‘ಯೋಗ್ಯತೆ ಇರೋದಕ್ಕೆ ಬಂದಿದ್ದು’; ವಿನಯ್ ಗೌಡ ಬಾಯಿ ಮುಚ್ಚಿಸಿದ ಪ್ರತಾಪ್

ವಿನಯ್ ಅವರು ಬಳಕೆ ಮಾಡಿದ ಕೆಲವು ಶಬ್ದಗಳಿಂದ ಮನೆಯವರು ಕೂಡ ಅಸಮಾಧಾನಗೊಂಡರು. ಆ ರೀತಿಯ ಶಬ್ದಗಳ ಬಳಕೆ ಮಾಡದಂತೆ ಕೋರಿದರೂ ವಿನಯ್ ಅದನ್ನು ಮುಂದುವರಿಸಿದರು.

‘ಯೋಗ್ಯತೆ ಇರೋದಕ್ಕೆ ಬಂದಿದ್ದು’; ವಿನಯ್ ಗೌಡ ಬಾಯಿ ಮುಚ್ಚಿಸಿದ ಪ್ರತಾಪ್
ವಿನಯ್-ಪ್ರತಾಪ್
Edited By:

Updated on: Jan 09, 2024 | 11:33 AM

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ (Drone Prathap) ಹಾಗೂ ವಿನಯ್ ಗೌಡ ಮಧ್ಯೆ ಆಗಾಗ ಜಗಳಗಳು ನಡೆಯುತ್ತಲೇ ಇರುತ್ತವೆ. ಹೊರಗೆ ಪ್ರತಾಪ್ ಸಾಕಷ್ಟು ಸುಳ್ಳುಗಳನ್ನು ಹೇಳಿದ್ದಾರೆ ಅನ್ನೋದು ವಿನಯ್ ಆರೋಪ. ಇದನ್ನು ಅವರು ಪದೇಪದೇ ಹೇಳುತ್ತಲೇ ಇರುತ್ತಾರೆ. ಈಗ ಮತ್ತದೇ ವಿಚಾರಕ್ಕೆ ಜಗಳ ನಡೆದಿದೆ. ಪ್ರತಾಪ್ ಅವರ ಯೋಗ್ಯತೆ ಬಗ್ಗೆ ಮಾತನಾಡಲು ಬಂದ ವಿನಯ್ ಗೌಡ (Vinay Gowda) ಬಾಯಿಯನ್ನು ಪ್ರತಾಪ್ ಮುಚ್ಚಿಸಿದ್ದಾರೆ. ಈ ಮಧ್ಯೆ ವಿನಯ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದು ಇದಕ್ಕೆ ಮನೆಯವರು ಕೂಡ ಅಸಮಾಧಾನ ಹೊರ ಹಾಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗುಂಪುಗಾರಿಕೆ ಮಾಡಿದ್ದು ಎದ್ದು ಕಾಣುತ್ತಿತ್ತು. ಅಚ್ಚರಿಯ ಸಂಗತಿ ಎಂದರೆ ಈ ಗುಂಪಿನಿಂದ ಒಬ್ಬೊಬ್ಬರೇ ಎಲಿಮಿನೇಟ್ ಆಗುತ್ತಾ ಬಂದರು. ಕಳೆದ ವೀಕೆಂಡ್​ನಲ್ಲಿ ಪ್ರತಾಪ್ ಇದೇ ವಿಚಾರವನ್ನು ತೆಗೆದಿದ್ದರು. ಒಬ್ಬೊಬ್ಬರಿಗೆ ಒಂದೊಂದು ಪುಸ್ತಕ ನೀಡಬೇಕಿತ್ತು. ಈ ವೇಳೆ ‘ತುಳಿದು ಮೇಲೆ ಬರೋದು ಹೇಗೆ’ ಎಂಬ ಪುಸ್ತಕವನ್ನು ವಿನಯ್​ಗೆ ಪ್ರತಾಪ್ ನೀಡಿದ್ದರು. ‘ವಿನಯ್ ಟೀಂನಲ್ಲಿದ್ದ ಎಲ್ಲರೂ ಒಬ್ಬೊಬ್ಬರೇ ಔಟ್ ಆದರು. ತಪ್ಪು ಮಾಡಿದಾಗ ವಿನಯ್ ಅದನ್ನು ಸರಿಪಡಿಸಲೇ ಇಲ್ಲ’ ಎಂದರು ಪ್ರತಾಪ್. ಈ ಮಾತು ವಿನಯ್​ಗೆ ಸಿಟ್ಟು ತರಿಸಿದೆ.

