ಸೀರಿಯಲ್ ನೋಡಿ ಕಾಲ ಕಳೆಯುತ್ತಿರುವ ಯಡಿಯೂರಪ್ಪ; ಮಾಜಿ ಸಿಎಂ ಮೆಚ್ಚಿನ ಧಾರಾವಾಹಿಗಳು ಇವು
BS Yediyurappa: ಬಿ.ಎಸ್. ಯಡಿಯೂರಪ್ಪ ಬಳಿ ಈಗ ಬಹಳ ಸಮಯ ಇದೆ. ರಾಜಕೀಯದ ಒತ್ತಡವಿಲ್ಲ, ಬೆಂಬಲಿಗರ ನೂಕಾಟವಿಲ್ಲ. ಅವರಿಗೆ ಈಗ ಸಮಯ ಕಳೆಯಲು ಸಹಾಯ ಮಾಡ್ತಿರೋದು ದಶಕದ ಹಿಂದಿನ ಮೆಗಾ ಧಾರಾವಾಹಿಗಳು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಹುಟ್ಟು ಹೋರಾಟಗಾರ, ಅಪ್ರತಿಮ ಸಂಘಟಕ. ರಾಜಕೀಯವನ್ನೇ ಅರೆದು ಕುಡಿದು, ದಿನದ ಬಹುತೇಕ ಸಮಯದಲ್ಲಿ ರಾಜಕೀಯ ತಂತ್ರಗಾರಿಕೆ ಬಗ್ಗೆಯೇ ಯೋಚಿಸುತ್ತ ಕಾಲ ಕಳೆಯುವ ರಾಜಕೀಯ ನಿಷ್ಣಾತ. ಆದರೆ ಇದೇ ಮಾಜಿ ಸಿಎಂ ಯಡಿಯೂರಪ್ಪ ಅಧಿಕಾರದಿಂದ ದೂರವಾದ ಮೇಲೆ ಏನು ಮಾಡ್ತಿದ್ದಾರೆ? ಇಂಥದ್ದೊಂದು ಕುತೂಹಲ ಇದೀಗ ಕಾಡ್ತಿದೆ. ಅದಕ್ಕೆ ಉತ್ತರ ಇಲ್ಲಿದೆ. ಯಡಿಯೂರಪ್ಪ ಈಗ ಸೀರಿಯಲ್ ನೋಡುತ್ತ ಕಾಲ ಕಳೆಯುತ್ತಿದ್ದಾರೆ. ಕನ್ನಡದಲ್ಲಿನ ಹಲವು ಧಾರಾವಾಹಿಗಳು (Kannada Serials) ಅವರಿಗೆ ಇಷ್ಟ. ಈಗ ಅವುಗಳನ್ನು ವೀಕ್ಷಿಸುತ್ತ ಅವರು ಸಮಯ ಕಳೆಯುತ್ತಿದ್ದಾರೆ.
ಯಡಿಯೂರಪ್ಪ ಅವರಿಗೆ ಸಿಎಂ ಆಗಿದ್ದ ಅವಧಿಯಲ್ಲಿ ಸುತ್ತೆಲ್ಲ ಆಡಳಿತ ವರ್ಗದವರೇ ತುಂಬಿಕೊಳ್ತಿದ್ದರು. ಅಧಿಕಾರಿಗಳ ಜೊತೆಗೆ ನಿರಂತರ ಮೀಟಿಂಗ್ ಇರುತ್ತಿತ್ತು. ರಾಜ್ಯದ ಬೇರೆಬೇರೆ ಕಡೆ ಪ್ರವಾಸ ಹಮ್ಮಿಕೊಳ್ಳಲಾಗುತ್ತಿತ್ತು. ಯಡಿಯೂರಪ್ಪ ಸಿಎಂ ಆದ ಬಳಿಕ ಅತಿಯಾದ ನೆರೆ, ಜಗತ್ತನ್ನೇ ಕಾಡಿದ ಕೊವಿಡ್ ಕಾರಣದಿಂದ ಅವರು ಸುಮ್ಮನೆ ಕೂರುವುದಕ್ಕೆ ಸಾಧ್ಯವಾಗಿರಲಿಲ್ಲ. ಮೊದಲು ಅಧಿಕಾರ ಹಿಡಿಯುವುದಕ್ಕೆ ಶ್ರಮಪಟ್ಟ ಯಡಿಯೂರಪ್ಪ ಕೊನೆಗೆ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಮಯ ಕಳೆದರು. ಹೀಗಾಗಿ ವೈಯಕ್ತಿಕ ಖುಷಿ ಮನೋಲ್ಲಾಸದ ಬಗ್ಗೆ ಗಮನ ಹರಿಸುವುದಕ್ಕೆ ಸಮಯ ಇರಲಿಲ್ಲ. ಆದರೆ ಈಗ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ ಬಹುತೇಕ ರಿಲ್ಯಾಕ್ಸ್ ಆಗಿದ್ದಾರೆ.
