Kannadathi Serial: ಸುಖಾಂತ್ಯ ಕಂಡ ‘ಕನ್ನಡತಿ’ ಧಾರಾವಾಹಿ; 800ನೇ ಎಪಿಸೋಡ್ಗೆ ಶುಭಂ ಕಾರ್ಡ್
800ನೇ ಎಪಿಸೋಡ್ಗೆ ‘ಕನ್ನಡತಿ’ ಧಾರಾವಾಹಿ ಪೂರ್ಣಗೊಂಡಿದೆ. ವೀಕ್ಷಕರಿಗೆ ಧಾರಾವಾಹಿ ಸುಖಾಂತ್ಯ ಕಂಡ ಖುಷಿ ಒಂದು ಕಡೆ ಆದರೆ, ಧಾರಾವಾಹಿ ಮುಗಿದು ಹೋಯಿತು ಎನ್ನುವ ಬೇಸರ ಮತ್ತೊಂದು ಕಡೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ‘ಕನ್ನಡತಿ’ (Kannadathi Serial) ಧಾರಾವಾಹಿ ಇಂದು (ಫೆಬ್ರವರಿ 3) ಕೊನೆಗೊಳ್ಳುತ್ತಿದೆ. ಅಮ್ಮಮ್ಮ ತೀರಿ ಹೋದ ನಂತರದಲ್ಲಿ ಧಾರಾವಾಹಿ ಮುಗಿಯಲಿದೆ ಎನ್ನಲಾಗಿತ್ತು. ಹಾಗೆಯೇ ಆಗಿದೆ. ಅಮ್ಮಮ್ಮನ ಮನೆಯಲ್ಲಿ ಎಲ್ಲರೂ ಒಂದಾಗಿದ್ದಾರೆ. ಈ ಮೂಲಕ ಧಾರಾವಾಹಿ ಸುಖಾಂತ್ಯ ಕಂಡಿದೆ. ಈ ಮೂಲಕ 800ನೇ ಎಪಿಸೋಡ್ಗೆ ‘ಕನ್ನಡತಿ’ ಪೂರ್ಣಗೊಂಡಿದೆ. ವೀಕ್ಷಕರಿಗೆ ಧಾರಾವಾಹಿ ಸುಖಾಂತ್ಯ ಕಂಡ ಖುಷಿ ಒಂದು ಕಡೆ ಆದರೆ, ಧಾರಾವಾಹಿ ಮುಗಿದು ಹೋಯಿತು ಎನ್ನುವ ಬೇಸರ ಮತ್ತೊಂದು ಕಡೆ.
ಬದಲಾದ ಸಾನಿಯಾ
ಸಾನಿಯಾ ಸದಾ ಸಂಚು ರೂಪಿಸುತ್ತಲೇ ಬಂದವಳು. ಆಕೆ ಭುವಿಯನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಳು. ವರುದಿನಿಯನ್ನು ಹತ್ಯೆ ಮಾಡುವ ಆಲೋಚನೆಯೂ ಆಕೆಗೆ ಇತ್ತು. ಆದರೆ, ಕ್ಲೈಮ್ಯಾಕ್ಸ್ ವೇಳೆಗೆ ಆಕೆ ಬದಲಾಗಿದ್ದಾಳೆ. ಹೊಸದಾಗಿ ಕಟ್ಟುತ್ತಿದ್ದ ಆಸ್ಪತ್ರೆ ನೋಡಲು ಸಾನಿಯಾ, ಆಕೆಯ ಪತಿ ಆದಿ ಹಾಗೂ ಭುವಿ ಹೋಗಿದ್ದರು. ಈ ವೇಳೆ ಆದಿ ಆಯ ತಪ್ಪಿ ಕೆಳಗೆ ಬೀಳುವವನಾಗಿದ್ದ. ಆ ಸಂದರ್ಭದಲ್ಲಿ ಆದಿ ಕೈಯನ್ನು ಸಾನಿಯಾ ಹಿಡಿದುಕೊಂಡಿದ್ದಳು. ‘ನನ್ನನ್ನು ಬಿಟ್ಟುಬಿಡು ನಾನು ಸತ್ತೇ ಹೋಗುತ್ತೇನೆ. ನಿನ್ನ ಮೋಸ ಸಾಕಾಗಿದೆ’ ಎಂದು ಕೋರಿದ್ದ ಆದಿ. ಆದರೆ, ಸಾನಿಯಾ ಕೈಬಿಡಲಿಲ್ಲ. ತಾನು ಬದಲಾಗುತ್ತೇನೆ ಎಂದು ಗಂಡನನ್ನು ಮೇಲಕ್ಕೆ ಎತ್ತಿದ್ದಳು.