ವಾರದ ದಿನಗಳಲ್ಲಿ ಈ ವಿಚಾರಕ್ಕೆ ವಿನಯ್ ಹಾಗೂ ಪ್ರತಾಪ್ ಮಧ್ಯೆ ಕಿತ್ತಾಟ ನಡೆಯುತ್ತಿದೆ. ‘ಅಮಾಯಕರ ತರ ಆಡೋದು ಯಾರು’ ಎನ್ನುವ ವಿಚಾರ ಚರ್ಚೆಗೆ ಬಂದಾಗ ವಿನಯ್ ಅವರು ಪ್ರತಾಪ್ ಹೆಸರನ್ನು ತೆಗೆದುಕೊಂಡರು. ಅಷ್ಟೇ ಅಲ್ಲ ಈ ವಿಚಾರದಲ್ಲಿ ಅವರು ಸಾಕಷ್ಟು ವಾದ ಮಾಡಿದರು. ವಿನಯ್ ಅವರು ಬಳಕೆ ಮಾಡಿದ ಕೆಲವು ಶಬ್ದಗಳಿಂದ ಮನೆಯವರು ಕೂಡ ಅಸಮಾಧಾನಗೊಂಡರು. ಆ ರೀತಿಯ ಶಬ್ದಗಳ ಬಳಕೆ ಮಾಡದಂತೆ ಕೋರಿದರೂ ವಿನಯ್ ಅದನ್ನು ಮುಂದುವರಿಸಿದರು.

‘ಅಣ್ಣ ಮಾತಿನ ಮೇಲೆ ನಿಗಾ ಇರಲಿ. ಬಾಯಿಗೆ ಬಂದಂತೆ ಮಾತನಾಡಬೇಡಿ. ಗೌರವ ಕೊಟ್ಟು, ಗೌರವ ತೆಗೆದುಕೊಳ್ಳಿ’ ಎಂದು ಪ್ರತಾಪ್ ಕೋರಿದರು. ಇದಕ್ಕೆ ಸಿಟ್ಟಾದ ವಿನಯ್ ಗೌಡ ಅವರು, ‘ನಿನ್ನ ಯೋಗ್ಯತೆ ಏನು ಎಂಬುದು ಜಗತ್ತಿಗೆ ಗೊತ್ತು. ನಿನಗೆ ಯೋಗ್ಯತೆಯೇ ಇಲ್ಲ. ಇಷ್ಟು ದಿನ ಇಲ್ಲಿ ಹೇಗೆ ಇದ್ದೀಯಾ ಅನ್ನೋದು ಎಲ್ಲರಿಗೂ ಗೊತ್ತು’ ಎಂದರು ವಿನಯ್. ಇದಕ್ಕೆ ಉತ್ತರಿಸಿದ ಪ್ರತಾಪ್, ‘ಯೋಗ್ಯತೆ ಇರುವುದಕ್ಕೆ ನನ್ನನ್ನು ಕರೆಸಿದ್ದಾರೆ’ ಎಂದರು.

ಇದನ್ನೂ ಓದಿ: ‘ಪ್ಲೀಸ್ ಶಟ್​ಅಪ್​’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ

ವಿನಯ್ ಹಾಗೂ ಪ್ರತಾಪ್ ವಾದ ಮುಂದುವರಿಯುತ್ತಲೇ ಇತ್ತು. ವಿನಯ್ ಎಷ್ಟೇ ಕೋಪ ಬಂದು ಕೂಗಾಡಿದರೂ ಪ್ರತಾಪ್ ಮಾತ್ರ ಸೈಲೆಂಟ್ ಆಗಿಯೇ ಎಲ್ಲ ಪ್ರಶ್ನೆಗೆ ಉತ್ತರ ನೀಡುತ್ತಾ ಬಂದರು. ಈ ವಿಚಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರದಲ್ಲಿ ವಿನಯ್​ಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಫಿನಾಲೆ ಸಮೀಪಿಸಿದ ಸಂದರ್ಭದಲ್ಲಿ ವಿನಯ್ ಗೌಡ ಅವರು ಈ ರೀತಿ ನಡೆದುಕೊಂಡಿದ್ದು ಅನೇಕರಿಗೆ ಸರಿ ಎನಿಸುತ್ತಿಲ್ಲ. ಅವರಿಗೆ ಇದು ಹಿನ್ನಡೆ ಉಂಟು ಮಾಡಿದರೂ ಅಚ್ಚರಿ ಏನಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