‘ಕನ್ನಡತಿ’ ಧಾರಾವಾಹಿಯ (Kannadathi serial) ಕಥಾ ನಾಯಕ ಹರ್ಷನಿಗೆ ಎಲ್ಲಿಲ್ಲದ ಕೋಪ. ಆತನಿಗೆ ಸಿಟ್ಟು ಸದಾ ಮೂಗಿನ ತುದಿಯಲ್ಲೇ ಇರುತ್ತದೆ. ಯಾರಾದರೂ ಅವನನ್ನು ಕೆಣಕಿದರೆ ಏಕಾಏಕಿ ಸಿಟ್ಟು ಬರುತ್ತದೆ. ಈ ವಿಚಾರ ಗೊತ್ತಿದ್ದೂ ಸಾನಿಯಾ ಯಾವಾಗಲೂ ಹರ್ಷನ ಕೆಣಕುತ್ತಾಳೆ. ಆತ ಏನೂ ಮಾಡುವುದಿಲ್ಲ, ರತ್ನಮಾಲಾ ತನ್ನನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಮೇಲೆ ಮೆರೆಯುತ್ತಿದ್ದಾಳೆ. ಆದರೆ, ಇತ್ತೀಚೆಗೆ ಅವಳ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗುತ್ತಿದೆ. ಎಂಡಿ ಪಟ್ಟ ಶೀಘ್ರವೇ ಹೋಗುವ ಸೂಚನೆ ಸಿಕ್ಕಿದೆ. ಈ ಮಧ್ಯೆ ಹರ್ಷನ ಗನ್ನಿಂದ ಬುಲೆಟ್ ಹಾರಿದೆ. ಗನ್ನಿಂದ ಹೊರಟ ಬುಲೆಟ್ ಹೊಕ್ಕಿದ್ದು ಯಾರಿಗೆ ಎಂಬುದು ಸದ್ಯದ ಕುತೂಹಲ.
ಹರ್ಷ ಹಾಗೂ ಸಾನಿಯಾ ಮಧ್ಯೆ ವಾರ್ ನಡೆಯುತ್ತಲೇ ಬರುತ್ತಿದೆ. ಈಗ ಅದು ಮಿತಿಮೀರಿದೆ. ಭುವಿಯನ್ನು ಕೆಲಸದಿಂದ ತೆಗೆಯಲು ಸಾನಿಯಾ ಸಂಚು ನಡೆಸಿ ಯಶಸ್ವಿ ಆಗಿದ್ದಳು. ಈ ವಿಚಾರ ಹರ್ಷನಿಗೆ ತಿಳಿದಿದೆ. ಇದರಿಂದ ಆತ ಸಿಟ್ಟಾಗಿದ್ದಾನೆ. ಅಷ್ಟೇ ಅಲ್ಲ, ಅವಳ ವಿರುದ್ಧ ಹಗೆ ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಈ ಬಾರಿ ಆತನ ದ್ವೇಷ ಮಿತಿಮೀರಿದೆ.
ಭುವಿಯನ್ನು ಕೆಲಸದಿಂದ ತೆಗೆಯಲು ಸಂಚು ರೂಪಿಸಿದ್ದು ಸಾನಿಯಾ. ಇದಕ್ಕೆ ಸಹಾಯ ಮಾಡಿದ್ದು ನೀಲೇಶ್ ಎಂಬ ವ್ಯಕ್ತಿ. ಆತನಿಗೆ ದುಡ್ಡುಕೊಟ್ಟು ಈ ಕೆಟ್ಟ ಕೆಲಸವನ್ನು ಮಾಡಿಸಿದ್ದಾಳೆ. ಈಗ ಹರ್ಷನ ಬೆದರಿಕೆಗೆ ಹೆದರಿರುವ ಆತ ಹರ್ಷನ ಬಳಿ ತಪ್ಪು ಒಪ್ಪಿಕೊಂಡಿದ್ದ. ‘ಏನಾದರೂ ಹೆಚ್ಚುಕಮ್ಮಿ ಆದರೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಸಾನಿಯಾ ಅವರೇ ನನಗೆ ಗನ್ ನೀಡಿದ್ದರು’ ಎಂದು ಹರ್ಷನ ಎದುರು ನೀಲೇಶ್ ಒಪ್ಪಿಕೊಂಡಿದ್ದಾನೆ. ಇದನ್ನು ಕೇಳಿ ಹರ್ಷನಿಗೆ ಕೋಪ ಹೆಚ್ಚಿದೆ.
