ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸದಾ ಅಮೆರಿಕಕ್ಕೆ ತೆರಳುವ ಆಲೋಚನೆಯಲ್ಲೇ ಇರುತ್ತಿದ್ದ ಆರಾಧನಾ ಮನೆಯಲ್ಲೇ ಉಳಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ. ಸಂಜು ವಿಶ್ವ ಅಲ್ಲ ಆತ ಆರ್ಯವರ್ಧನ್ ಎನ್ನುವ ಸತ್ಯವನ್ನು ಹೇಳಿದರೂ ಆರಾಧನಾ ನಂಬಲಿಲ್ಲ. ಹೇಗಾದರೂ ಮಾಡಿ ತನ್ನ ಪತಿಯನ್ನು ಮರಳಿ ಪಡೆದೇ ಪಡೆಯುತ್ತೇನೆ ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಮತ್ತೊಂದು ಕಡೆ ಮೀರಾ ವರ್ಧನ್ ಕಂಪನಿಗೆ ರಿಸೈನ್ ಮಾಡಿ ಡ್ರಾಮಾ ಶುರು ಮಾಡಿದ್ದಾಳೆ.
ಮೀರಾಗೆ ಶುರುವಾಗಿದೆ ಭಯ
ಆರ್ಯವರ್ಧನ್ನ ಮರಳಿ ತಂದುಕೊಡುತ್ತೇನೆ ಎನ್ನುವ ಆಮಿಷವನ್ನು ಮೀರಾಗೆ ಝೇಂಡೆ ಒಡ್ಡಿದ್ದಾನೆ. ಇದಕ್ಕೆ ಪ್ರತಿಯಾಗಿ ಕಂಪನಿಯಲ್ಲಿ ತನಗೆ ಸ್ಥಾನ ನೀಡಬೇಕು ಎಂದು ಆತ ಕೋರಿದ್ದಾನೆ. ಈ ಆಮಿಷಕ್ಕೆ ಮೀರಾ ಬಲಿಯಾಗಿದ್ದಾಳೆ. ಝೇಂಡೆಯನ್ನು ಕಂಪನಿಗೆ ಮತ್ತೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು ಮೀರಾ ಆಲೋಚನೆ. ಇದಕ್ಕಾಗಿ ಆಕೆ ರಿಸೈನ್ ನಾಟಕ ಆಡಿದ್ದಾಳೆ.
ವರ್ಧನ್ ಕಂಪನಿಗೆ ಆಕೆ ರಿಸೈನ್ ಏನೋ ಮಾಡಿದ್ದಾಳೆ. ಆದರೆ, ಇದರಿಂದ ಆಗುವ ತೊಂದರೆಗಳ ಬಗ್ಗೆ ಆಕೆ ಆಲೋಚಿಸಿಯೇ ಇಲ್ಲ. ‘ಕಂಪನಿಯಿಂದ ಹೊರಹೋಗು ಎಂದುಬಿಟ್ಟರೆ ಅಥವಾ ನಾನು ಮಾಡುತ್ತಿರುವುದು ಡ್ರಾಮಾ ಎಂದು ಗೊತ್ತಾದರೆ’ ಎಂಬಿತ್ಯಾದಿ ಪ್ರಶ್ನೆಗಳನ್ನು ಮೀರಾ ತನಗೆ ತಾನೇ ಕೇಳಿಕೊಂಡಿದ್ದಾಳೆ. ಇದರಿಂದ ಆಕೆ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾಳೆ.
ಒಪ್ಪಂದದ ಮಾತು
ಮೀರಾಳನ್ನು ಯಾರೂ ಕೆಲಸದಿಂದ ತೆಗೆಯಲು ಬರುವುದಿಲ್ಲ ಹಾಗೆಯೇ ಅವಳು ಕಂಪನಿ ಬಿಟ್ಟು ಹೋಗಲೂ ಸಾಧ್ಯವಿಲ್ಲ. ಇದು ಕಂಪನಿಯ ಒಪ್ಪಂದದಲ್ಲೇ ಇದೆ. ಇದು ಸಂಜುಗೆ ನೆನಪು ಬಂದಿದೆ. ವರ್ಧನ್ ಕಂಪನಿಯನ್ನು ಮೀರಾ ಬಿಟ್ಟು ಹೋಗುವ ಬಗ್ಗೆ ಅನು ಹಾಗೂ ಹರ್ಷವರ್ಧನ್ ಮಾತನಾಡುತ್ತಿದ್ದರು. ಆ ಸಮಯಕ್ಕೆ ಬಂದ ಸಂಜು ಮೀರಾ ಜತೆ ಆದ ಒಪ್ಪಂದವನ್ನು ನೆನಪಿಸಿದ್ದಾನೆ. ಆಕೆ ಕಂಪನಿ ತೊರೆಯಲು ಸಾಧ್ಯವಿಲ್ಲ ಎಂದಿದ್ದಾನೆ.
