ಗಿಲ್ಲಿ, ಕಾವ್ಯಾ, ರಾಶಿಕಾ, ಸೂರಜ್, ಮಾಳು, ರಕ್ಷಿತಾ ಸೇರಿ 9 ಮಂದಿ ನಾಮಿನೇಟ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಈ ವಾರ ಒಟ್ಟು 9 ಜನರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹತ್ತಿರ ಆಗಲಿರುವುದರಿಂದ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಎಲ್ಲರೂ ಕಷ್ಟಪಡಬೇಕಿದೆ. ಆದರೆ ಧ್ರುವಂತ್ ಎಲಿಮಿನೇಟ್ ಆಗಲು ಸಿದ್ಧವಾಗಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ರಿಯಾಲಿಟಿ ಶೋನಲ್ಲಿ ಈಗಾಗಲೇ 65 ದಿನಗಳು ಕಳೆದಿವೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗಬೇಕು ಎಂಬ ಚರ್ಚೆ ನಡೆದಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಎಲ್ಲ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಒಟ್ಟು 9 ಮಂದಿ ನಾಮಿನೇಟ್ ಆಗಿದ್ದಾರೆ. ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ (Rakshitha Shetty) ಅವರು ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ನೋಡಲು ಬಿಗ್ ಬಾಸ್ ವೀಕ್ಷಕರು ಕಾದಿದ್ದಾರೆ.
ನಾಮಿನೇಷನ್ ಮಾಡುವಾಗ ಕಾವ್ಯಾ ಮತ್ತು ಗಿಲ್ಲಿ ಸ್ನೇಹದ ಬಗ್ಗೆ ಭಾರಿ ತಕರಾರು ವ್ಯಕ್ತವಾಯಿತು. ಆದರೆ ಅದನ್ನು ಗಿಲ್ಲಿ ಮತ್ತು ಕಾವ್ಯ ಅವರು ತಳ್ಳಿ ಹಾಕಿದರು. ಅದೇ ರೀತಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಅವರು ಸದಾ ಕಾಲ ಒಟ್ಟಿಗೆ ಇರುತ್ತಾರೆ ಎಂಬ ಟೀಕೆ ಕೂಡ ಬಂತು. ಆ ಕಾರಣದಿಂದಲೇ ಅವರಿಬ್ಬರು ನಾಮಿನೇಟ್ ಆದರು.
ಧ್ರುವಂತ್ ಅವರು ಬಿಗ್ ಬಾಸ್ ಆಟದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ತಾವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಅವರು ಸಿದ್ಧರಾಗಿದ್ದಾರೆ. ತಮ್ಮ ಮೇಲೆಯೇ ಅವರಿಗೆ ಆತ್ಮವಿಶ್ವಾಸ ಇಲ್ಲ. ಪ್ರತಿ ವಾರ ಅವರು ಬ್ಯಾಗ್ ಪ್ಯಾಕ್ ಮಾಡಿಕೊಂಡು ಸಜ್ಜಾಗುತ್ತಾರೆ. ಅದೇ ಕಾರಣದಿಂದ ಧ್ರುವಂತ್ ಅವರನ್ನು ಅನೇಕರು ನಾಮಿನೇಟ್ ಮಾಡಿದ್ದಾರೆ. ನಾಮಿನೇಷನ್ ವೇಳೆ ಅವರ ಬೆನ್ನಿಗೆ 11 ಚೂರಿ ಹಾಕಲಾಯಿತು.
‘2ನೇ ವಾರದಲ್ಲೇ ನಾನು ಹೊರಗೆ ಹೋಗಲು ಫಿಕ್ಸ್ ಆಗಿದ್ದೆ. ಅದಕ್ಕೆ ನಾನು ಯಾವತ್ತೂ ಹೆದರಲೇ ಇಲ್ಲ. ಅದನ್ನು ಈಗ ಓಪನ್ ಆಗಿ ಹೇಳುತ್ತಿದ್ದೇನೆ. ಆದರೆ ನನ್ನ ಆಟಕ್ಕೆ ನಾನು ಯಾವತ್ತೂ ಮೋಸ ಮಾಡಿಕೊಳ್ಳಲ್ಲ’ ಎಂದು ಧ್ರುವಂತ್ ಅವರು ಹೇಳಿದ್ದಾರೆ. ‘ನೀವು ಇಲ್ಲಿ ಇರಲೇಬೇಕು. ನೀವು ನನಗೆ ಉತ್ತಮ ಪೈಪೋಟಿ ನೀಡುತ್ತೀರಿ’ ಎಂದು ಧ್ರುವಂತ್ ಅವರಿಗೆ ಗಿಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ಲಿನೇ ಬಿಗ್ ಬಾಸ್ ಟ್ರೋಫಿ ಗೆಲ್ಲೋದು: ಭವಿಷ್ಯ ನುಡಿದ ಜಾಹ್ನವಿ
ಅಚ್ಚರಿ ಎಂದರೆ ಆರಂಭದ ವಾರಗಳಲ್ಲಿ ಸಿಕ್ಕಾಪಟ್ಟೆ ವೈಲೆಂಟ್ ಆಗಿದ್ದ ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆ ಕಾರಣದಿಂದಲೇ ನಾಮಿನೇಷನ್ನಿಂದ ಪಾರಾಗಿದ್ದಾರೆ. ಜಾಹ್ನವಿ ಎಲಿಮಿನೇಟ್ ಆದ ಬಳಿಕ ಅವರು ಮೌನಕ್ಕೆ ಜಾರಿದ್ದಾರೆ. ಅವರು ಈ ಪರಿ ಸೈಲೆಂಟ್ ಆಗಿದ್ದಾರೆ ಎಂಬ ಕಾರಣದಿಂದ ಮುಂದಿನ ವಾರ ಅವರನ್ನು ನಾಮಿನೇಟ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




