DK Shivakumar: ವೀಕೆಂಡ್ ವಿತ್ ರಮೇಶ್ ಶೋನ ಸಾಧಕರ ಸೀಟ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್; ವೈರಲ್ ಆಗಿದೆ ಫೋಟೋ
Weekend With Ramesh: ಡಿಕೆ ಶಿವಕುಮಾರ್ ಅವರ ಜೀವನದ ಬಗೆಗಿನ ಅಪರೂಪದ ಸಂಗತಿಗಳನ್ನು ತಿಳಿಯುವ ಸಮಯ ಹತ್ತಿರವಾಗಿದೆ. ಅವರ ಕುಟುಂಬದವರು ಮತ್ತು ಆಪ್ತರು ಕೂಡ ವೀಕೆಂಡ್ ವಿತ್ ರಮೇಶ್ ಸಂಚಿಕೆಯ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಖಚಿತ ಮಾಹಿತಿ ಸಿಗುವುದೊಂದೇ ಬಾಕಿ ಇತ್ತು. ಸಾಧಕರ ಸೀಟ್ನಲ್ಲಿ ಡಿ.ಕೆ. ಶಿವಕುಮಾರ್ ಕುಳಿತಿರುವುದು ಈಗ ಖಚಿತವಾಗಿದೆ. ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಶೋಗೆ ಅವರು ಬಂದಿದ್ದಾರೆ. ಈ ಸ್ಪೆಷಲ್ ಎಪಿಸೋಡ್ನ ಚಿತ್ರೀಕರಣ ಕೂಡ ನಡೆದಿದೆ. ಆ ಸಂದರ್ಭದ ಫೋಟೋ ಕೂಡ ಈಗ ಲಭ್ಯವಾಗಿದೆ. ಇದರಿಂದ ವೀಕ್ಷಕರು ಮತ್ತು ಡಿಕೆಶಿ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದೆ. ಯಾವ ದಿನಾಂಕದಲ್ಲಿ ಡಿಕೆ ಶಿವಕುಮಾರ್ ಅವರ ಸಂಚಿಕೆ ಪ್ರಸಾರ ಆಗಲಿದೆ ಎಂಬ ಬಗ್ಗೆ ‘ಜೀ ಕನ್ನಡ’ (Zee Kannada) ವಾಹಿನಿ ಕಡೆಯಿಂದ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ರಮೇಶ್ ಅರವಿಂದ್ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಪ್ರತಿ ವಾರವೂ ಸಾಧಕರ ಜೀವನದ ಕಥೆಯನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಸಿನಿಮಾ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು ಈ ವೇದಿಕೆ ಅಲಂಕರಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಜೀವನದ ಬಗೆಗಿನ ಅಪರೂಪದ ಸಂಗತಿಗಳನ್ನು ತಿಳಿಯುವ ಸಮಯ ಹತ್ತಿರವಾಗಿದೆ. ಅವರ ಕುಟುಂಬದವರು ಮತ್ತು ಆಪ್ತರು ಕೂಡ ಸಂಚಿಕೆಯ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ 5ನೇ ಸೀಸನ್ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ರಮ್ಯಾ, ಪ್ರಭುದೇವ, ದೊಡ್ಡರಂಗೇಗೌಡ, ಜೈ ಜಗದೀಶ್, ಡಾಲಿ ಧನಂಜಯ್, ನಾಗೇಂದ್ರ ಪ್ರಸಾದ್, ಸಿಹಿ ಕಹಿ ಚಂದ್ರು, ನಾ. ಸೋಮೇಶ್ವರ ಮುಂತಾದವರು ತಮ್ಮ ಜೀವನದ ನೆನಪಿನ ಪುಟಗಳನ್ನು ತೆರೆದಿದ್ದಾರೆ. ಈ ಬಾರಿ ಕರ್ನಾಟಕ ವಿಧಾನಸಭಾ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯಿತು. ರಾಜ್ಯದ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹೊತ್ತಿಗೆ ಸರಿಯಾಗಿ ಅವರ ಬದುಕಿನ ವಿವರಗಳನ್ನು ಪ್ರೇಕ್ಷಕರ ಎದುರು ತರಲು ಜೀ ಕನ್ನಡ ವಾಹಿನಿ ಸಿದ್ಧತೆ ನಡೆಸಿಕೊಂಡಿದೆ.
ಇದನ್ನೂ ಓದಿ: ರಾಜಕೀಯ ಬಿಟ್ಟು ಬೆಂಗಳೂರು ಅಭಿವೃದ್ಧಿ ಮಾಡೋಣ: ಶಾಸಕರ ಸಭೆಯಲ್ಲಿ ಡಿಕೆ ಶಿವಕುಮಾರ್ ಕಿವಿಮಾತು
ಕಾಂಗ್ರೆಸ್ನ ಜಯಭೇರಿ ಬಳಿಕ ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ವರ್ಣರಂಜಿತ ರಾಜಕೀಯ ಜೀವನ ಅನುಭವಿಸಿರುವ ಹಾಗೂ ಅನುಭವಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಎಪಿಸೋಡ್ ಬಗ್ಗೆ ‘ವೀಕೆಂಡ್ ವಿತ್ ರಮೇಶ್’ ವೀಕ್ಷಕರಿಗೆ ಹಾಗೂ ಡಿಕೆಶಿ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಶೀಘ್ರದಲ್ಲೇ ಈ ಸಂಚಿಕೆಯ ಪ್ರೋಮೋ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಸಭೆ ವಿಳಂಬ: ಡಿಕೆ ಶಿವಕುಮಾರ್ ನಡೆಗೆ ಆಕ್ರೋಶಗೊಂಡು ಹೊರ ನಡೆದ ಬಿಜೆಪಿ ಶಾಸಕರು
ಡಿ.ಕೆ. ಶಿವಕುಮಾರ್ ಅವರ ಬಾಲ್ಯ, ಅವರ ಕುಟುಂಬ, ಶಿಕ್ಷಣ, ಕಾಲೇಜು ದಿನಗಳು, ಹೋರಾಟ, ಕಾಂಗ್ರೆಸ್ ಪಕ್ಷ ಸೇರ್ಪಡೆ, ಮೊದಲ ಚುನಾವಣೆ ಸೋಲು, ದೇವೇಗೌಡರನ್ನು ಸೋಲಿಸಿದ್ದು, ದೊಡ್ಡ ರಾಜಕಾರಣಿಗಳ ಸಖ್ಯ, ರಾಜಕೀಯದ ಪಟ್ಟುಗಳು, ಸಿಬಿಐ, ಇಡಿ, ಐಟಿ ಪ್ರಕರಣಗಳು, ಈ ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವುಗಳ ಜೊತೆಗೆ ತಮ್ಮ ಕುಟುಂಬ, ಪತ್ನಿ, ಮಕ್ಕಳು ಹಾಗೂ ಸಹೋದರ ಡಿಕೆ ಸುರೇಶ್ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:42 pm, Mon, 5 June 23