ಮುಖಕ್ಕೆ ಹೊಡೆದಂತೆ ಮಾತಾಡಿದ ಗೌತಮಿ; ಸ್ನೇಹ ಮಾಡಿದ್ದಕ್ಕೆ ಮಂಜುಗೆ ಸಿಕ್ಕಿದ್ದು ಇಷ್ಟೇ

|

Updated on: Dec 11, 2024 | 10:55 PM

ಗೌತಮಿ ಜಾದವ್ ಮತ್ತು ಉಗ್ರಂ ಮಂಜು ಅವರ ಸ್ನೇಹ ಈಗ ಮೊದಲಿನ ರೀತಿ ಇಲ್ಲ. ಒಂದಷ್ಟು ದಿನಗಳ ಹಿಂದೆ ಜೊತೆಜೊತೆಯಲ್ಲೇ ಕಾಲ ಕಳೆಯುತ್ತಿದ್ದ ಅವರ ನಡುವೆ ಈಗ ಬಿರುಕು ಮೂಡಿದೆ. ಇಷ್ಟು ದಿನಗಳ ಕಾಲ ಮಂಜು ಜೊತೆ ಸಾಫ್ಟ್ ಆಗಿ ಮಾತನಾಡುತ್ತಿದ್ದ ಗೌತಮಿ ಅವರು ಈಗ ಖಾರದ ಮಾತುಗಳನ್ನು ಆಡಿದ್ದಾರೆ. ಅದನ್ನು ಕೇಳಿ ಮಂಜು ಮಂಕಾಗಿ ಕುಳಿತಿದ್ದಾರೆ.

ಮುಖಕ್ಕೆ ಹೊಡೆದಂತೆ ಮಾತಾಡಿದ ಗೌತಮಿ; ಸ್ನೇಹ ಮಾಡಿದ್ದಕ್ಕೆ ಮಂಜುಗೆ ಸಿಕ್ಕಿದ್ದು ಇಷ್ಟೇ
ಉಗ್ರಂ ಮಂಜು, ಗೌತಮಿ ಜಾದವ್
Follow us on

ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳನ್ನು ನಂಬಿಕೊಂಡು ಆಟ ಆಡೋಕೆ ಆಗಲ್ಲ. ಆದರೂ ಕೂಡ ಕೆಲವರ ನಡುವೆ ಬಾಂಧವ್ಯ ಬೆಳೆದುಬಿಡುತ್ತದೆ. ಆದರೆ ದಿನ ಕಳೆದಂತೆಲ್ಲ ಆ ಸಂಬಂಧ ಉಳಿಯಲು ಸಾಧ್ಯವಿಲ್ಲ. ಅದಕ್ಕೆ ಗೌತಮಿ ಜಾದವ್ ಮತ್ತು ಉಗ್ರಂ ಮಂಜು ಸ್ನೇಹವೇ ಬೆಸ್ಟ್ ಉದಾಹರಣೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋ ಆರಂಭ ಆದ ಬಳಿಕ ಮಂಜು ಮತ್ತು ಗೌತಮಿ ಅವರು ಸ್ನೇಹಿತರಾದರು. ಗೆಳಯ-ಗೆಳತಿ ಎಂದುಕೊಂಡು ಒಟ್ಟಿಗೆ ಇರುತ್ತಿದ್ದರು. ಆದರೆ ಈಗ ಇಬ್ಬರ ನಡುವೆ ಜಗಳ ಆರಂಭ ಆಗಿದೆ. ಮಂಜು ಜೊತೆ ಗೌತಮಿ ಅವರು ಖಾರವಾಗಿ ಮಾತನಾಡಿದ್ದಾರೆ.