ರತ್ನಮಾಲಾ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಲಾಗುತ್ತಿತ್ತು. ಕುಂಕುಮ ಹಿಡಿದು ಬಂದ ಸಾನಿಯಾಗೆ ಹರ್ಷ ತೊಂದರೆ ಕೊಟ್ಟಿದ್ದಾನೆ. ಅವಳ ಮುಖಕ್ಕೆ ಕುಂಕುಮ ಸೋಕಿ ಕ್ಷಮೆ ಕೇಳಿದ್ದಾನೆ. ಇದರಿಂದ ಸಾನಿಯಾಗೆ ಸಿಟ್ಟು ಬಂದಿದೆ.
ನೀಲೇಶ್ಗೆ ಸಾನಿಯಾ ಕೊಟ್ಟ ಗನ್ ಅನ್ನು ಹರ್ಷ ತೆಗೆದುಕೊಂಡು ಬಂದಿದ್ದ. ಪೂಜೆ ಸಂದರ್ಭದಲ್ಲಿ ಗನ್ ತೆಗೆದ ಹರ್ಷ ಆಕೆಯ ಹಣೆಗೆ ಹಿಡಿದಿದ್ದಾನೆ. ‘ಇಷ್ಟು ದಿನ ನೀವು ಮಾಡುತ್ತಿದ್ದ ಎಲ್ಲವನ್ನೂ ಸಹಿಸಿಕೊಂಡು ಬಂದೆ. ನೀವು ಬದಲಾಗುತ್ತೀರಿ ಎಂದು ಭಾವಿಸುತ್ತಲೇ ಇದ್ದೆ. ಆದರೆ, ನೀವು ಬದಲಾಗಿಲ್ಲ. ನಿಮ್ಮನ್ನು ಮುಗಿಸೇ ಬಿಡ್ತೀನಿ’ ಎಂದು ಹರ್ಷ ಟ್ರಿಗರ್ ಒತ್ತಿದ್ದಾನೆ. ಗನ್ನಿಂದ ಬುಲೆಟ್ ಕೂಡ ಹಾರಿದೆ. ಆದರೆ, ಈ ಬುಲೆಟ್ ಸಾನಿಯಾಳ ತಲೆ ಹೊಕ್ಕಿತೇ ಅಥವಾ ಇಲ್ಲವೇ ಅನ್ನೋದು ಸದ್ಯದ ಕುತೂಹಲ.
ಸಾನಿಯಾಳ ಕೋರಿಕೆ ಮೇರೆಗೆ ಮಾಧ್ಯಮದ ಇಬ್ಬರು ರತ್ನಮಾಲಾ ಸಂದರ್ಶನ ಪಡೆಯಲು ಬಂದಿದ್ದರು. ಅವರು ಈ ಘಟನೆ ನಡೆಯುವ ಸಂದರ್ಭದಲ್ಲಿ ಮೆತ್ತಿಮೇಲೆ ನಿಂತು ಇದೆಲ್ಲವನ್ನೂ ಶೂಟ್ ಮಾಡುತ್ತಿದ್ದರು. ಟಿಆರ್ಪಿಗೋಸ್ಕರ ಈ ವಿಡಿಯೋವನ್ನು ಅವರು ಪ್ರಸಾರ ಮಾಡೋದು ಪಕ್ಕಾ. ಇದು ಹರ್ಷನ ರೆಪ್ಯುಟೇಷನ್ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರುಧಿನಿ ಪಾತ್ರ ‘ಕನ್ನಡತಿ’ ಧಾರಾವಾಹಿಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಪಾತ್ರ ಮಾಡುತ್ತಿರುವ ಸಾರಾ ಅಣ್ಣಯ್ಯ ಅವರು ಟ್ರಿಪ್ ತೆರಳಿದ್ದಾರೆ. ತಾಜ್ಮಹಲ್ ಮೊದಲಾದ ಕಡೆಗಳಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಕಾರಣಕ್ಕೆ ಅವರು ಧಾರಾವಾಹಿಯಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:30 am, Wed, 5 October 22