ಸಾನಿಯಾ ಬಲಗೈ ಬಂಟನ ಅವಾಂತರ; ರತ್ನಮಾಲಾ ಎದುರು ಹೊರ ಬೀಳಲಿದೆಯೇ ಅಸಲಿ ವಿಚಾರ?
ರತ್ನಮಾಲಾ ಬಳಿ ಇರುವ ಫೈಲ್ ಒಂದನ್ನು ತರುವಂತೆ ಸಾನಿಯಾ ಸೂಚನೆ ನೀಡಿದ್ದಳು. ಅಂತೆಯೇ ಆತ ಮನೆಗೆ ಬಂದಿದ್ದ. ಎದುರಿದ್ದ ಫೈಲ್ಅನ್ನು ತೆಗೆದುಕೊಂಡು ತನ್ನ ಶರ್ಟ್ ಒಳಗೆ ಹಾಕಿಕೊಂಡಿದ್ದ. ಆ ಸಂದರ್ಭಕ್ಕೆ ಸರಿಯಾಗಿ ಆದಿಯ ಎಂಟ್ರಿ ಆಗಿದೆ.
‘ಕನ್ನಡತಿ’ ಧಾರಾವಾಹಿಯ (Kannadathi Serial) ಸಾನಿಯಾ ಪಾತ್ರ ಸಾಕಷ್ಟು ಹೈಲೈಟ್ ಆಗುತ್ತಿದೆ. ಮಾಲಾ ಶಿಕ್ಷಣ ಸಂಸ್ಥೆಯ ಎಂಡಿ ಪಟ್ಟ ಸಿಕ್ಕರೂ ಆಕೆಗೆ ಖುಷಿ ಇಲ್ಲ. ತನ್ನ ಕುರ್ಚಿ ಹೋಗೋದು ಖಚಿತ ಎಂಬುದು ಆಕೆಗೆ ಗೊತ್ತಾಗಿದೆ. ಈ ಕಾರಣದಿಂದ ಅದನ್ನು ಉಳಿಸಿಕೊಳ್ಳಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾಳೆ. ಇದರ ಜತೆಗೆ ಆಕೆ ಮಾಡಿಕೊಳ್ಳುತ್ತಿರುವ ಕೆಲ ಎಡವಟ್ಟುಗಳಿಂದ ಸಂಕಷ್ಟಕ್ಕೆ ಮತ್ತಷ್ಟು ಹೆಚ್ಚುತ್ತಿದೆ. ಸಾನಿಯಾಗೆ ಖಿನ್ನತೆ ಕಾಡುತ್ತಿದೆ ಎಂದು ಪತಿ ಆದಿ ಯಾವಾಗಲೂ ಹೇಳುತ್ತಿರುತ್ತಾನೆ. ಆಕೆಯ ಮೇಲೆ ಸಾಕಷ್ಟು ಕಾಳಜಿ ಹಾಗೂ ಪ್ರೀತಿ ತೋರುತ್ತಾನೆ. ಆದರೆ, ಆಕೆಗೆ ಮಾತ್ರ ಆ ಬಗ್ಗೆ ಕಾಳಜಿ ಇಲ್ಲ. ಆಕೆಗೆ ತನ್ನ ಸ್ವಾರ್ಥವೇ ಮುಖ್ಯ. ಈಗ ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡಿದ್ದಾಳೆ ಸಾನಿಯಾ. ಆಕೆಯ ಸಹಚರ ಮಾಡಿದ ಎಡವಟ್ಟಿನಿಂದ ಸಾನಿಯಾಗೆ ಸಂಕಷ್ಟ ಶುರುವಾಗಿದೆ.
ಸಾನಿಯಾ ಎಂಡಿ ಪಟ್ಟ ಯಾವ ಕ್ಷಣದಲ್ಲಿ ಬೇಕಿದ್ದರೂ ಹೊಗಬಹುದು. ಈ ಬಗ್ಗೆ ಆಕೆಗೆ ಭಯ ಇದೆ. ಈ ಕಾರಣಕ್ಕೆ ಆಕೆ ಸದಾ ಚಿಂತೆಯಲ್ಲೇ ಇರುತ್ತಾಳೆ. ರತ್ನಮಾಲಾ ಏನು ಮಾಡುತ್ತಾಳೆ, ಯಾವ ಫೈಲ್ ಕಳುಹಿಸುತ್ತಾಳೆ ಎಂಬುದನ್ನು ತಿಳಿದುಕೊಳ್ಳಲು ಬೇಹುಗಾರಿಕೆ ಮಾಡಿಸಲು ಮುಂದಾಗಿದ್ದಾಳೆ. ಈ ರೀತಿ ಮಾಡೋಕೆ ಆಕೆ ಒಬ್ಬನನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಭುವಿಯ ವಿದ್ಯಾರ್ಥಿಯಾಗಿ ಆತ ಸೇರಿಕೊಂಡಿದ್ದಾನೆ. ಆದರೆ, ರತ್ನಮಾಲಾ ಎದುರು ಆತನ ನಿಜವಿಚಾರ ಗೊತ್ತಾಗಿದೆ.
