ತೆರೆ ಮೇಲೆ ಹೀರೋ ಆಗಿ ನೋಡುತ್ತಿದ್ದವರನ್ನು ವಿಲನ್ ಆಗಿ ನೋಡೋಕೆ ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ಬೇಗ ಒಗ್ಗಿಕೊಳ್ಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುವುದಿಲ್ಲ. ಈಗ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲೂ (Jothe Jotheyali Serial) ಅದೇ ಆಗಿದೆ. ಈ ಧಾರಾವಾಹಿಯಲ್ಲಿ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ನಿರ್ವಹಿಸುತ್ತಿರುವ ಆರ್ಯವರ್ಧನ್ (Aryavardhan ) ಪಾತ್ರ ನಿಧಾನವಾಗಿ ನೆಗೆಟಿವ್ ಶೇಡ್ಗೆ ತಿರುಗುತ್ತಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ‘ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಒಂದು ವರ್ಗದವರು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಅನಿರುದ್ಧ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜತೆ ಮಾತನಾಡಿದ್ದಾರೆ. ‘ಓರ್ವ ಕಲಾವಿದನಾಗಿ ಈ ಪಾತ್ರವನ್ನು ತುಂಬಾನೇ ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಅವರು.
ಈ ಮೊದಲು ಕೂಡ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್ಗಳು ಬಂದಿದ್ದವು. ಈಗ ಸಿಕ್ಕಿರುವ ತಿರುವನ್ನು ಯಾರೂ ಊಹಿಸಿರಲಿಲ್ಲ. ಆರ್ಯವರ್ಧನ್ ವಿಲನ್ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಈ ಬಗ್ಗೆ ಅನಿರುದ್ಧ ಮಾತನಾಡಿದ್ದಾರೆ. ‘ತಿರುವುಗಳು ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ. ನಾವು ಮೊದಲಿನಿಂದಲೂ ಟ್ವಿಸ್ಟ್ಗಳನ್ನು ನೀಡುತ್ತಲೇ ಬಂದಿದ್ದೇವೆ. ಆರ್ಯವರ್ಧನ್ ಪಾತ್ರಕ್ಕೆ ಸಾಕಷ್ಟು ಆಯಾಮಗಳಿವೆ. ಎಲ್ಲ ತರಹದ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ನನಗೆ ಈ ಪಾತ್ರದ ಮೂಲಕ ಸಿಕ್ಕಿದೆ. ನನ್ನ ಪಾತ್ರ ನೆಗೆಟಿವ್ ಶೇಡ್ ಪಡೆದುಕೊಂಡಿದೆ. ಒಂದು ರೀತಿಯಲ್ಲಿ ವಿಲನ್ ಎಂದೇ ಹೇಳಬಹುದು. ಕಥೆಯಲ್ಲಿ ಮುಂದೆ ಹೋಗುತ್ತಾ ಏನಾಗುತ್ತದೆ ಎಂಬುದು ನನಗೂ ಗೊತ್ತಿಲ್ಲ’ ಎಂದಿದ್ದಾರೆ ಅನಿರುದ್ಧ.
ಧಾರಾವಾಹಿಯಲ್ಲಿ ಈ ಕ್ಷಣ ಏನು ಸಾಗುತ್ತಿದೆಯೋ ಅದನ್ನು ಆನಂದಿಸಬೇಕು ಎಂಬುದು ಅನಿರುದ್ಧ ಮನವಿ. ‘ಗುರಿ ತಲುಪೋದು ಇದ್ದೇ ಇದೆ. ಪ್ರವಾಸದ ಪ್ರತಿ ಹಂತವನ್ನೂ ನಾವು ಆನಂದಿಸಬೇಕು. ಹೀರೋನೆ ವಿಲನ್ ಆಗಿರೋದು ಕನ್ನಡ ಕಿರುತೆರೆ ಲೋಕದಲ್ಲಿ ಇದೇ ಮೊದಲು. ಈ ಹಂತವನ್ನೂ ಆನಂದಿಸೋಣ. ಈ ರೀತಿ ನಟಿಸೋಕೆ ಕಲಾವಿದನಾಗಿ ನನಗೆ ನಿಜಕ್ಕೂ ಖುಷಿ ಇದೆ. ಸಿನಿಮಾದಲ್ಲಿ ಈ ರೀತಿಯ ಪಾತ್ರ ಸಿಕ್ಕಿಲ್ಲ. ಆದರೆ, ಇಲ್ಲಿ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.
‘ಇದು ಆರಂಭವಾದ್ದರಿಂದ ವೀಕ್ಷಕರಿಗೆ ಇದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಆದರೆ, ಮುಂದೆ ಹೋಗುತ್ತಾ ಗೊತ್ತಾಗುತ್ತದೆ. ಓರ್ವ ಕಲಾವಿದನಾಗಿ ಈ ಪಾತ್ರವನ್ನು ನಾನು ಹೇಗೆ ಎಂಜಾಯ್ ಮಾಡುತ್ತಿದ್ದೇನೋ, ಅದೇ ರೀತಿ ವೀಕ್ಷಕರಾಗಿ ಅವರು ಈ ಪಾತ್ರವನ್ನು ನೋಡಿ ಸಂತೋಷ ಪಡಬೇಕು’ ಎಂದು ಅನಿರುದ್ಧ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಜೊತೆ ಜೊತೆಯಲಿ’ ನಿರ್ದೇಶಕರ ಹೊಸ ಸೀರಿಯಲ್ ‘ಪುಟ್ಟಕ್ಕನ ಮಕ್ಕಳು’; ಇದರಲ್ಲಿದೆ ವಿಶೇಷ ಕಥೆ
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಇದನ್ನು ನಾವು ಒಪ್ಪಲ್ಲ ಎಂದ ವೀಕ್ಷಕರು
Published On - 6:10 pm, Thu, 6 January 22