ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರ ಸಾಕಷ್ಟು ಮಂದಿ ಐಷಾರಾಮಿ ಕಾರು, ಮನೆ ಖರೀದಿ ಮಾಡುತ್ತಾರೆ. ಸೆಲೆಬ್ರಿಟಿ ಆದವರು ಐಷಾರಾಮಿ ಆಗಿ ಇರಲೇಬೇಕು ಎನ್ನುವ ಮನಸ್ಥಿತಿ ಎಲ್ಲರಲ್ಲೂ ಬೆಳೆದಿದೆ. ಸ್ಟಾರ್ ಆಗಿದ್ದರೂ ಸರಳವಾಗಿ ಜೀವನ ನಡೆಸುತ್ತಿರುವ ಅನೇಕರಿಗೆ ಇದರಿಂದ ತೊಂದರೆ ಆಗುತ್ತಿದೆ. ಈಗ ಹಿಂದಿ ಕಿರುತೆರೆ ನಟನಿಗೆ ಈ ವಿಚಾರಕ್ಕೆ ಅವಮಾನ ಆಗಿದೆ. ಇದಕ್ಕೆ ಅವರು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ.
ಹಿಂದಿ ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅನೇಕರು ಸಿದ್ದಾರ್ಥ್ ಶುಕ್ಲಾ ತಾಯಿ ಬಳಿ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ನಟ ಕರಣ್ವೀರ್ ಬೊಹ್ರಾ ಕೂಡ ಸಿದ್ದಾರ್ಥ್ ತಾಯಿಯನ್ನು ಭೇಟಿ ಆಗಿದ್ದಾರೆ. ಈ ಭೇಟಿಗೆ ತೆರಳುವಾಗ ಅವರು ಮಾರುತಿ ಸುಜುಕಿ ಕಾರನ್ನು ಏರಿ ಹೋಗಿದ್ದಾರೆ. ಅವರು ಬಂದ ಕಾರಿನ ಬೆಲೆ 10 ಲಕ್ಷದ ಆಸುಪಾಸು ಇದೆ. ಇದೇ ವಿಚಾರ ಇಟ್ಟುಕೊಂಡು ಪಾಪರಾಜಿಗಳು ನಟನನ್ನು ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ ‘ಬಡವ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಇದು ನಟನಿಗೆ ಸಿಟ್ಟು ತರಿಸಿದೆ. ಈ ವಿಚಾರವಾಗಿ ಅವರು ಆಕ್ರೋಶ ಹೊರ ಹಾಕಿದ್ದಾರೆ.
‘ಅನೇಕ ಯುವಕರು ನನ್ನನ್ನು ಫಾಲೋ ಮಾಡುತ್ತಿರುತ್ತಾರೆ. ಯಾವ ಬಟ್ಟೆ ಧರಿಸಬೇಕು, ಯಾವ ಕಾರನ್ನು ಡ್ರೈವ್ ಮಾಡಬೇಕು ಎನ್ನುವುದನ್ನು ಯೋಚಿಸುತ್ತಿರುತ್ತಾರೆ. ಅವರೆಲ್ಲರಿಗೂ ನಾನು ಮಾದರಿ ಆಗಬಹುದು. ಸಾಮಾನ್ಯರು ಓಡಾಡುವ ಕಾರಿನಲ್ಲಿ ಬಂದರೆ ಸಮಸ್ಯೆ ಏನು? ನಾವು ಅಲ್ಲಿಗೆ ಐಷಾರಾಮಿತನ ತೋರಿಸೋಕೆ ಹೋಗಿಲ್ಲ. ಮೃತನ ತಾಯಿಗೆ ಸಾಂತ್ವನ ಹೇಳೋಕೆ ಹೋಗಿದ್ದೆವು. ಅದಕ್ಕೆ ಈ ರೀತಿ ಹೇಳುವುದು ಎಷ್ಟು ಸರಿ’ ಎಂದು ಕರಣ್ವೀರ್ ಪ್ರಶ್ನೆ ಮಾಡಿದ್ದಾರೆ.
ಕರಣ್ವೀರ್ ಬಳಿ ಐಷಾರಾಮಿ ಕಾರುಗಳಿವೆ. ಆದರೆ, ಅದನ್ನು ಅವರು ಮಾರಾಟ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಂತ ಅವರಿಗೆ ಆರ್ಥಿಕ ಸಮಸ್ಯೆ ಬಂದಿದೆ ಎಂದರ್ಥವಲ್ಲ. ಬದಲಿಗೆ, ಈ ಹಣವನ್ನು ಅವರು ಮಗಳ ಶಿಕ್ಷಣಕ್ಕಾಗಿ ಖರ್ಚು ಮಾಡಲು ನಿರ್ಧರಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೆ, ನಟನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: Megha Shetty: ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ಸಿನಿಮಾಗಾಗಿ ಕಾಯ್ತಾ ಇದೀರಾ?; ಇಲ್ಲಿದೆ ಗುಡ್ ನ್ಯೂಸ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ; ಎಷ್ಟು ಗಂಟೆಗೆ?