ಯಡಿಯೂರಪ್ಪ ಬಳಿ ಈಗ ಬಹಳ ಸಮಯ ಇದೆ. ರಾಜಕೀಯದ ಒತ್ತಡವಿಲ್ಲ, ಬೆಂಬಲಿಗರ ನೂಕಾಟವಿಲ್ಲ. ಮುಂದೇನಪ್ಪ ತಂತ್ರಗಾರಿಕೆ ಎನ್ನೋ ಪ್ರೆಷರ್ ಇಲ್ಲ. ಹೀಗಿರುವ ಯಡಿಯೂರಪ್ಪ ಅವರಿಗೆ ಈಗ ಸಮಯ ಕಳೆಯಲು ಸಹಾಯ ಮಾಡ್ತಿರೋದು ದಶಕದ ಹಿಂದಿನ ಮೆಗಾ ಧಾರಾವಾಹಿಗಳು.
ಕೊವಿಡ್ ಸಮಯದಲ್ಲಿ ದೂರದರ್ಶನ ವಾಹಿನಿಯಲ್ಲಿ ಮರು ಪ್ರಸಾರವಾದ ‘ಮಹಾಭಾರತ’ ಸೀರಿಯಲ್ ಅನ್ನು ಯಡಿಯೂರಪ್ಪ ಮನಸ್ಸಿಟ್ಟು ನೋಡಿದ್ದರು. ಇದೀಗ ಮತ್ತೆ ಅಂಥದ್ದೇ ಹಳೆಯ ಸೀರಿಯಲ್ಗಳನ್ನು ಯಡಿಯೂರಪ್ಪ ನೋಡತೊಡಗಿದ್ದಾರೆ. ‘ಮಾಯಾಮೃಗ’, ‘ಮುಕ್ತ ಮುಕ್ತ’ ಧಾರಾವಾಹಿಗಳನ್ನು ತರಿಸಿಕೊಂಡು ನೋಡಿರುವ ಯಡಿಯೂರಪ್ಪ, ‘ಮಗಳು ಜಾನಕಿ’ ಧಾರಾವಾಹಿಯನ್ನೂ ನೋಡತೊಡಗಿದ್ದಾರೆ. ಸ್ವತಃ ‘ಮಗಳು ಜಾನಕಿ’ ಧಾರವಾಹಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ತಾವೇ ಹಾರ್ಡ್ ಡಿಸ್ಕ್ನಲ್ಲಿ ತಮ್ಮ ಧಾರಾವಾಹಿಗಳನ್ನು ಯಡಿಯೂರಪ್ಪ ಅವರಿಗೆ ಕಳುಹಿಸಿದ್ದಾರೆ. ಅವುಗಳನ್ನು ವೀಕ್ಷಿಸುತ್ತ ಯಡಿಯೂರಪ್ಪ ಅತ್ಯಂತ ನಿರಾಳರಾಗಿ ಸಮಯ ಕಳೆಯುತ್ತಿದ್ದಾರೆ.
ವರದಿ: ಪ್ರಸನ್ನ ಗಾಂವ್ಕರ್
ಇದನ್ನೂ ಓದಿ:
ಮತ್ತೆ ಕೋರ್ಟ್ ಕಥೆ ಹಿಡಿದು ಬಂದ ಟಿಎನ್ ಸೀತಾರಾಮ್; ಈ ಬಾರಿ ಸೀರಿಯಲ್ ಅಲ್ಲ, ವೆಬ್ ಸಿರೀಸ್
Published On - 12:58 pm, Fri, 21 January 22