ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ತಂಡದ ಒಳಗಿನ ರಂಪಾಟ ಜಗಜ್ಜಾಹೀರಾಗಿದೆ. ಈ ವಿವಾದ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಧಾರಾವಾಹಿ ನಿರ್ಮಾಪಕರಾದ ಆರೂರು ಜಗದೀಶ್ (Aroor Jagadish) ಅವರು ನಟ ಅನಿರುದ್ಧ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳಿಗೆಲ್ಲ ಪ್ರತ್ಯುತ್ತರ ನೀಡಿರುವ ಅನಿರುದ್ಧ್ ಅವರು ಈಗಾಗಲೇ ತಮ್ಮ ವಾದ ಮಂಡಿಸಿದ್ದಾರೆ. ಈ ನಡುವೆ ಅನಿರುದ್ಧ್ ಅವರ ಮಹಿಳಾ ಅಭಿಮಾನಿಗಳು ಆರೂರು ಜಗದೀಶ್ ವಿರುದ್ಧ ಗರಂ ಆಗಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಧಾರಾವಾಹಿಯಿಂದ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಅಭಿಮಾನಿಗಳು ಧ್ವನಿ ಎತ್ತಿದ್ದಾರೆ. ‘ಧಾರಾವಾಹಿ ತಂಡದಲ್ಲಿ ಮನಸ್ತಾಪ ಆದಾಗ ಅದನ್ನು ಅವರೇ ಒಳಗೆ ಬಗೆಹರಿಸಿಕೊಳ್ಳಬೇಕು. ಅದರ ಬದಲು ಸಾರ್ವಜನಿಕವಾಗಿ ಮಾತನಾಡಬಾರದಿತ್ತು’ ಎಂದು ನಟ ಅನಿರುದ್ಧ್ (Aniruddh Jatkar) ಅವರ ಮಹಿಳಾ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘20ನೇ ಸಂಚಿಕೆಯಲ್ಲಿ ಆದ ತೊಂದರೆಗಳನ್ನು 700 ಎಪಿಸೋಡ್ ನಂತರ ಹೇಳಿದ್ದು ಎಷ್ಟು ಸರಿ? ಆರೂರು ಜಗದೀಶ್ ಅವರಿಗೆ ಹೊಟ್ಟೆಕಿಚ್ಚು. ನಟರು ಮೊದಲೇ ಸೀನ್ ಪೇಪರ್ ಕೊಡಿ ಅಂತ ಕೇಳುವುದೇ ತಪ್ಪಾ? ಬಹಿಷ್ಕಾರ ಮಾಡಿದ್ದರಲ್ಲಿ ದುರುದ್ದೇಶ ಕಾಣುತ್ತಿದೆ. ಇದು ಬೇರೆ ಎಲ್ಲ ಕಲಾವಿದರಿಗೂ ಒಂದು ವಾರ್ನಿಂಗ್ ರೀತಿ ಇದೆ. ಯಾವುದೇ ನಟ-ನಟಿಯರು ಧ್ವನಿ ಎತ್ತಿದರೆ ಅವರಿಗೂ ಹೀಗೆಯೇ ಆಗಲಿದೆ ಎಂಬಂತಾಗಿದೆ’ ಎಂದು ಅಭಿಮಾನಿಗಳು ಹೇಳಿದ್ದಾರೆ.
‘ಜೊತೆ ಜೊತೆಯಲಿ’ ಧಾರಾವಾಹಿ ತಂತ್ರಜ್ಞರಿಗೆ ಅನಿರುದ್ಧ್ ಅವರು ಸರಿಯಾಗಿ ಸಹಕಾರ ನೀಡಿಲ್ಲ ಎಂಬುದು ನಿರ್ಮಾಪಕ ಆರೂರು ಜಗದೀಶ್ ಅವರ ಆರೋಪ. ಆ ಕಾರಣದಿಂದ ನಿರ್ಮಾಪಕರ ಸಂಘದವರು ಅನಿರುದ್ಧ್ ಅವರನ್ನು ಎರಡು ವರ್ಷ ಕಿರುತರೆಯಿಂದ ಹೊರಗಿಡುವ ಬಗ್ಗೆ ನಿರ್ಧರಿಸಿರುವ ವಿಚಾರ ತಿಳಿದುಬಂದಿದೆ. ಇದನ್ನು ಅಭಿಮಾನಿಗಳು ವಿರೋಧಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಅನಿರುದ್ಧ್ ಅವರ ಮಹಿಳಾ ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಧಾರಾವಾಹಿಗೆ ಅನಿರುದ್ಧ್ ವಾಪಸ್ ಬರಬೇಕು. ಆ ಮೂಲಕ ನ್ಯಾಯ ಸಿಗಬೇಕು’ ಎಂದು ಫ್ಯಾನ್ಸ್ ಒತ್ತಾಯಿಸಿದ್ದಾರೆ.
ಆರೂರು ಜಗದೀಶ್ ಆಡಿಯೋ ವೈರಲ್:
ದೂರವಾಣಿಯಲ್ಲಿ ಅಭಿಮಾನಿ ಜೊತೆ ಮಾತನಾಡಿರುವ ಆರೂರು ಜಗದೀಶ್ ಅವರು, ‘ಯಾವತ್ತಿದ್ದರೂ ಅನಿರುದ್ಧ್ ಹೀರೋ’ ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ. ‘ಧಾರಾವಾಹಿಯನ್ನು ಕಥೆಯಾಗಿ ನೋಡಬೇಕು. ಒಂದೇ ಪಾತ್ರದ ಆಯಾಮದಿಂದ ನೋಡಿದಾಗ ಹೀಗೆ ಆಗತ್ತೆ. ಪಾತ್ರದಲ್ಲಿ ಭಿನ್ನತೆ ಇರಬೇಕು. ಫ್ಲ್ಯಾಶ್ ಬ್ಯಾಕ್ ಶೂಟಿಂಗ್ ಆಗಿದೆ. ಈಗ ಅದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಟಿಆರ್ಪಿ ಮುಖ್ಯವಲ್ಲ. ನಾವು ಒಳ್ಳೆಯ ಧಾರಾವಾಹಿ ಮಾಡುತ್ತಿದ್ದೇವೆ’ ಎಂದು ಹೇಳಿರುವುದು ವೈರಲ್ ಆಡಿಯೋ ಕ್ಲಿಪ್ನಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:21 pm, Tue, 23 August 22