ಕಿರುತೆರೆಯ ಖ್ಯಾತ ನಟ ವಿಕಾಸ್ ಸೇಥಿ ಹೃದಯಾಘಾತದಿಂದ ನಿಧನ; ಹಬ್ಬದ ನಡುವೆ ಕಹಿಸುದ್ದಿ
ಖ್ಯಾತ ನಟ ವಿಕಾಸ್ ಸೇಥಿ ಅವರಿಗೆ ಆರ್ಥಿಕ ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಭಾನುವಾರ (ಸೆಪ್ಟೆಂಬರ್ 8) ಮಲಗಿರುವಾಗಲೇ 48ರ ಪ್ರಾಯದ ವಿಕಾಸ್ ಸೇಥಿ ಅವರಿಗೆ ಹೃದಯಾಘಾತ ಆಗಿದೆ. ಮುಂಬೈನಲ್ಲಿ ಅವರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..
ಹಿಂದಿ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟ ವಿಕಾಸ್ ಸೇಥಿ ಅವರ ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಇಂದು (ಸೆಪ್ಟೆಂಬರ್ 8) ಕೊನೆಯುಸಿರು ಎಳೆದಿದ್ದಾರೆ. ವಿಕಾಸ್ ಸೇಥಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದ ಎಲ್ಲರಿಗೂ ಈ ಸುದ್ದಿ ಕೇಳಿ ಶಾಕ್ ಆಗಿದೆ. ಹಬ್ಬದ ನಡುವೆ ಸೂತಕದ ಛಾಯೆ ಆವರಿಸಿದೆ. ವಿಕಾಸ್ ಸೇಥಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಪ್ರಾರ್ಥಿಸಿದ್ದಾರೆ.
ನಿದ್ರೆಯಲ್ಲಿ ಇರುವಾಗಲೇ ವಿಕಾಸ್ ಸೇಥಿ ಅವರಿಗೆ ಹೃದಯಾಘಾತ ಆಗಿದೆ. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಅವರ ಉಸಿರು ನಿಂತಿತ್ತು. ಈ ವಿಷಯ ತಿಳಿದ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ವಿಕಾಸ್ ಸೇಥಿ ಅವರು ಸಕ್ರಿಯರಾಗಿದ್ದಾರೆ. ಸೀರಿಯಲ್ಗಳು ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿ ಅವರು ಹೆಸರು ಗಳಿಸಿದ್ದರು.
ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ, ಕಸೌಟಿ ಜಿಂದಗಿ ಕೆ, ಕಹಿ ತೋ ಹೋಗಾ, ಕೆ. ಸ್ಟ್ರೀಟ್ ಪಾಲಿ ಹಿಲ್, ಹಮಾರಿ ಬೇಟಿಯೋಂಕಾ ವಿವಾಹ್, ಡರ್ ಸಬ್ಕೋ ಲಗ್ತಾ ಹೈ, ಸಂಸ್ಕಾರ್ ಲಕ್ಷ್ಮಿ, ಸರುರಾಲ್ ಸಿಮರ್ ಕಾ ಮುಂತಾದ ಧಾರಾವಾಹಿಗಳಲ್ಲಿ ವಿಕಾಸ್ ಸೇಥಿ ನಟಿಸಿದ್ದರು. ‘ದೀವಾನಾಪನ್’, ‘ಕಭಿ ಖುಷಿ ಕಭಿ ಗಮ್’, ‘ಓಪ್ಸ್’, ‘ಇಸ್ಮಾರ್ಟ್ ಶಂಕರ್’ ಮುಂತಾದ ಸಿನಿಮಾಗಳಲ್ಲಿ ಕೂಡ ವಿಕಾಸ್ ಸೇಥಿ ಅವರು ಅಭಿನಯಿಸಿದ್ದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಹೃದಯಾಘಾತ, ಜೀವ ಉಳಿಸಲು ವೈದ್ಯರ ಹೋರಾಟ ಹೇಗಿತ್ತು ನೋಡಿ…
2021ರಲ್ಲಿ ವಿಕಾಸ್ ಸೇಥಿ ಅವರಿಗೆ ಕಾಲಿನ ಸರ್ಜರಿ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫಿಟ್ನೆಸ್ ಬಗ್ಗೆ ಅವರು ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಸ್ವಂತ ನಿರ್ಮಾಣ ಸಂಸ್ಥೆಯನ್ನು ಅವರು ಆರಂಭಿಸಿದ್ದರು. ಇತ್ತೀಚೆಗೆ ವಿಕಾಸ್ ಸೇಥಿ ಅವರಿಗೆ ಹಣಕಾಸಿನ ತೊಂದರೆ ಆಗಿತ್ತು ಎನ್ನಲಾಗಿದೆ. ಆ ಕಾರಣದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೂಡ ಕೇಳಿಬರುತ್ತಿದೆ. ಈ ಬಗ್ಗೆ ಕುಟುಂಬದವರ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.