ಈ ಘಟನೆ ಬಳಿಕ ಕೆಫೆ ನಿರ್ಮಾಣಕ್ಕೆ ಹಣ ಕೊಡಲು ಸಾನಿಯಾ ತೆರಳಿದ್ದಳು. ಎಷ್ಟು ಹೊತ್ತಾದರೂ ಆಕೆ ಕೆಫೆ ಬಳಿ ಬರಲೇ ಇಲ್ಲ. ಸಾನಿಯಾ ಮೋಸ ಮಾಡಿದಳು ಎಂದು ಎಲ್ಲರಿಗೂ ಅನಿಸಿತ್ತು. ಆದರೆ, ಆಕೆ ಬಂದಿದ್ದಾಳೆ. ಹಣವನ್ನು ನೀಡಿದ್ದಾಳೆ. ಪ್ರಾಪರ್ಟಿ ಜಾಗವನ್ನು ಕಡಿಮೆ ರೇಟ್ಗೆ ಮಾಡಿಸಿಕೊಟ್ಟು ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾಳೆ. ಈ ಮೂಲಕ ಆಕೆ ಬದಲಾಗಿದ್ದು ಎಲ್ಲರಿಗೂ ತಿಳಿದಿದೆ. ‘ಹಣ ತೆಗೆದುಕೊಂಡು ಪರಾರಿ ಆಗೋಣ ಎಂದುಕೊಂಡಿದ್ದೆ. ಆದರೆ, ಆದಿಯ ಪ್ರೀತಿ ನನ್ನನ್ನು ಬದಲು ಮಾಡಿತು’ ಎಂದು ಸಾನಿಯಾ ಹೇಳಿದ್ದಾಳೆ.
ನಡೆಯಿತು ವರುದಿನಿ ಮದುವೆ
ವರುದಿನಿ ‘ಕನ್ನಡತಿ’ ಧಾರಾವಾಹಿಗೆ ಎರಡನೇ ವಿಲನ್ ಆಗಿದ್ದಳು. ಸಾನಿಯಾಗೆ ಪ್ರಾಪರ್ಟಿ ಮೇಲೆ ಕಣ್ಣಾದರೆ ಈಕೆಗೆ ಹರ್ಷನ ಮೇಲೆ ಕಣ್ಣು. ಆತನನ್ನು ಹೇಗಾದರೂ ಮದುವೆ ಆಗಬೇಕು ಎಂಬುದು ಆಕೆಯ ಆಲೋಚನೆ ಆಗಿತ್ತು. ಕೊನೆಗೂ ಅದು ಸಾಧ್ಯವೇ ಆಗಿಲ್ಲ. ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂದು ಆಕೆ ಹೊಸಹೊಸ ಪ್ಲ್ಯಾನ್ ಮಾಡಿದ್ದಳು. ಈ ಪ್ಲ್ಯಾನ್ನಲ್ಲಿ ವರುದಿನಿ ಯಶಸ್ವಿ ಆಗಲೇ ಇಲ್ಲ. ಹರ್ಷ ಹಾಗೂ ಭುವಿ ಮದುವೆ ಸಂದರ್ಭದಲ್ಲಿ ಹರ್ಷನನ್ನು ಬಿಟ್ಟುಕೊಡುವಂತೆ ವರು ಬೇಡಿಕೆ ಇಟ್ಟಿದ್ದಳು. ಆದರೆ, ಇದಕ್ಕೆ ಭುವಿ ಒಪ್ಪಿರಲಿಲ್ಲ. ಆ ಬಳಿಕ ಇಬ್ಬರಿಗೂ ವಿಚ್ಛೇದನ ಕೊಡಿಸಲು ಮುಂದಾದಳು.
