‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ರತ್ನಮಾಲಾಗೆ ಮರೆವಿನ ಕಾಯಿಲೆ ಆರಂಭ ಆಗಿದೆ. ಇದು ಆಕೆಯ ಗಮನಕ್ಕೂ ಬಂದಿದೆ. ಈ ವಿಚಾರವನ್ನು ವೈದ್ಯರೇ ಖಚಿತಪಡಿಸಿದ್ದನ್ನು ರತ್ನಮಾಲಾ ಕದ್ದು ಕೇಳಿದ್ದಾಳೆ. ಹೀಗಾಗಿ, ಕಂಪನಿಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಭುವಿಗೆ ವಹಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಇದಕ್ಕಾಗಿ ಈಗಿನಿಂದಲೇ ರತ್ನಮಾಲಾ ಕೆಲವು ತೆಗೆದುಕೊಳ್ಳುತ್ತಿದ್ದಾಳೆ. ಈ ಬಗ್ಗೆ ಸಾನಿಯಾಗೆ (Saniya) ಅನುಮಾನ ಕಾಡಲು ಶುರುವಾಗಿದೆ. ಸಂಪೂರ್ಣ ಜವಾಬ್ದಾರಿ ಆಕೆಯ ಹೆಗಲಿಗೆ ಹೋಗಬಹುದು ಎನ್ನುವ ಭಯ ಆಕೆಗೆ ಶುರುವಾಗಿದೆ. ಆಕೆ ಸಿಕ್ಕಾಪಟ್ಟೆ ಹೊಟ್ಟೆಉರಿ ಮಾಡಿಕೊಳ್ಳುತ್ತಿದ್ದಾಳೆ. ಈ ವಿಚಾರ ಇಡೀ ಧಾರಾವಾಹಿ ಕಥೆಗೆ ದೊಡ್ಡ ಟ್ವಿಸ್ಟ್ ನೀಡಬಹುದು ಎಂಬುದು ವೀಕ್ಷಕರ ಊಹೆ.
ರತ್ನಮಾಲಾ ಸಂಸ್ಥೆಗೆ ರತ್ನಮಾಲಾ ಎಂ.ಡಿ ಆಗಿದ್ದಾಳೆ. ಈ ಕಾರಣಕ್ಕೆ ಆಕೆ ವಾರ್ಷಿಕ ಸಭೆಗೆ ಅಟೆಂಡ್ ಆಗಬೇಕಿತ್ತು. ಆದರೆ, ಆಕೆ ಹೋಗಿಲ್ಲ. ಅನಾರೋಗ್ಯದ ಕಾರಣ ನೀಡಿ ಭುವಿಯನ್ನು ಕಳುಹಿಸಿದ್ದಾಳೆ. ಭುವಿ ಇದಕ್ಕೆ ಅಂಜಿಕೊಂಡಿದ್ದಾಳೆ. ಆದರೆ, ರತ್ನಮಾಲಾ ಭುವಿಗೆ ಭರವಸೆ ತುಂಬಿದ್ದಾಳೆ. ನಿನ್ನಿಂದ ಇದು ಸಾಧ್ಯ ಎಂಬ ಮಾತನ್ನು ಹೇಳಿದ್ದಾಳೆ. ಈ ಕಾರಣಕ್ಕೆ ಎಲ್ಲಾ ಫೈಲ್ಗಳನ್ನು ಹಿಡಿದುಕೊಂಡು ವಾರ್ಷಿಕ ಸಭೆಗೆ ತೆರಳಿದ್ದಾಳೆ ಭುವಿ.
ರತ್ನಮಾಲಾ ಶಿಕ್ಷಣ ಸಂಸ್ಥೆಗೆ ಸಾನಿಯಾ ಎಂ.ಡಿ. ಅವಳು ಕೂಡ ಈ ಸಭೆಗೆ ಬಂದಿದ್ದಳು. ಆದರೆ, ರತ್ನಮಾಲಾ ಜಾಗದಲ್ಲಿ ಭುವಿಯನ್ನು ಕಂಡು ಆಕೆಗೆ ಶಾಕ್ ಆಗಿದೆ. ರತ್ನಮಾಲಾ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎಂಬ ಅನುಮಾನ ಮೂಡಿದೆ. ಇತ್ತೀಚೆಗೆ ಪತ್ರಕರ್ತರ ಜತೆ ಮಾತನಾಡುವಾಗ ‘ಕಂಪನಿ ವಿಚಾರ ಏನಿದ್ದರೂ ಭುವಿಯ ಬಳಿಯೇ ಕೇಳಿ’ ಎಂಬುದನ್ನು ರತ್ನಮಾಲಾ ಒತ್ತಿ ಹೇಳಿದ್ದಳು. ಆಗಲೇ ಸಾನಿಯಾಗೆ ಅನುಮಾನ ಶುರುವಾಗಿತ್ತು. ಈಗ ಆ ಅನುಮಾನ ಮತ್ತಷ್ಟು ಬಲವಾಗಿದೆ. ಆಕೆ ಸಿಕ್ಕಾಪಟ್ಟೆ ಹೊಟ್ಟೆಉರಿದುಕೊಂಡಿದ್ದಾಳೆ.
