‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಪರಿಚಯಿಸಲಾಗಿತ್ತು. ನರಕದಲ್ಲಿ ಇದ್ದ ಮಹಿಳಾ ಸ್ಪರ್ಧಿಗಳಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಕೆಲವು ಬೇಸಿಕ್ ಸೌಕರ್ಯಗಳನ್ನು ನೀಡಿಲ್ಲ ಎಂಬ ಆರೋಪ ಕೆಲವರಿಂದ ಕೇಳಿಬಂದಿತ್ತು. ಅಲ್ಲದೇ, ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು. ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಕೇಳಿಬಂದ ಈ ಆರೋಪದ ಬಗ್ಗೆ ಭಾನುವಾರದ (ಅ.13) ಎಪಿಸೋಡ್ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಮಹಿಳಾ ಸ್ಪರ್ಧಿಗಳಿಂದಲೂ ಅವರು ಉತ್ತರ ಕೊಡಿಸಿದ್ದಾರೆ.
‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆಯನ್ನು ಆರಂಭಿಸುವಾಗಲೇ ಸುದೀಪ್ ಅವರು ಒಂದು ಪ್ರಶ್ನೆ ಕೇಳಿದರು. ‘ನರಕದಲ್ಲಿ ಇದ್ದಾಗ ಎಷ್ಟು ಖುಷಿ ಇತ್ತು? ಇದು ತುಂಬ ಮುಖ್ಯವಾದ ಪ್ರಶ್ನೆ. ಮಹಿಳಾ ಆಯೋಗದವರು ಆರೋಪ ಮಾಡಿದ್ದಾರೆ. ಅನ್ಯಾಯ, ಅನಾನುಕೂಲ ಆಗಿದೆ ಅಂತ ಹೇಳಿದ್ದಾರೆ. ಈ ಬಗ್ಗೆ ಉತ್ತರ ನೀವು ನೀಡಿ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟ ಮಹಿಳಾ ಸ್ಪರ್ಧಿಗಳ ಪೈಕಿ ಚೈತ್ರಾ ಕುಂದಾಪುರ, ಮಾಸನಾ, ಮೋಕ್ಷಿತಾ ಪೈ, ಅನುಷಾ ರೈ, ಐಶ್ವರ್ಯಾ ಸಿಂಧೋಗಿ ಅವರು ನರಕವಾಸ ಅನುಭವಿಸಿದ್ದರು. ಅವರೆಲ್ಲ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ‘ಊಟದ್ದು ಬಿಟ್ಟರೆ ಬೇರೆ ಏನೂ ಸಮಸ್ಯೆ ಇರಲಿಲ್ಲ’ ಎಂದು ಮಾನಸಾ ಹೇಳಿದರು. ‘ದೊಡ್ಡ ಸಮಸ್ಯೆ ಏನೂ ಇರಲಿಲ್ಲ’ ಎಂದು ಚೈತ್ರಾ, ಮೋಕ್ಷಿತಾ, ಅನುಷಾ ಹೇಳಿದರು.
ಇದನ್ನೂ ಓದಿ: ‘ಸೋಲೋಕೆ ಬರ್ತೀರಿ, ನಾಚಿಕೆ ಆಗಬೇಕು’: ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಜಗದೀಶ್
‘ನಾನು ನರಕದಲ್ಲಿ ತೊಂದರೆ ಅನುಭವಿಸಿಲ್ಲ. ನಮಗೆ ವಾಶ್ ರೂಮ್ ಬೇಕು ಎಂದು ಬಿಗ್ ಬಾಸ್ ಬಳಿ ಮನವಿ ಮಾಡಿದ ಕೂಡಲೇ ನರಕದ ಹೆಣ್ಮಕ್ಕಳು ಯಾವಾಗ ಬೇಕಿದ್ದರೂ ಸ್ವರ್ಗದ ವಾಶ್ ರೂಮ್ ಬಳಸಬಹುದು ಅಂತ ಅನುಮತಿ ಕೊಟ್ಟಿದ್ದರು. ಅಷ್ಟರಮಟ್ಟಿಗೆ ಸೂಕ್ಷ್ಮತೆಯಿಂದ ಸ್ಪಂದಿಸಿದ್ದಾರೆ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಆ ಮೂಲಕ ತಮಗೆ ಯಾವುದೇ ತೊಂದರೆ ಆಗಿಲ್ಲ ಎಂದು ಎಲ್ಲ ಸ್ಪರ್ಧಿಗಳು ಹೇಳಿದ್ದಾರೆ. ‘ನಮ್ಮ ಶೋನಲ್ಲಿ ಇರುವ ಹೆಣ್ಮಕ್ಕಳ ಬಗ್ಗೆ ಕಾಳಜಿ ಇಟ್ಟಿದ್ದಕ್ಕೆ ಮಹಿಳಾ ಆಯೋಗಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.