Virat Kohli: ವಿರಾಟ್ ನಾಯಕತ್ವ ತ್ಯಜಿಸಲು ಇದೇ ಕಾರಣ ಎಂದ ಕಪಿಲ್ ಶರ್ಮಾ; ಅದಕ್ಕೆ ಎಲ್ಲರೂ ನಕ್ಕಿದ್ದೇಕೆ?
Kapil Sharma Show: ಕಪಿಲ್ ಶರ್ಮಾ ಶೋ ಹೇಳಿಕೇಳಿ ಪಕ್ಕಾ ಕಾಮಿಡಿ ಕಾರ್ಯಕ್ರಮ. ಅದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದಕ್ಕೆ ಕುತೂಹಲಕರ ಕಾರಣವೊಂದನ್ನು ಕಪಿಲ್ ಶರ್ಮಾ ತಿಳಿಸಿದ್ದಾರೆ. ಏನದು?
ಏಕದಿನ ಕ್ರಿಕೆಟ್ ಪ್ರಕಾರದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಯವರನ್ನು ಕೆಳಗಿಳಿಸಿದ್ದು ದೇಶಾದ್ಯಂತ ಹಲವು ಆಯಾಮಗಳಲ್ಲಿ ಚರ್ಚೆಯಾಗಿತ್ತು. ಟಿ20 ಮಾದರಿಯಲ್ಲಿ ನಾಯಕನ ಸ್ಥಾನಕ್ಕೆ ಸ್ವತಃ ನಿವೃತ್ತಿ ಘೋಷಿಸಿದ್ದ ಕೊಹ್ಲಿಯೂ (Virat Kohli) ಕೂಡ, ಏಕದಿನ ಕ್ರಿಕೆಟ್ ನಾಯಕನ ಸ್ಥಾನದಿಂದ ಇಳಿಯುವ ಯೋಚನೆಯಲ್ಲಿರಲಿಲ್ಲ. ಆದರೆ ಮ್ಯಾನೇಜ್ಮೆಂಟ್ ನಿರ್ಧಾರ ಬೇರೆಯಾಗಿತ್ತು. ಈ ಕುರಿತು ಪರ- ವಿರೋಧ ಚರ್ಚೆಗಳು ಈಗಾಗಲೇ ನಡೆದುಹೋಗಿವೆ. ಆದರೆ ಖ್ಯಾತ ನಿರೂಪಕ ಕಪಿಲ್ ಶರ್ಮಾ (Kapil Sharma) ವಿರಾಟ್ ನಾಯಕನ ಸ್ಥಾನದಿಂದ ಇಳಿಯಲು ಕಾರಣವಾಗಿದ್ದಕ್ಕೆ ಕಾರಣವಾದ ಹೊಸ ಘಟನೆಯನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಅಚ್ಚರಿಯ ವಿಚಾರವೆಂದರೆ ಕಪಿಲ್ ಶರ್ಮಾ ಹೇಳಿದ ಘಟನೆ ಯಾರಿಗೂ ಶಾಕಿಂಗ್ ಎನ್ನಿಸಲೇ ಇಲ್ಲ, ಬದಲಾಗಿ ಬಿದ್ದು ಬಿದ್ದು ನಕ್ಕಿದ್ದಾರೆ. ಇದೇಕೆ ಅಂತೀರಾ?
ಕಪಿಲ್ ಶರ್ಮಾ ಶೋಗೆ ಬಾಲಿವುಡ್ ತಾರೆಯರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಆಗಮಿಸುತ್ತಾರೆ. ಇದೇ ಮಾದರಿಯಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಹಾಗೂ ನಟಿ ಮೃಣಾಲ್ ಠಾಕೂರ್ (Mrunal Thakur) ಆಗಮಿಸಿದ್ದರು. ‘ಜೆರ್ಸಿ’ ಚಿತ್ರದ ಪ್ರಚಾರಕ್ಕಾಗಿ ಈ ತಾರೆಯರು ಶೋಗೆ ಬಂದಿದ್ದರು. ಕ್ರಿಕೆಟ್ ಕುರಿತಾದ ಕತೆಯನ್ನು ಹೊಂದಿರುವ ‘ಜೆರ್ಸಿ’ಯ ಕುರಿತು ಎಲ್ಲಾ ತಾರೆಯರು ಮಾತನಾಡುತ್ತಿದ್ದರು.
