‘ಗಟ್ಟಿಮೇಳ’ ಧಾರಾವಾಹಿಯ ಕಿಶನ್ ಈಗ ಸಿನಿಮಾ ಹೀರೋ; ‘ನಾನೇ ನರರಾಕ್ಷಸ’ ಎಂದ ನಟ ರಾಜ್ ಮನೀಶ್
‘ನಾನೇ ನರರಾಕ್ಷಸ’ ಚಿತ್ರದಲ್ಲಿ ಡಾ. ರಾಜ್ಕುಮಾರ್ ಕುರಿತ ಒಂದು ಹಾಡು ಇದೆ. ಅದನ್ನು ಅವರ ಜನ್ಮದಿನದ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕಿರುತೆರೆಯಲ್ಲಿ ಗುರುತಿಸಿಕೊಂಡ ಅನೇಕರು ನಂತರ ಚಿತ್ರರಂಗಕ್ಕೆ ಕಾಲಿಡುವುದು ವಾಡಿಕೆ. ‘ಗಟ್ಟಿಮೇಳ’ ಧಾರಾವಾಹಿಯಲ್ಲಿ (Gattimela Serial) ಕಿಶನ್ ಎಂಬ ಪಾತ್ರವನ್ನು ಮಾಡಿರುವ ನಟ ರಾಜ್ ಮನೀಶ್ (Raj Manish) ಕೂಡ ಅದೇ ಟ್ರೆಂಡ್ ಫಾಲೋ ಮಾಡಿದ್ದಾರೆ. ಈಗ ಅವರು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ‘ನಾನೇ ನರರಾಕ್ಷಸ’ (Naane Nara Rakshasa Movie) ಚಿತ್ರಕ್ಕೆ ಅವರು ಹೀರೋ ಆಗಿದ್ದಾರೆ. ಅಷ್ಟೇ ಅಲ್ಲದೇ, ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್ಗಳನ್ನು ಇತ್ತೀಚೆಗೆ ರಿಲೀಸ್ ಮಾಡಲಾಯಿತು. ಅದರ ಜೊತೆಗೆ ಒಂದು ಲಿರಿಕಲ್ ಸಾಂಗ್ ಕೂಡ ಬಿಡುಗಡೆ ಆಗಿದೆ. ಹಾರರ್–ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ನೀತು ನಿನಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಚಂದ್ರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. 2021ರ ಡಿಸೆಂಬರ್ನಲ್ಲಿ ‘ನಾನೇ ನರರಾಕ್ಷಸ’ ಚಿತ್ರಕ್ಕೆ ಶೂಟಿಂಗ್ ಆರಂಭಿಸಲಾಗಿತ್ತು. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಮೇ ತಿಂಗಳ ಮೊದಲ ವಾರದಲ್ಲಿ ಸಿನಿಮಾ ರಿಲೀಸ್ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ.
ಗಟ್ಟಿಮೇಳ, ಹರಹರ ಮಹದೇವ, ಶನಿ, ಮಹಾಕಾಳಿ, ಸಂಘರ್ಷ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ಅನುಭವ ರಾಜ್ ಮನೀಶ್ ಅವರಿಗೆ ಇದೆ. ಈಗ ಅವರು ಹೀರೋ ಆಗಿರುವ ‘ನಾನೇ ನರರಾಕ್ಷಸ’ ಸಿನಿಮಾಗೆ ಅವರ ತಾಯಿ ಬಿ. ರಾಧಾ ಅವರು ಬಂಡವಾಳ ಹೂಡಿದ್ದಾರೆ. ಸ್ವರ್ಣಾಂಬಾ ಪ್ರೊಡಕ್ಷನ್ಸ್ ಮೂಲಕ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