ಸಂಜುಗೆ ತಿಳಿಯಿತು ಸಂಚು
ಮಾನ್ಸಿ ಬರ್ತ್ಡೇ ಹಿನ್ನೆಲೆಯಲ್ಲಿ ರಾಜ ನಂದಿನಿ ವಿಲಾಸಕ್ಕೆ ಮೀರಾ ಬಂದಿದ್ದಾಳೆ. ಬಂದು ಮೀರಾಗೆ ವಿಶ್ ಮಾಡಿದ್ದಾಳೆ. ಈ ಮನೆಯ ಜತೆ ಮೀರಾ ಹೊಂದಿದ ಬಾಂಧವ್ಯ ನೋಡಿ ಸಂಜುಗೆ ಅಚ್ಚರಿ ಆಗಿದೆ. ಇಷ್ಟೊಂದು ಕ್ಲೋಸ್ ಇದ್ದ ಹೊರತಾಗಿಯೂ ಮೀರಾ ರಿಸೈನ್ ಮಾಡುವ ನಿರ್ಧಾರದ ಬಗ್ಗೆ ಅನುಮಾನ ಮೂಡಿದೆ.
‘ಕುಟುಂಬದವರ ಜತೆ ಮೀರಾ ಇಷ್ಟೊಂದು ಕ್ಲೋಸ್ ಆಗಿದ್ದಾರೆ. ಆದರೆ ಕೇಳಿದರೆ ಒಂದೇ ಕಡೆ ನಿಲ್ಲಬಾರದು, ಈ ಕಾರಣಕ್ಕೆ ಕಂಪನಿ ಚೇಂಜ್ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ಅವರು ಕಂಪನಿಯಿಂದ ಹೊರ ನಡೆಯೋಕೆ ಹೇಗೆ ಸಾಧ್ಯ? ಇದರ ಹಿಂದೆ ಏನೋ ಸಂಚಿದೆ’ ಎಂಬ ಅನುಮಾನ ಸಂಜುಗೆ ಬಂದಿದೆ. ಸಂಜುಗೆ ಒಮ್ಮೆ ಅನುಮಾನ ಬಂದರೆ ಮುಗಿಯಿತು. ಅದರ ಬೆನ್ನತ್ತಿ ಹೋಗೋದು ಆತನ ಗುಣ. ಈಗಲೂ ಆತ ಹಾಗೆಯೇ ಮಾಡಬಹುದು ಎನ್ನಲಾಗುತ್ತಿದೆ.
ಆರಾಧನಾ ವಿರುದ್ಧ ಕೋಪಗೊಂಡು ಸಂಜು
ಬೇಗ ಅಮೆರಿಕಕ್ಕೆ ಹೋಗೋಣ, ಅಲ್ಲಿ ಚಿಕಿತ್ಸೆ ಪಡೆಯೋಣ ಎಂದು ಸಂಜು ಬಳಿ ಆರಾಧನಾ ಹೇಳುತ್ತಲೇ ಇದ್ದಳು. ಇದರಿಂದ ಸಂಜುಗೆ ಸಿಟ್ಟು ಬಂದಿದೆ. ನಾನು ಸದ್ಯಕ್ಕಂತೂ ಅಮೆರಿಕಕ್ಕೆ ಬರುವುದಿಲ್ಲ ಎಂದಿದ್ದಾನೆ. ‘ನಾನು ಸದ್ಯ ವರ್ಧನ್ ಕಂಪನಿಯಲ್ಲಿ ನಡೆದ ಒಂದಷ್ಟು ಅಕ್ರಮ ಕಂಡು ಹಿಡಿದಿದ್ದೇನೆ. ಅದನ್ನು ಸಾಬೀತುಪಡಿಸಿದ ನಂತರವೇ ನಾನು ಬರೋದು. ಆ ಜವಾಬ್ದಾರಿ ನನ್ನ ಮೇಲಿದೆ’ ಎಂದು ಹೇಳಿದ್ದಾನೆ. ಈ ಮೂಲಕ ಸದ್ಯಕ್ಕಂತೂ ಆತ ವಿದೇಶಕ್ಕೆ ಬರುವುದಿಲ್ಲ ಎಂದು ಹೇಳಿದ್ದಾನೆ.
ಶ್ರೀಲಕ್ಷ್ಮಿ ಎಚ್.