‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಮೈಕಲ್ ಅಜಯ್ (Michael Ajay) ಅವರು ಕಳೆದ ವಾರ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆ ಆಗಿದೆ. ಮನೆ ಬಿಕೋ ಎನಿಸುತ್ತಿದೆ. ಫಿನಾಲೆಯಲ್ಲಿ ಉಳಿದುಕೊಳ್ಳೋದು ಐವರು ಮಾತ್ರ. ಇದಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಸದ್ಯದ ಆಟ ನೋಡುತ್ತಿರುವ ವೀಕ್ಷಕರು ಕಪ್ ಗೆಲ್ಲೋದು ಸಂಗೀತಾ ಎಂದು ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಈ ಮಧ್ಯೆ ಸಂಗೀತಾ ಅವರನ್ನು ಕಂಡರೆ ಕಾರ್ತಿಕ್ಗೆ ಭಯ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಒಂದು ವಿಚಾರ.
ಕಳೆದ ವಾರ ಅಡುಗೆ ಮನೆಯಲ್ಲಿ ತನಿಷಾ, ವರ್ತೂರು ಸಂತೋಷ್ ಹಾಗೂ ಕಾರ್ತಿಕ್ ಇದ್ದರು. ‘ಬಿಗ್ ಬಾಸ್ ಮನೆಯ ಮೂರು ಶನಿಗಳು ಯಾರು’ ಎಂದು ವರ್ತೂರಿಗೆ ಕೇಳಿದರು ಕಾರ್ತಿಕ್. ಇದಕ್ಕೆ ವರ್ತೂರು ಅವರು ವಿನಯ್ ಹಾಗೂ ನಮ್ರತಾ ಹೆಸರನ್ನು ತೆಗೆದುಕೊಂಡಿದ್ದರು. ಮೂರನೇ ವ್ಯಕ್ತಿ ಯಾರು ಎಂಬುದು ಅವರಿಗೆ ಗೊತ್ತಾಗಲಿಲ್ಲ. ‘ಸಂಗೀತಾನ’ ಎಂದು ಪ್ರಶ್ನಾರ್ಥಕವಾಗಿ ಕೇಳಿದರು. ‘ಬಿಗ್ ಬಾಸ್ ಮನೆಯ ಶನಿ ಸಂಗೀತಾ’ ಎಂದು ದೊಡ್ಡದಾಗಿ ಘೋಷಣೆ ಮಾಡಿದರು ಕಾರ್ತಿಕ್. ಶನಿ ಹೆಗಲು ಏರಿದರೆ ಅವರ ಕಥೆ ಮುಗಿದೇ ಹೋಗುತ್ತದೆ ಎಂಬರ್ಥ ಕಾರ್ತಿಕ್ ಮಾತಲ್ಲಿ ಇತ್ತು.
ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಯೆಸ್ ಆರ್ ನೋ ರೌಂಡ್ ಆರಂಭಿಸಿದರು. ‘ಸಂಗೀತಾ ಬಿಗ್ ಬಾಸ್ ಮನೆಯ ಶನಿ’ ಎಂದು ಸ್ಟೇಟ್ಮೆಂಟ್ ಹೇಳಿದರು ಸುದೀಪ್. ಆದರೆ, ಎಲ್ಲರೂ ನೋ ಎನ್ನುವ ಬೋರ್ಡ್ ತೋರಿಸಿದರು. ಇದನ್ನು ನೋಡಿ ಸುದೀಪ್ ಅವರಿಗೆ ಅಚ್ಚರಿ ಆಯಿತು. ‘ವಾರದ ದಿನದಲ್ಲಿ ಸ್ಟೇಟ್ಮೆಂಟ್ ಕೊಡ್ತೀರಾ. ವಾರಾಂತ್ಯದಲ್ಲಿ ನೋ ಎನ್ನುವ ಬೋರ್ಡ್ ತೆಗೆದುಕೊಳ್ತೀರಾ. ಇದು ಸರಿ ಅಲ್ಲ’ ಎಂದರು ಸುದೀಪ್. ‘ಸಂಗೀತಾ ಅವರೇ ನಿಮ್ಮನ್ನು ನೋಡಿ ಭಯ ಬೀಳ್ತಿರೋದು ನೋಡಿ’ ಎಂದರು ಕಿಚ್ಚ.
ತಾವು ಹೇಳಿರುವ ಸ್ಟೇಟ್ಮೆಂಟ್ನ ಕಾರ್ತಿಕ್ ಅವರು ಮರೆತಂತೆ ನಟಿಸಿದರು. ತಮಗೇನು ಗೊತ್ತೇ ಇಲ್ಲ ಎಂದು ಅವರು ಹೇಳಿದರು. ಆ ಬಳಿಕ ವರ್ತೂರು ಸಂತೋಷ್ ಅವರು ನೇರವಾಗಿ ಹೋಗಿ, ‘ನೀವೇ ಆ ಮಾತನ್ನು ಹೇಳಿದ್ದು’ ಎಂದು ನೆನಪಿಸಿದರು. ಆದರೆ, ಕಾರ್ತಿಕ್ಗೆ ಮಾತ್ರ ಈ ಯಾವ ವಿಚಾರವೂ ನೆನಪಿರಲೇ ಇಲ್ಲ!
ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಇಬ್ಬರೂ ಬೇರೆ ಆಗಿದ್ದಾರೆ. ಈಗ ಸಂಗೀತಾ ಅವರನ್ನು ಎದುರಿಸುವ ಶಕ್ತಿ ಕಾರ್ತಿಕ್ಗೆ ಇಲ್ಲವೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ‘ಕಾರ್ತಿಕ್ ಬಕೆಟ್ ಹಿಡಿಯುತ್ತಾನೆ’ ಎಂದು ಸಂಗೀತಾ ಹೇಳಿದ್ದರು. ಈ ಮಾತಿಗೆ ಅವರು ಬದ್ಧರಾಗಿದ್ದರು. ಆದರೆ, ಕಾರ್ತಿಕ್ ವಾರದ ದಿನದಲ್ಲಿ ಒಂದು ರೀತಿ ಹೇಳಿ, ವಾರಾಂತ್ಯದಲ್ಲಿ ಮತ್ತೊಂದು ರೀತಿ ನಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮೊದಲು ಸಂಗೀತಾ, ನಂತರ ನಮ್ರತಾ ಜತೆ ಕ್ಲೋಸ್ ಆದ ಕಾರ್ತಿಕ್ಗೆ ಸುದೀಪ್ ಹೇಳಿದ್ದೇನು?
ಸಂಗೀತಾ ಶೃಂಗೇರಿ ಅವರು ಆರಂಭದಲ್ಲಿ ಹೇಗಿದ್ದರೋ ಈಗಲೂ ಅದೇ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಸಂಗೀತಾ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರ ವ್ಯಕ್ತಿತ್ವ ಎಲ್ಲರಿಗಿಂತ ಭಿನ್ನವಾಗಿದೆ. ಈ ಬಾರಿ ಸಂಗೀತಾ ಬಿಗ್ ಬಾಸ್ ವಿನ್ನರ್ ಆಗಲಿ ಎಂದು ಅನೇಕರು ಕೋರಿಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಕಪ್ ಗೆದ್ದ ಎರಡನೇ ಮಹಿಳಾ ಸ್ಪರ್ಧಿ ಎನ್ನುವ ಖ್ಯಾತಿ ಅವರಿಗೆ ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಬಿಗ್ ಬಾಸ್ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಲು ಜಿಯೋ ಸಿನಿಮಾದಲ್ಲಿ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Mon, 8 January 24