ಈ ಸಂದರ್ಭಕ್ಕೆ ಸರಿಯಾಗಿ ಹರ್ಷಿತ್ ಹೆಸರಿನ ವಕೀಲನ ಪಾತ್ರವನ್ನು ಪರಿಚಯಿಸಲಾಗಿತ್ತು. ವರುದಿನಿ ಜತೆ ಆತ ಕ್ಲೋಸ್ ಆಗುತ್ತಾ ಬಂದ. ಕ್ಲೈಮ್ಯಾಕ್ಸ್ ವೇಳೆ ಹರ್ಷನನ್ನೇ ಮದುವೆ ಆಗುತ್ತೇನೆ ಎಂದು ವರುದಿನಿ ಪಟ್ಟು ಹಿಡಿದಳು. ಆದರೆ, ಇದಕ್ಕೆ ಭುವಿ ಒಪ್ಪಲಿಲ್ಲ. ಐದು ನಿಮಿಷ ಬ್ರೇಕ್ ಪಡೆದು, ಯೋಚಿಸಿ ಆಕೆ ಹರ್ಷಿತ್ನ ಮದುವೆ ಆಗುವ ನಿರ್ಧಾರಕ್ಕೆ ಬಂದಳು. ಅಂತಿಮವಾಗಿ ಇಬ್ಬರೂ ಮದುವೆ ಆದರು. ಈ ಮೂಲಕ ವರು ಕೂಡ ಬದಲಾಗಿ ಕ್ಲೈಮ್ಯಾಕ್ಸ್ನ ಸುಖಾಂತ್ಯ ಕಂಡಿತು.
ಅಮ್ಮಮ್ಮನ ಕಾಫಿ ಅಂಗಡಿ
‘ಕನ್ನಡತಿ’ ಧಾರಾವಾಹಿಯಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಕೊನೆಯ ಎಪಿಸೋಡ್ನಲ್ಲೂ ಕನ್ನಡದ ಬಗ್ಗೆ ಪ್ರೇಮ ತೋರಿಸಿಯೇ ಕನ್ನಡತಿ ಧಾರಾವಾಹಿ ಮುಗಿಸಲಾಗಿದೆ. ಹರ್ಷ ಹಾಗೂ ಭುವಿ ಒಂದು ಕಡೆ ಊಟಕ್ಕೆ ತೆರಳಿರುತ್ತಾರೆ. ಆ ಕೆಫೆಯಲ್ಲಿ ಕನ್ನಡ ಮಾತನಾಡುವುದಿಲ್ಲ ಎನ್ನುವ ಕಾರಣಕ್ಕೆ ಹರ್ಷ ಜಗಳಕ್ಕೆ ಇಳಿಯುತ್ತಾನೆ. ಕೊನೆಯಲ್ಲಿ ಹರ್ಷ ನಾನು ಕನ್ನಡದಲ್ಲೇ ಬಿಸ್ನೆಸ್ ಮಾಡಿ ತೋರಿಸುತ್ತೇನೆ ಎಂದು ಶಪಥ ಮಾಡುತ್ತಾನೆ. ಅದೇ ರೀತಿ ಕ್ಲೈಮ್ಯಾಕ್ಸ್ನಲ್ಲಿ ಆತ ‘ಅಮ್ಮಮನ ಕಾಫಿ ಅಂಗಡಿ’ ಶಾಪ್ ಓಪನ್ ಮಾಡುತ್ತಾನೆ. ಅಲ್ಲಿರುವ ಬೋರ್ಡ್ನಿಂದ ಹಿಡಿದು ಎಲ್ಲವೂ ಕನ್ನಡದಲ್ಲಿಯೇ ಇತ್ತು ಅನ್ನೋದು ವಿಶೇಷ.
ಬದಲಾದ ಸುದರ್ಶನ್
ಸುದರ್ಶನ್ ಕೂಡ ‘ಕನ್ನಡತಿ’ ಧಾರಾವಾಹಿಯಲ್ಲಿ ವಿಲನ್ ಆಗಿದ್ದ. ಆಸ್ತಿಗಾಗಿ ಆತ ಸಾಕಷ್ಟು ಸಂಚು ರೂಪಿಸಿದ್ದ. ಆದರೆ, ಕೊನೆಯಲ್ಲಿ ಇದು ವರ್ಕೌಟ್ ಆಗಿಲ್ಲ. ರತ್ನಮಾಲಾ ಮೃತಪಟ್ಟು ಭುವಿ ಅಧಿಕಾರ ವಹಿಸಿಕೊಂಡ ಬಳಿಕವೇ ಸುದರ್ಶನ್ ಬದಲಾಗಿದ್ದ.
ಶ್ರೀಲಕ್ಷ್ಮಿ ಎಚ್.