‘ನಿಜಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೊಳಗೂ ಒಬ್ಬ ರಾಕ್ಷಸ ಇರುತ್ತಾನೆ. ಅದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ಹೇಗೆ ರಾಕ್ಷಸರಾಗಿ ಬದಲಾಗ್ತಾರೆ ಎನ್ನುವುದೇ ಈ ಕಥೆಯ ಹೈಲೈಟ್. ಮುಂದೆ ಏನಾಗುತ್ತದೆ ಎಂದು ಪ್ರೇಕ್ಷಕರು ಊಹಿಸಲು ಸಾಧ್ಯವಾಗದ ರೀತಿಯ ಕಥೆ ನಮ್ಮ ಸಿನಿಮಾದಲ್ಲಿದೆ’ ಎಂದಿದ್ದಾರೆ ರಾಜ್ ಮನೀಶ್. ಮೈಸೂರು, ಬನ್ನೂರು ಸುತ್ತಮುತ್ತಲಿನ ಕಾಡಿನಲ್ಲಿ ಚಿತ್ರೀಕರಣ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಕೊಳ್ಳೆಗಾಲ ಮೂಲದ ದಿವ್ಯ ಕುಮಾರ್ ಅವರು ‘ನಾನೇ ನರರಾಕ್ಷಸ’ ಚಿತ್ರದಲ್ಲಿ ಸ್ನೇಕ್ ಶಂಕರ್ ಎಂಬ ವಿಲನ್ ಪಾತ್ರ ಮಾಡಿದ್ದಾರೆ. ಈವರೆಗೆ ಏಳಕ್ಕೂ ಅಧಿಕ ಸಿನಿಮಾ ಮಾಡಿರುವ ಅವರಿಗೆ ಇದೇ ಮೊದಲ ಬಾರಿಗೆ ಮೇನ್ ವಿಲನ್ ಪಾತ್ರ ಸಿಕ್ಕಿದೆ. ಪತ್ರಕರ್ತನಾಗಿ ಸೇತುರಾಮ್, ಸಿಐಡಿ ಅಧಿಕಾರಿ ಪಾತ್ರದಲ್ಲಿ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಮೈಸೂರು ಮೂಲದ ರಾಘವೇಂದ್ರ ಅವರು ಈ ಚಿತ್ರತಂಡಕ್ಕೆ ಅನೇಕ ವಿಚಾರಗಳಲ್ಲಿ ನೆರವಾಗುತ್ತಿದ್ದಾರೆ. ‘ನಾನೇ ನರರಾಕ್ಷಸ’ ಸಿನಿಮಾಗೆ ಸಂಗೀತ ನೀಡುತ್ತಿರುವ ನೀತು ನಿನಾದ್ ಅವರು ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿದ್ದರು. ಈಗ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿನ 4 ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ರಾಜ್ಕುಮಾರ್ ಕುರಿತಾಗಿಯೂ ಒಂದು ಸಾಂಗ್ ಇದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಣ್ಣಾವ್ರ ಕುರಿತ ಹಾಡನ್ನು ಅವರ ಜನ್ಮದಿನದ ಪ್ರಯುಕ್ತ ರಿಲೀಸ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಸುನಿಲ್ ಸ್ವಾಮಿರಾಜು ಅವರು ಈ ಚಿತ್ರದಲ್ಲಿ ಎರಡನೇ ಹೀರೋ ಆಗಿ ನಟಿಸಿದ್ದಾರೆ. ರಂಗಾಯಣದಲ್ಲಿ ನಟನೆ ಕಲಿತಿರುವ ಅವರು ಆರಂಭದಲ್ಲಿ ಈ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಸೇರಿಕೊಂಡಿದ್ದರು. ಬಳಿಕ ಅವರ ಅಭಿನಯದ ವಿಡಿಯೋವೊಂದನ್ನು ನೋಡಿದ ನಿರ್ದೇಶಕರು ಎರಡನೇ ಹೀರೋ ಆಗಿ ನಟಿಸುವ ಚಾನ್ಸ್ ನೀಡಿದರು.
ಇದನ್ನೂ ಓದಿ:
ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ
ಸೀರಿಯಲ್ ನೋಡಿ ಕಾಲ ಕಳೆಯುತ್ತಿರುವ ಯಡಿಯೂರಪ್ಪ; ಮಾಜಿ ಸಿಎಂ ಮೆಚ್ಚಿನ ಧಾರಾವಾಹಿಗಳು ಇವು