ರತ್ನಮಾಲಾ ಬಳಿ ಇರುವ ಫೈಲ್ ಒಂದನ್ನು ತರುವಂತೆ ಸಾನಿಯಾ ಸೂಚನೆ ನೀಡಿದ್ದಳು. ಅಂತೆಯೇ ಆತ ಮನೆಗೆ ಬಂದಿದ್ದ. ಎದುರಿದ್ದ ಫೈಲ್ಅನ್ನು ತೆಗೆದುಕೊಂಡು ತನ್ನ ಶರ್ಟ್ ಒಳಗೆ ಹಾಕಿಕೊಂಡಿದ್ದ. ಆ ಸಂದರ್ಭಕ್ಕೆ ಸರಿಯಾಗಿ ಆದಿಯ ಎಂಟ್ರಿ ಆಗಿದೆ. ಇದನ್ನು ನೋಡಿ ಸಾನಿಯಾ ಸಹಚರ ಗಾಬರಿ ಆಗಿದ್ದಾನೆ. ಫೈಲ್ ಏನು ಮಾಡಬೇಕು ಎಂಬುದು ಗೊತ್ತಾಗದೆ ಕಂಗಾಲಾಗಿದ್ದಾನೆ.
ಆ ಬಳಿಕ ಎಂಟ್ರಿ ಕೊಟ್ಟಿದ್ದು ಭುವಿ. ‘ನಾನು ನಿಮ್ಮ ಪಾಠ ಕೇಳಲೇಬೇಕು. ಪಾಠ ಇಲ್ಲದಿದ್ದರೂ ಯಾವುದಾದರೂ ಕಥೆಯನ್ನಾದರೂ ಹೇಳಿ’ ಎಂದು ಸಾನಿಯಾ ಸಹಚರ ಹೇಳಿಕೊಂಡಿದ್ದ. ಈ ಕಾರಣಕ್ಕೆ ಭುವಿ ಕಥೆ ಹೇಳೋಕೆ ಶುರು ಮಾಡಿದಳು. ಆ ಸಂದರ್ಭಕ್ಕೆ ಸರಿಯಾಗಿ ಆತನ ತಾಯಿ ಆಸ್ಪತ್ರೆ ಸೇರಿದ್ದಾಳೆ ಎಂಬ ಕರೆ ಬಂದಿದೆ. ಇದನ್ನು ಕೇಳಿ ಆತ ಫೈಲ್ ಕೆಳಕ್ಕೆ ಬೀಳಿಸಿದ್ದಾನೆ. ಅದನ್ನು ರತ್ನಮಾಲಾ ಎತ್ತಿಕೊಂಡಿದ್ದಾಳೆ.
‘ನಾನು ಹೊರಡುತ್ತೇನೆ. ಆಸ್ಪತ್ರೆಗೆ ಹೋಗಬೇಕು’ ಎಂದು ಸಾನಿಯಾ ಸಹಚರ ಹೇಳಿ ಹೊರಡುವವನಿದ್ದ. ಆಗ ರತ್ನಾಮಾಲಾಗೆ ನಮಸ್ಕಾರ ಮಾಡಲು ಮುಂದಾದ. ‘ಎಲ್ಲರೂ ಅಮ್ಮನ ರೀತಿಯೇ. ಯಾರು, ಯಾವಾಗ, ಹೇಗೆ ಮೋಸ ಮಾಡಿದರೂ ಅದು ಅಮ್ಮನಿಗೆ ಮೋಸ ಮಾಡಿದ ಹಾಗೆಯೇ, ನೆನಪಿಟ್ಟುಕೋ’ ಎಂಬ ಖಡಕ್ ಮಾತು ರತ್ನಮಾಲಾ ಕಡೆಯಿಂದ ಬಂದಿದೆ. ಇದನ್ನು ಕೇಳಿ ಸಾನಿಯಾ ಸಹಚರ ಕಂಗಾಲಾಗಿದ್ದಾನೆ. ಜತೆಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.
View this post on Instagram
ಇದನ್ನೂ ಓದಿ: ‘ಕನ್ನಡತಿ’ ಕಥೆಗೆ ಬಿಗ್ ಟ್ವಿಸ್ಟ್: ಮಾಡದ ತಪ್ಪಿಗೆ ಅರೆಸ್ಟ್ ಆದ ಭುವನೇಶ್ವರಿ
ಭುವಿ ವಿದ್ಯಾರ್ಥಿ ಕೈಗೆ ಫೈಲ್ ಹೇಗೆ ಹೋಯಿತು ಎಂಬ ಪ್ರಶ್ನೆ ರತ್ನಮಾಲಾಳನ್ನು ಕಾಡುತ್ತಿದೆ. ಈ ಬಗ್ಗೆ ಆಕೆಗೆ ಸಾಕಷ್ಟು ಅನುಮಾನ ಮೂಡಿದೆ. ಒಂದೊಮ್ಮೆ ಗಟ್ಟಿ ತನಿಖೆ ನಡೆಸಿದರೆ ಸಾನಿಯಾ ಹೆಸರು ಆಚೆ ಬರಬಹುದು. ಅಷ್ಟೇ ಅಲ್ಲ ಸಾನಿಯಾ ಹಾಗೂ ಆತನ ಸಹಚರ ಒಟ್ಟಾಗಿ ನಿಂತು ಮಾತನಾಡುತ್ತಿರುವ ಫೋಟೋವನ್ನು ಹರ್ಷ ಕ್ಲಿಕ್ಕಿಸಿಕೊಂಡಿದ್ದಾನೆ. ಈ ಫೋಟೋ ಹೊರಬಿದ್ದರೆ ಸಾನಿಯಾ ನಿಜವಾದ ಮುಖ ಬಯಲಾಗಬಹುದು.
ಶ್ರೀಲಕ್ಷ್ಮಿ ಎಚ್.