‘ಅಪ್ಪನನ್ನು ಕಳೆದುಕೊಂಡ ದಿನಾಂಕದಲ್ಲೇ ಮಗನನ್ನು ಪಡೆದುಕೊಂಡೆ’; ವೇದಿಕೆಯಲ್ಲಿ ಗಣೇಶ್​ ಭಾವುಕ ನುಡಿ

| Updated By: ಮದನ್​ ಕುಮಾರ್​

Updated on: Aug 03, 2022 | 12:08 PM

Gaalipata 2 | Golden Star Ganesh: ಭರ್ಜರಿಯಾಗಿ ವೇದಿಕೆಗೆ ಎಂಟ್ರಿ ನೀಡಿದ ಪುತ್ರ ವಿಹಾನ್​ ಕಂಡು ‘ಗೋಲ್ಡನ್​ ಸ್ಟಾರ್​’ ಗಣೇಶ್​ ಖುಷಿಪಟ್ಟಿದ್ದಾರೆ. ಮಗನ ಬಗ್ಗೆ ಅವರು ವೇದಿಕೆಯಲ್ಲಿ ಮನಸಾರೆ ಮಾತನಾಡಿದ್ದಾರೆ.

‘ಅಪ್ಪನನ್ನು ಕಳೆದುಕೊಂಡ ದಿನಾಂಕದಲ್ಲೇ ಮಗನನ್ನು ಪಡೆದುಕೊಂಡೆ’; ವೇದಿಕೆಯಲ್ಲಿ ಗಣೇಶ್​ ಭಾವುಕ ನುಡಿ
ಗೋಲ್ಡನ್ ಸ್ಟಾರ್ ಗಣೇಶ್, ವಿಹಾನ್
Follow us on

ನಟ ‘ಗೋಲ್ಡನ್​ ಸ್ಟಾರ್​’ ಗಣೇಶ್ (Golden Star Ganesh)​ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳ ಬಳಿಕ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಪತ್ನಿ ಶಿಲ್ಪಾ ಮತ್ತು ಮಕ್ಕಳಾದ ವಿಹಾನ್​ ಹಾಗೂ ಚಾರಿತ್ರ್ಯ ಜೊತೆ ಗಣೇಶ್​ ಕಾಲ ಕಳೆಯುತ್ತಾರೆ. ಸೋಶಿಯಲ್​ ಮೀಡಿಯಾಲ್ಲಿ ಅವರ ಕುಟುಂಬದ ಅನೇಕ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗುತ್ತವೆ. ಶಿಲ್ಪಾ ಗಣೇಶ್​ ಕೂಡ ಮಕ್ಕಳ ಹಲವು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಈಗಾಗಲೇ ವಿಹಾನ್​ (Ganesh Son Vihaan) ಚಿತ್ರರಂಗಕ್ಕೆ ಬಾಲ ನಟನಾಗಿ ಕಾಲಿಟ್ಟಿದ್ದಾನೆ. ಈಗ ‘ಗಾಳಿಪಟ 2’ (Gaalipata 2) ಚಿತ್ರದ ಬಿಡುಗಡೆಯ ಹೊಸ್ತಿಲಿನಲ್ಲಿ ‘ಜೀ ಕನ್ನಡ’ ವಾಹಿನಿಯ ವಿಶೇಷ ಕಾರ್ಯಕ್ರಮದ ವೇದಿಕೆಗೆ ಆತ ಭರ್ಜರಿಯಾಗಿ ಎಂಟ್ರಿ ನೀಡಿದ್ದಾನೆ. ಅವನ ಬಗ್ಗೆ ಗಣೇಶ್​ ಅವರು ಮನಸಾರೆ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ ‘ಗೋಲ್ಡನ್​ ಸ್ಟಾರ್​’.

ಯೋಗರಾಜ್​ ಭಟ್​ ನಿರ್ದೇಶನ ಮಾಡಿರುವ ‘ಗಾಳಿಪಟ 2’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇದೆ. ಭರ್ಜರಿಯಾಗಿಯೇ ಚಿತ್ರತಂಡ ಪ್ರಚಾರ ಮಾಡುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಜೀ ಕನ್ನಡ ವಾಹಿನಿಯು ‘ಗಾಳಿಪಟ 2’ ತಂಡದ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅದರಲ್ಲಿ ವಿಹಾನ್​ ಕೂಡ ಭಾಗಿ ಆಗಿದ್ದಾನೆ.

