ವಿವಾದಗಳ ನಡುವೆಯೂ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದ ಇಂಡಿಯನ್ ಐಡಲ್ (Indian Idol 12) ಸಿಂಗಿಂಗ್ ರಿಯಾಲಿಟಿ ಶೋ 12ನೇ ಸೀಸನ್ ಅಂತ್ಯವಾಗಿದೆ. ಈ ಸೀಸನ್ನ ವಿನ್ನರ್ ಆಗಿ ಪವನ್ದೀಪ್ ರಾಜನ್ (Pawandeep Rajan) ಹೊರಹೊಮ್ಮಿದ್ದಾರೆ. ಬರೋಬ್ಬರಿ 9 ತಿಂಗಳ ಕಾಲ ಪ್ರಸಾರವಾದ ಈ ರಿಯಾಲಿಟಿ ಶೋಗೆ ಆ.15ರಂದು ಫಿನಾಲೆ ನಡೆಯಿತು. ಆರು ಗಾಯಕರು ಫಿನಾಲೆ ಪ್ರವೇಶಿಸಿದ್ದರು. ಅಂತಿಮವಾಗಿ ಉತ್ತರಾಖಂಡ್ ಮೂಲದ ಪವನ್ದೀಪ್ ರಾಜನ್ ಅವರು ಜಯಶಾಲಿ ಆದರು. ಅರುಣಿತಾ ಕಂಜಿಲಾಲ್ (Arunita Kanjilal) ಹಾಗೂ ಸಾಯಿಲಿ ಕಾಂಬಳೆ (Sayli Kamble) ಅವರು ಅನುಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.
ಇಂಡಿಯನ್ ಐಡಲ್ 12ರ ವಿನ್ನರ್ ಪಟ್ಟ ಪಡೆದ ಪವನ್ದೀಪ್ ಅವರಿಗೆ ಆಕರ್ಷಕ ಟ್ರೋಫಿ ಜೊತೆಗೆ ಬಹುಮಾನವಾಗಿ 12 ಲಕ್ಷ ರೂ. ಮತ್ತು ಒಂದು ಕಾರು ನೀಡಲಾಗಿದೆ. ಟ್ರೋಫಿ ಮತ್ತು ಚೆಕ್ ಜೊತೆಗೆ ಅವರು ನಿಂತು ಪೋಸ್ ನೀಡಿರುವ ಫೋಟೋ ವೈರಲ್ ಆಗಿದ್ದು, ಎಲ್ಲರಿಂದಲೂ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ.
‘ಇಂಡಿಯಲ್ ಐಡಲ್ ವೇದಿಕೆಯಲ್ಲಿ ಗಾಯಕರಿಗೆ ತುಂಬ ಗೌರವ ಸಿಗುತ್ತದೆ. ಇಲ್ಲಿ ಸಿಗುವಂತಹ ಅವಕಾಶಗಳಿಗೆ ಹೋಲಿಕೆಯೇ ಇಲ್ಲ. ಹಲವು ಗೀತೆಗಳನ್ನು ಹಾಡುವ ನಮಗೆ ಬೆಸ್ಟ್ ನಿರ್ಣಾಯಕರು ಮತ್ತು ಅತಿಥಿಗಳಿಂದ ಸೂಕ್ತ ಮಾರ್ಗದರ್ಶನ ಸಿಕ್ಕಿತು. ಗೆಲುವಿಗಾಗಿ ನಾನು ಇಲ್ಲಿಗೆ ಬಂದವನಲ್ಲ. ಕಲಿಕೆಯ ಹಂಬಲದಿಂದ ಈ ಶೋನಲ್ಲಿ ಭಾಗವಹಿಸಿದ್ದೆ’ ಎಂದು ಪವನ್ದೀಪ್ ರಾಜನ್ ಹೇಳಿದ್ದಾರೆ.
ಮೊದಲ ಮತ್ತು ಎರಡನೇ ರನ್ನರ್ ಅಪ್ ಆದ ಅರುಣಿತಾ ಕಂಜಿಲಾಲ್ ಹಾಗೂ ಸಾಯಿಲಿ ಕಾಂಬಳೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಯಿತು. ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ ಮುಂತಾದವರು ಫಿನಾಲೆಗೆ ಅತಿಥಿಗಳಾಗಿ ಆಗಮಿಸಿದ್ದರು. ಹಿಮೇಶ್ ರೇಷಮ್ಮಿಯಾ, ಸೋನು ಕಕ್ಕರ್, ವಿಶಾಲ್ ದದ್ಲಾನಿ, ಅನು ಮಲಿಕ್ ಜಡ್ಜ್ ಆಗಿದ್ದರು. ಆದಿತ್ಯ ನಾರಾಯಣ್, ಭಾರತಿ ಸಿಂಗ್, ಹರ್ಷಾ ಲಿಂಬಾಚಿಯಾ ಅವರು ಫಿನಾಲೆ ಸಂಚಿಕೆಯ ನಿರೂಪಣೆ ಮಾಡಿದರು.
ಪವನ್ದೀಪ್ ಅವರು ಮೊದಲ ದಿನದಿಂದಲೇ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದರು. ಅದ್ಭುತ ಕಂಠದ ಮೂಲಕ ಜಡ್ಜ್ಗಳ ಗಮನ ಸೆಳೆದಿದ್ದರು ಪವನ್ದೀಪ್. ಗಿಟಾರ್ ಅಥವಾ ಪಿಯಾನೋ ನುಡಿಸುತ್ತಲೇ ಹಾಡನ್ನು ಹಾಡುವ ಕಲೆ ಪವನ್ದೀಪ್ಗೆ ಕರಗತವಾಗಿದೆ. ಈ ಎಲ್ಲಾ ಕಾರಣಕ್ಕೆ ಅವರು ವೀಕ್ಷಕರಿಗೆ ಹಾಗೂ ಜಡ್ಜ್ಗಳಿಗೆ ಇಷ್ಟವಾಗಿದ್ದಾರೆ. ಅಂತಿಮವಾಗಿ ಅವರು ಜಯಶಾಲಿಯಾಗಿದ್ದಾರೆ. ಚಂಡೀಗಢದಲ್ಲಿ ತಮ್ಮದೇ ಮ್ಯೂಸಿಕ್ ಬ್ಯಾಂಡ್ ಹೊಂದಿದ್ದಾರೆ ಪವನ್ದೀಪ್. ಕುಮಾನ್ ವಿಶ್ವವಿದ್ಯಾಲಯದಲ್ಲಿ ಅವರು ಸಂಗೀತ ಪದವಿ ಪಡೆದಿದ್ದಾರೆ.
ಇದನ್ನೂ ಓದಿ:
‘ಇದು ಮೋಸದ ಎಲಿಮಿನೇಷನ್’; ಇಂಡಿಯನ್ ಐಡಲ್ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ
ಕೆಟ್ಟ ಗಾಯನ ಕೇಳಿ ಇಂಡಿಯನ್ ಐಡಲ್ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್