‘ಕನ್ನಡತಿ’ (Kannadathi Serial) ಧಾರಾವಾಹಿಯಲ್ಲಿ ನಟಿ ಭುವನೇಶ್ವರಿಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ಕಾರಣದಿಂದ ರತ್ನಮಾಲಾ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಆದರೆ, ಭುವಿ (Bhuvi) ಜೈಲಿಗೆ ತೆರಳಿದ ಕೆಲವೇ ಕ್ಷಣದಲ್ಲಿ ಹಿಂದಿರುಗಿದ್ದಾಳೆ. ಅವಳನ್ನು ಜೈಲಿಗೆ ಕಳುಹಿಸುವ ಮೂಲಕ ನಿರ್ದೇಶಕರು ಕಥೆಗೆ ಏನಾದರೂ ಹೊಸ ಟ್ವಿಸ್ಟ್ ಕೊಡಲು ಪ್ರಯತ್ನಸುತ್ತಿದ್ದಾರೆಯೇ ಎಂಬ ಬಗ್ಗೆ ಪ್ರೇಕ್ಷಕರಿಗೆ ಅನುಮಾನ ಮೂಡಿತ್ತು. ಆದರೆ, ಆ ರೀತಿ ಏನು ಆಗಿಲ್ಲ. ಅವಳು ಸುರಕ್ಷಿತವಾಗಿ ಜೈಲಿನಿಂದ ಹೊರ ಬಂದಿದ್ದಾಳೆ.
ರತ್ನಮಾಲಾ ಮನೆಯಲ್ಲಿ ನವರಾತ್ರಿ ಆಚರಣೆ ಆರಂಭಿಸಲಾಗಿತ್ತು. ಮೊದಲ ದಿನದ ಪೂಜೆ ಸಂದರ್ಭದಲ್ಲಿ ಪೊಲೀಸರ ಆಗಮನ ಆಗಿದೆ. ಹಿಟ್ ಆ್ಯಂಡ್ ರನ್ ಕೇಸ್ಗೆ ಸಂಬಂಧಿಸಿ ರತ್ನಮಾಲಾಳನ್ನು ಬಂಧಿಸೋಕೆ ಪೊಲೀಸರು ಬಂದಿದ್ದಾರೆ ಎಂಬ ವಿಚಾರ ತಿಳಿದ ಭುವನೇಶ್ವರಿ ತಪ್ಪು ತನ್ನದೇ ಎಂದು ಒಪ್ಪಿಕೊಂಡಿದ್ದಾಳೆ. ಜತೆಗೆ ಪೊಲೀಸರ ವಾಹನ ಹತ್ತಿ ಠಾಣೆಗೆ ತೆರಳಿದ್ದಾಳೆ.
ಪೊಲೀಸ್ ಠಾಣೆಗೆ ತೆರಳಿದ ಭುವನೇಶ್ವರಿ ಪೊಲೀಸರ ಬಳಿ ಏನಾಯಿತು ಎಂದು ಪದೇಪದೇ ಕೇಳುತ್ತಲೇ ಇದ್ದಳು. ಆಗ ಪೊಲೀಸರಿಗೆ ಅನುಮಾನ ಬಂದಿದೆ. ‘ನಿಜಕ್ಕೂ ಕಾರು ಚಲಾಯಿಸುತ್ತಿದ್ದು ನೀವೇನಾ? ಈ ಪ್ರಶ್ನೆಯನ್ನು ನಾನು ಆಗಲೇ ಕೇಳಿದ್ದೆ. ಆದರೆ, ನೀವು ಇದಕ್ಕೆ ಉತ್ತರಿಸಿಲ್ಲ. ನೀವು ಕಾರು ಓಡಿಸುತ್ತಿರಲಿಲ್ಲ ಎಂಬ ಅನುಮಾನ ಮೂಡುತ್ತಿದೆ. ಇದು ಹಿಟ್ ಆ್ಯಂಡ್ ರನ್ ಕೇಸ್. ಜಾಮೀನು ಸುಲಭಕ್ಕೆ ಸಿಗಲ್ಲ’ ಎಂದು ಪೊಲೀಸರು ಹೇಳುತ್ತಿದ್ದಂತೆ ಭುವಿಗೆ ಭಯ ಶುರುವಾಯಿತು.