ಈ ಸ್ಪೆಷಲ್​ ಕಾರ್ಯಕ್ರಮದ ಪ್ರೋಮೋ ಗಮನ ಸೆಳೆಯುತ್ತಿದೆ. ಭರ್ಜರಿಯಾಗಿ ವೇದಿಕೆಗೆ ಎಂಟ್ರಿ ನೀಡಿದ ಮಗನನ್ನು ಕಂಡು ಗಣೇಶ್​ ಖುಷಿಪಟ್ಟಿದ್ದಾರೆ. ಪುತ್ರನ ಬಗ್ಗೆ ಅವರು ವೇದಿಕೆಯಲ್ಲಿ ಮನಸಾರೆ ಮಾತನಾಡಿದ್ದಾರೆ. ‘ಆಗಸ್ಟ್​ 27ರಂದು ಅಪ್ಪನನ್ನು ಕಳೆದುಕೊಂಡೆ. ಇವನು ಹುಟ್ಟಿದ ಡೇಟ್​ ಕೂಡ ಆಗಸ್ಟ್​ 27. ಇವನು ನನಗೆ ಅಪ್ಪನ ಥರ. ಇವನನ್ನು ನೋಡಿದಾಗಲೆಲ್ಲ ಅಪ್ಪನ ನೆನಪಾಗುತ್ತದೆ. ಇವನೆಂದರೆ ಒಂಥರಾ ಎಮೋಷನ್​’ ಎಂದು ಗಣೇಶ್​ ಹೇಳಿದ್ದಾರೆ.

ಇದನ್ನೂ ಓದಿ
‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್​
‘ಸಖತ್’​ ವೇದಿಕೆಯಲ್ಲಿ ಗಣೇಶ್​ ಕೋರಿಕೆ ಮೇರೆಗೆ ‘ಎಕ್ಸ್​ಕ್ಯೂಸ್​ಮೀ’ ಹಾಡು ಹೇಳಿದ ಪ್ರೇಮ್
‘ಚಿತ್ರರಂಗ ಇರುವವರೆಗೂ ಪವರ್​ ಸ್ಟಾರ್​ ಅವರೇ ನಂ.1’; ಅಪ್ಪು ಬಗ್ಗೆ ಗಣೇಶ್​ ಅಭಿಮಾನದ ಮಾತು
‘ಲಕ್ಷಣ’ ಧಾರಾವಾಹಿಗೆ ಡಬಲ್​ ಸಂಭ್ರಮ; ನಟ ಗಣೇಶ್​ಗೆ ಧನ್ಯವಾದ ತಿಳಿಸಿದ ಜಗನ್​

ಈ ಕಾರ್ಯಕ್ರಮವನ್ನು ನಿರೂಪಕಿ ಅನುಶ್ರೀ ನಡೆಸಿಕೊಟ್ಟಿದ್ದಾರೆ. ‘ಮನೆಯಲ್ಲಿ ಅಮ್ಮ ಹೀರೋನಾ ಅಥವಾ ಅಪ್ಪ ಹೀರೋನಾ’ ಎಂದು ಅವರು ಕೇಳಿದ ಪ್ರಶ್ನೆಗೆ ‘ಅಪ್ಪನೇ ಹೀರೋ’ ಎಂದು ವಿಹಾನ್​ ಉತ್ತರಿಸಿದ್ದಾನೆ. ‘ಮನೆಗೆ ಹೋಗು ಮಗನೆ.. ಇಬ್ಬರಿಗೂ ಮನೆಯಲ್ಲಿ ಕಾದಿದೆ ಹೋಗು’ ಎಂದು ಯೋಗರಾಜ್​ ಭಟ್​ ನಗೆ ಚಟಾಕಿ ಹಾರಿಸಿದ್ದಾರೆ. ಈ ಮಸ್ತಿಯ ಕ್ಷಣ​ಗಳು ಕೂಡ ಪ್ರೋಮೋದಲ್ಲಿ ಹೈಲೈಟ್​ ಆಗಿವೆ.

ಪೂರ್ತಿ ಎಪಿಸೋಡ್​ ನೋಡಲು ವೀಕ್ಷರು ಕಾದಿದ್ದಾರೆ. ಶುಕ್ರವಾರ (ಆಗಸ್ಟ್​ 5) ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ನಟಿ ವೈಭವಿ ಶಾಂಡಿಲ್ಯ, ಜಯಂತ ಕಾಯ್ಕಿಣಿ ಮುಂತಾದವರು ಕೂಡ ಈ ಶೋನಲ್ಲಿ ಭಾಗಿ ಆಗಿದ್ದಾರೆ. ‘ಗಾಳಿಪಟ 2’ ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಆಗಸ್ಟ್​ 12ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

 

Published On - 12:07 pm, Wed, 3 August 22