಾಗಿದೆ.
ಈ ಬಗ್ಗೆ ಬಾಲಾಜಿ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ನಟಿ ಕಲ್ಪಿಕಾ ಗಣೇಶ್ ಅವರು ತಮ್ಮ ಮದುವೆ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ಮಾನ ಹಾನಿ ಮಾಡಿದ್ದಾರೆ ಎಂದು ಬಾಲಾಜಿ ಅವರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ‘ನಾನು ಹಾಗೂ ಧನ್ಯಾ ಬಾಲಕೃಷ್ಣ ಅವರು ಕಳೆದ ಜನವರಿ 23ರಂದು ಮದುವೆ ಆಗಿದ್ದೇವೆ. ಆದರೆ ಕಲ್ಪಿಕಾ ಗಣೇಶ್ ಅವರು ನಮ್ಮ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ. ಇದರಿಂದ ಮಾನ ಹಾನಿ ಆಗಿದೆ’ ಎಂದು ಅರ್ಜಿಯಲ್ಲಿ ಬಾಲಾಜಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆ ಕೋರ್ಟ್ ಕಲ್ಪಿಕಾಗೆ ನಿರ್ದೇಶನ ನೀಡಿದೆ.
ಬಾಲಾಜಿ ಅವರು ಈ ಮೊದಲು ತಮ್ಮ ಬಾಲ್ಯದ ಗೆಳೆತಿಯನ್ನು ಮದುವೆ ಆಗಿದ್ದರು. ಆದರೆ, ಮದುವೆ ಆಗಿ ಒಂದೇ ವರ್ಷಕ್ಕೆ ಇಬ್ಬರೂ ಬೇರೆ ಆದರು. ಹೊಂದಾಣಿಕೆ ಆಗದ ಕಾರಣ ತಾವು ಬೇರೆ ಆಗುತ್ತಿದ್ದೇವೆ ಎಂದು ಬಾಲಾಜಿ ಹೇಳಿದ್ದರು.
ಧನ್ಯಾ ಮೂಲತಃ ಬೆಂಗಳೂರಿನವರು. ಅವರು 2011ರಲ್ಲಿ ತಮಿಳು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ‘ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಹೆಸರಿನ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕೆಲ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 am, Thu, 29 December 22