ಹಲವು ವಿಶೇಷಗಳ ‘ಟೆಲಿವಿಷನ್ ಪ್ರೀಮಿಯರ್ ಲೀಗ್ 2’: ಗೆದ್ದ ತಂಡಕ್ಕೆ ಸಿಗಲಿದೆ 4 ಲಕ್ಷ ರೂ. ಬಹುಮಾನ
Television Premier League: ಮಾರ್ಚ್ ತಿಂಗಳಲ್ಲಿ ‘ಟೆಲಿವಿಷನ್ ಪ್ರೀಮಿಯರ್ ಲೀಗ್ 2’ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಏನೆಲ್ಲ ವಿಶೇಷಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
ಬಣ್ಣದ ಲೋಕಕ್ಕೂ ಕ್ರಿಕೆಟ್ಗೂ ಹತ್ತಿರದ ನಂಟು. ಕಿರುತೆರೆಯಲ್ಲಿ ತೊಡಗಿಕೊಂಡಿರುವ ಸೆಲೆಬ್ರಿಟಿಗಳು ‘ಟೆಲಿವಿಷನ್ ಪ್ರೀಮಿಯರ್ ಲೀಗ್’ (Television Premier League) ಎರಡನೇ ಆವೃತ್ತಿಯಲ್ಲಿ ಭಾಗಿ ಆಗುತ್ತಿದ್ದಾರೆ. ಹಿರಿಯ ಕಲಾವಿದರು, ತಂತ್ರಜ್ಞರಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ‘ಎನ್ 1 ಕ್ರಿಕೆಟ್ ಅಕಾಡೆಮಿ’ಯ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಈ ಲೀಗ್ ನಡೆಯಲಿದೆ. ಎಂ.ಎಸ್. ಪಾಳ್ಯದ ಬಳಿಯಿರುವ ಅಶೋಕ್ ಇಂಟರ್ ನ್ಯಾಶನಲ್ ಮೈದಾನದಲ್ಲಿ ಪಂದ್ಯಗಳು ನಡೆಯುತ್ತವೆ. ಒಂದು ತಂಡದಲ್ಲಿ 13 ಸದಸ್ಯರಿರುತ್ತಾರೆ. ಪಂದ್ಯಗಳ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ಇರುತ್ತವೆ. ಇದರ ಲೋಗೋ ಬಿಡುಗಡೆ ಕಾರ್ಯಕ್ರಮ ಮತ್ತು ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು.
ಸುದ್ದಿಗೋಷ್ಠಿಯ ಆರಂಭದಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸಲಾಯಿತು. ನಂತರ ಆಯಾ ತಂಡಗಳ ಮಾಲೀಕರು ಹಾಗೂ ಅಂಬಾಸಿಡರ್ ಸಮ್ಮುಖದಲ್ಲಿ ಲೋಗೋ ರಿಲೀಸ್ ಮಾಡಲಾಯಿತು. ಆರು ತಂಡದ ಮಾಲೀಕರು ಈ ಬಾರಿಯ ಲೀಗ್ ಬಗ್ಗೆ ಮಾತನಾಡಿದರು. ಟೆಲಿವಿಷನ್ ಪ್ರೀಮಿಯರ್ ಲೀಗ್ ಆಯೋಜಕರಾದ ಸುನೀಲ್ ಕುಮಾರ್ ಅವರು ಈ ಬಾರಿಯ ಪಂದ್ಯಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: TCL: ಟೆಲಿವಿಷನ್ ಕ್ರಿಕೆಟ್ ಲೀಗ್; ಟ್ರೋಫಿ, ಜೆರ್ಸಿ ಅನಾವರಣ ಮಾಡಿದ ನಟ ಸತೀಶ್ ನೀನಾಸಂ
‘ಕಳೆದ ಸೀಸನ್ ರೀತಿ ಈ ಬಾರಿ ಕೂಡ ಎಲ್ಲ ತಂಡಗಳ ಮಾಲೀಕರು ನಮ್ಮೊಂದಿಗೆ ಸಹಕರಿಸಿದ್ದಾರೆ. ಆಟಗಾರರ ಹರಾಜು ಪ್ರಕ್ರಿಯೆ ಇರುತ್ತದೆ. ಆ ಬಳಿಕ ಜೆರ್ಸಿ ಅನಾವರಣ ಮಾಡಲಾಗುತ್ತದೆ. 4 ದಿನ ಪಂದ್ಯಾವಳಿ ನಡೆಯುತ್ತದೆ. ಫೈನಲ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಗೆದ್ದ ತಂಡಕ್ಕೆ 4 ಲಕ್ಷ ನಗದು ಬಹುಮಾನ ಹಾಗೂ ಮ್ಯಾನ್ ಆಫ್ ದಿ ಸಿರೀಸ್ ಪಡೆದವರಿಗೆ ಬೈಕ್ ನೀಡಲಾಗುತ್ತದೆ. ಪ್ರತಿ ಪಂದ್ಯದಲ್ಲಿ ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪಡೆದವರಿಗೆ ನಗದು ಬಹುಮಾನ ಕೂಡ ಇರುತ್ತದೆ. ಮುಂದಿನ ದಿನಗಳಲ್ಲಿ ಪಂದ್ಯಾವಳಿಯ ದಿನಾಂಕವನ್ನು ಹೇಳುತ್ತೇನೆ’ ಎಂದು ಸುನೀಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ದಿಗ್ಗಜರಿಂದ ಸಿಕ್ಕ ಗಿಫ್ಟ್ಗಳ ಪೂರ್ತಿ ಪಟ್ಟಿ ನೀಡಿದ ಕಿಚ್ಚ ಸುದೀಪ್; ಇವುಗಳಿಗೆ ಬೆಲೆ ಕಟ್ಟೋಕಾಗಲ್ಲ
‘ಎಲ್ಲ ತಂಡದಲ್ಲೂ ಇಬ್ಬರು ಅಂಬಾಸಿಡರ್ ಇರುತ್ತಾರೆ. ರಿವ್ಯೂ ಸಿಸ್ಟಂ, ಎಲ್ಬಿಡಬ್ಲ್ಯೂ ಇರುತ್ತದೆ. 12 ಓವರ್ನ ಮ್ಯಾಚ್ ಆಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗಿರುತ್ತದೆ ಹಾಗೆಯೇ ನಮ್ಮಲ್ಲೂ ಬಹುತೇಕ ಎಲ್ಲಾ ವ್ಯವಸ್ಥೆಗಳು ಇರುತ್ತವೆ’ ಎಂದು ಆಯೋಜಕರು ತಿಳಿಸಿದ್ದಾರೆ. ಫೈನಲ್ ದಿನ ಅಪ್ಪು ಅವರ ಹಾಡುಗಳ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿ ಯಾರಿಗೆ ಆರ್ಥಿಕವಾಗಿ ನೆರವು ನೀಡಲಾಗುತ್ತಿದೆ ಎಂಬುದನ್ನು ಅದೇ ದಿನ ತಿಳಿಸಲಾಗುವುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:38 pm, Fri, 3 February 23