ದೂರು ನೀಡಿದ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ಎಂಬ ವಿಚಾರ ಸಿಸಿಟಿವಿ ದೃಶ್ಯದಿಂದ ಸಾಬೀತಾಯಿತು. ಅಲ್ಲಿ ಕಾರು ಚಲಾಯಿಸಿಕೊಂಡು ಹೋಗಿದ್ದು ರತ್ನಮಾಲಾ. ಅವಳು ಕಾರನ್ನು ನಿಲ್ಲಿಸಿಕೊಂಡಿದ್ದಾಗ ಏಕಾಏಕಿ ಬೈಕ್ನವನು ಬಂದು ಕಾರಿಗೆ ಗುದ್ದಿದ್ದ. ಆದರೆ ಪೊಲೀಸರ ಬಳಿ ಆತ ಹೇಳಿದ್ದೇ ಬೇರೆ. ‘ರತ್ನಮಾಲಾ ಅವರು ಕಾರಿನಲ್ಲಿ ಬಂದು ನನ್ನ ಬೈಕ್ಗೆ ಗುದ್ದಿ ಹಾಗೆಯೇ ಓಡಿ ಹೋಗಿದ್ದಾರೆ’ ಎಂದು ದೂರು ನೀಡಿದ್ದ. ಈ ಕಾರಣಕ್ಕೆ ರತ್ನಮಾಲಾಳನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ರತ್ನಮಾಲಾಳಿಂದ ಹಣ ಕಿತ್ತುಕೊಳ್ಳಬೇಕು ಎಂಬುದು ದೂರು ನೀಡಿದ ವ್ಯಕ್ತಿಯ ಐಡಿಯಾ ಆಗಿತ್ತು. ಈ ಕಾರಣಕ್ಕೆ ದೂರು ನೀಡಿದ್ದ. ದೂರು ದಾಖಲಾದ ನಂತರದಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಈ ಕಾರಣಕ್ಕೆ ಭುವಿ ಮರಳಿ ಮನೆಗೆ ಬಂದಿದ್ದಾಳೆ.
ಇದನ್ನೂ ಓದಿ: ಭುವಿ ಮಾತನಾಡಿದ ಇಂಗ್ಲಿಷ್ ಕೇಳಿ ದಂಗಾದ ಸಾನಿಯಾ; ಹರ್ಷನಿಗೂ ಮೂಡಿತು ಅಚ್ಚರಿ
ಭುವಿ ಪೊಲೀಸ್ ಠಾಣೆಯಿಂದ ಹೊರ ಬರುತ್ತಿದ್ದಂತೆ ಆಕೆಯ ಮಾವ ಸುದರ್ಶನ್ ಕಾಣಿಸಿಕೊಂಡಿದ್ದಾನೆ. ತುಂಬಾನೇ ಪ್ರೀತಿಯಿಂದ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಮನೆಗೆ ಬಂದಿದ್ದಾನೆ. ದಾರಿಯಲ್ಲಿ ಬರುವಾಗ ಬೆಣ್ಣೆಯಲ್ಲಿ ಕೂದಲು ತೆಗೆದಂತಹ ಮಾತುಗಳನ್ನು ಆಡಿದ್ದಾನೆ ಸುದರ್ಶನ್. ‘ನೀನು ಮೊದಲೇ ಹೇಳಿದ್ದರೆ ನಾನು ಪೊಲೀಸರಿಂದ ನಿನ್ನನ್ನು ಬಚಾವ್ ಮಾಡುತ್ತಿದ್ದೆ. ನನಗೆ ದೊಡ್ಡದೊಡ್ಡವರ ಲಿಂಕ್ ಇದೆ. ನಾನು ನೋಡೋಕೆ ಅಷ್ಟೇ ಸಿಂಪಲ್. ಆದರೆ, ನನ್ನ ಪ್ರಭಾವ ನಿನಗೆ ಗೊತ್ತಿಲ್ಲ’ ಎಂದಿದ್ದಾನೆ ಸುದರ್ಶನ್. ಈ ರೀತಿಯ ಮಾತುಗಳನ್ನು ಕೇಳಿ ಭುವಿಗೆ ಅಚ್ಚರಿ ಆಗಿದೆ. ಯಾವುದೋ ಉದ್ದೇಶ ಇಟ್ಟುಕೊಂಡೇ ಸುದರ್ಶನ್ ಈ ರೀತಿ ಮಾತನ್ನು ಆಡುತ್ತಿದ್ದಾನೆ ಎಂಬ ಅನುಮಾನ ಆಕೆಗೆ ಮೂಡಿದೆ. ಅಲ್ಲದೆ, ಮನೆಗೆ ಬಂದ ನಂತರದಲ್ಲಿ ‘ಠಾಣೆಯಲ್ಲಿ ಸಣ್ಣ ಕಿರಿಕ್ ಆಗಿತ್ತು. ಈ ಕಾರಣಕ್ಕೆ ನಾನು ಠಾಣೆಗೆ ಹೋದೆ. ಭುವಿಯೇ ಬಂದು ನನ್ನನ್ನು ಬಚಾವ್ ಮಾಡಿದಳು’ ಎಂಬ ಮಾತನ್ನು ಹೇಳಿಕೊಂಡಿದ್ದಾನೆ ಸುದರ್ಶನ್. ಇದು ಭುವಿಯ ಅಚ್ಚರಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಶ್ರೀಲಕ್ಷ್ಮಿ ಎಚ್.