ಬಿಗ್ ಬಾಸ್ ಆಟ ಇನ್ನು ಉಳಿದಿರುವುದು ಕೆಲವೇ ವಾರಗಳು ಮಾತ್ರ. ಇನ್ಮೇಲೆ ಎಲಿಮಿನೇಷನ್ ಕಾವು ಜಾಸ್ತಿ ಆಗುತ್ತದೆ. ಹಾಗಾಗಿ ಒಬ್ಬರು ಇನ್ನೊಬ್ಬರನ್ನು ಮೆಚ್ಚಿಸುತ್ತಾ ಕೂರಲು ಸಾಧ್ಯವಿಲ್ಲ. ಆದರೆ ಉಗ್ರಂ ಮಂಜು ಅವರು ಮೊದಲಿನಿಂದಲೂ ಅದೇ ತಪ್ಪನ್ನು ಮಾಡುತ್ತಾ ಬಂದಿದ್ದಾರೆ. ಗೌತಮಿಯನ್ನು ಮೆಚ್ಚಿಸುವ ಭರದಲ್ಲಿ ತಮ್ಮ ಆಟವನ್ನು ಅವರು ಮರೆತಂತಿದೆ. ಹಾಗಾಗಿ ಗೌತಮಿ ಜಾದವ್ ಅವರು ಈಗ ಉಗ್ರಂ ಮಂಜುಗೆ ಮಾತಿನ ಚಾಟಿ ಬೀಸಿದ್ದಾರೆ.

ಕ್ಯಾಪ್ಟೆನ್ಸಿ ಓಟದಲ್ಲಿ ಉಗ್ರಂ ಮಂಜು ಅವರನ್ನೇ ಗೌತಮಿ ಹೊರಗೆ ಇಟ್ಟಿದ್ದಾರೆ. ಅದಕ್ಕೂ ಮುನ್ನ ನಡೆದ ಟಾಸ್ಕ್​ನಲ್ಲಿ ಮಂಜು ಮಧ್ಯೆ ಮಧ್ಯೆ ಮಾತನಾಡಲು ಬಂದಾಗ ಅದನ್ನು ಕೂಡ ಗೌತಮಿ ಅವರು ವಿರೋಧಿಸಿದ್ದಾರೆ. ತಮ್ಮ ನಡುವಿನ ಗೆಳತನವೇ ಆಟಕ್ಕೆ ಅಡ್ಡ ಬರುತ್ತಿದೆ ಎಂಬುದು ಗೌತಮಿ ಅವರು ಸ್ಪಷ್ಟವಾಗಿ ಅರ್ಥ ಆದಂತಿದೆ. ಹಾಗಾಗಿ ಅವರು ಮಂಜು ಅವರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ

ಗೌತಮಿ ಈಗ ಮಂಜು ಅವರನ್ನು ದೂರ ತಳ್ಳುತ್ತಿದ್ದಾರೆ. ‘ನಿಮಗೆ ಸ್ನೇಹ ನಿಭಾಯಿಸೋಕೆ ಬರಲ್ಲ’ ಎಂದು ಮಂಜುಗೆ ಗೌತಮಿ ಹೇಳಿದ್ದಾರೆ. ‘ಹಾಗಾದ್ರೆ ನಿಭಾಯಿಸುವುದು ಕಲಿಯುತ್ತೇನೆ. ಕಲಿತ ಬಳಿಕ ನಿನ್ನ ಬಳಿ ಬರುತ್ತೇನೆ’ ಎಂದು ಮಂಜು ಹೇಳಿದರು. ಆಗ ಗೌತಮಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ‘ನನ್ನನ್ನು ನೀವು ಏನು ಅಂದುಕೊಂಡಿದ್ದೀರಿ? ನೀವು ಸ್ನೇಹ ನಿಭಾಯಿಸುವುದನ್ನು ಕಲಿತಾಗ ನನ್ನನ್ನು ಬಯಸಬೇಡಿ. ನನ್ನನ್ನು ಗ್ರ್ಯಾಂಟೆಡ್​ ಆಗಿ ತೆಗೆದುಕೊಳ್ಳಬೇಡಿ. ಇನ್ಮೇಲೆ ಗೆಳೆಯ, ಗೆಳತಿ ಎಂಬ ಸಂಬಂಧ ಇರಲ್ಲ’ ಎಂದು ಗೌತಮಿ ಅವರು ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾರೆ. ಇನ್ನೆಲ್ಲ ಕೇಳಿಸಿಕೊಂಡು ಮಂಜು ಮಂಕಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.