ಆಗ ನಟ ಚಂದನ್ ಪ್ರಭಾಕರ್ (Chandan Prabhakar) ಶಾಹಿದ್ ಕಪೂರ್ ಜತೆ ಮಾತನಾಡುತ್ತಾ ಅವರಿಗೆ ಕ್ರಿಕೆಟ್ ಕುರಿತು ಬಹಳ ಆಸಕ್ತಿ ಇರುವುದಾಗಿ ಹೇಳಿಕೊಂಡರು. ಚಂದನ್ ಶಾಹಿದ್ ಬಳಿ, ‘‘ಸರ್, ನಿಮ್ಮ ಕ್ರಿಕೆಟ್ ಕುರಿತಾದ ಚಿತ್ರ ಬರುತ್ತಿದೆ. ನಿಮಗೆ ಒಂದು ವಿಷಯ ಹೇಳಬೇಕು, ನನಗೂ ಕ್ರಿಕೆಟ್ ಕುರಿತು ಬಹಳ ಆಸಕ್ತಿ ಇದೆ’’ ಎಂದಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಕಪಿಲ್ ಶರ್ಮಾ ಚಂದನ್ ಪ್ರಭಾಕರ್ ಕಾಲೆಳೆದಿದ್ದಾರೆ.
ಕಪಿಲ್ ಮಾತನಾಡುತ್ತಾ, ‘‘ಚಂದನ್ ಯಾವಾಗ ಕ್ರಿಕೆಟ್ ಕುರಿತು ಆಸಕ್ತಿ ತೋರಿಸಲು ಪ್ರಾರಂಭಿಸಿದರೋ, ಆಗಿನಿಂದ ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟಿದ್ದಾರೆ’’ ಎಂದು ತಮಾಷೆ ಮಾಡಿದ್ದಾರೆ. ಇದು ಶಾಹಿದ್ ಹಾಗೂ ಮೃಣಾಲ್ ಅವರನ್ನು ನಗೆಗಡಲಲ್ಲಿ ತೇಲಿಸಿದೆ. ಇಷ್ಟಕ್ಕೇ ಸುಮ್ಮನಾಗದ ಕಪಿಲ್, ‘ಜೆರ್ಸಿ’ ಸಿನಿಮಾ ಹೆಸರಿನ ಟೈಟಲ್ ಕುರಿತೂ ತಮಾಷೆ ಮಾಡಿದ್ದಾರೆ. ‘ಜೆರ್ಸಿ’ ಬೇಸಿಗೆ ಕಾಲದಲ್ಲಿ ಬಿಡುಗಡೆಯಾಗಿದ್ದರೆ ಅದಕ್ಕೆ ‘ಬನಿಯನ್’ ಹೆಸರಿಡುತ್ತಿದ್ದರೇನೋ ಎಂದು ತಮಾಷೆಯಾಗಿ ಕೇಳಿದ್ದಾರೆ.
ಕಾರ್ಯಕ್ರಮದ ಪ್ರೋಮೋ ಇಲ್ಲಿದೆ:
‘ಜೆರ್ಸಿ’ ಚಿತ್ರವು ರಾಷ್ಟ್ರ ಪ್ರಶಸ್ತಿ ವಿಜೇತ ತೆಲುಗಿನ ಅದೇ ಹೆಸರಿನ ಚಿತ್ರದ ರಿಮೇಕ್ ಆಗಿದೆ. ಶಾಹಿದ್ ಪತ್ನಿ ಪಾತ್ರದಲ್ಲಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 31ಕ್ಕೆ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ:
ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್ ಖಾನ್ ಶಾದಿ? ವೈರಲ್ ಫೋಟೋದ ಅಸಲಿಯತ್ತು ಇಲ್ಲಿದೆ