‘ಇದು ವಾರ್ಷಿಕ ಸಭೆ. ಇದಕ್ಕೆ ರತ್ನಮಾಲಾ ಅವರೇ ಬರಬೇಕು’ ಎಂದು ಸಾನಿಯಾ ಹಠ ಹಿಡಿದಳು. ಆದರೆ, ಭುವಿ ಇದಕ್ಕೆ ಒಪ್ಪಿಲ್ಲ. ‘ಅವರಿಗೆ ಬರೋಕೆ ಆಗಲ್ಲ ಎಂಬ ಕಾರಣಕ್ಕೆ ನನ್ನನ್ನು ಕಳುಹಿಸಿದ್ದಾರೆ. ಬೇಕಿದ್ದರೆ ನನ್ನನ್ನೇ ಪರೀಕ್ಷೆ ಮಾಡಿ. ಪರೀಕ್ಷೆಯಲ್ಲಿ ನಾನು ಫೇಲ್ ಆದರೆ ಅವರನ್ನೇ ಕರೆಸೋಣ’ ಎಂದು ಭುವಿ ಹೇಳಿದಳು. ಕಂಪನಿಯ ಇತರ ಸದಸ್ಯರು ಭುವಿಯನ್ನು ಬೆಂಬಲಿಸಿದರು. ಹೀಗಾಗಿ, ಸಾನಿಯಾ ಸೈಲೆಂಟ್ ಆಗಬೇಕಾಯಿತು.
ಶಾಲೆ ನಿರ್ಮಿಸಲು ಜಾಗ ಒಂದನ್ನು ರತ್ನಮಾಲಾ ನಿಗದಿ ಮಾಡಿದ್ದಾಳೆ. ಆದರೆ, ಈ ಜಾಗದಲ್ಲಿ ಕ್ಲಬ್ ನಿರ್ಮಾಣ ಮಾಡಬೇಕು ಎಂದು ವ್ಯಕ್ತಿಯೊಬ್ಬ ಪ್ಲ್ಯಾನ್ ರೂಪಿಸಿದ್ದ. ಈಗ ವಾರ್ಷಿಕ ಸಭೆಯಲ್ಲಿ ಈ ಫೈಲ್ ಹಿಡಿದು ಸಾನಿಯಾ ಬಂದಿದ್ದಾಳೆ. ಈ ವಿಚಾರವನ್ನು ಹೇಗೆ ಮ್ಯಾನೇಜ್ ಮಾಡುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಹರ್ಷನಿಗೆ ಹೆಚ್ಚಿದ ಸಂಕಷ್ಟ
ಹಬ್ಬದ ಸಮಯದಲ್ಲಿ ಹರ್ಷನ ಗನ್ನಿಂದ ಬುಲೆಟ್ ಹಾರಿದೆ. ಈ ವಿಚಾರದಲ್ಲಿ ಆತನಿಗೆ ಸಂಕಷ್ಟ ಎದುರಾಗಿದೆ. ಈ ಗನ್ ಅನ್ನು ಈಗಾಗಲೇ ಪೊಲೀಸರು ಸೀಜ್ ಮಾಡಿದ್ದಾರೆ. ಆದರೆ, ಹರ್ಷ ಪೊಲೀಸ್ ಠಾಣೆಗೆ ಬಂದಿಲ್ಲ. ‘ಇದು ಕೊಲೆ ಯತ್ನದ ಪ್ರಕರಣ. ಈ ಪ್ರಕರಣವನ್ನು ನೀವು ಗಂಭೀರವಾಗಿ ಪರಿಗಣಿಸಿಲ್ಲ ಎನಿಸುತ್ತದೆ. ಠಾಣೆಗೆ ಬಂದಿಲ್ಲ ಎಂದರೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಈ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆ ಆಗಬಹುದು’ ಎಂದು ಪೊಲೀಸರು ಹರ್ಷನಿಗೆ ಎಚ್ಚರಿಕೆ ನೀಡಿದ್ದಾರೆ.