AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್​ಗೆ ಸವಾಲು ಹಾಕಿದ್ದ ಜಗದೀಶ್, ಕಿಚ್ಚನ ಮುಂದೆ ಭಾವುಕ

ಮೊದಲ ವಾರ ಬಿಗ್​ಬಾಸ್ ಬಾಗಿಲು ಒಡೆಯುವುದಾಗಿ, ಬಿಗ್​ಬಾಸ್ ಶೋ ನಿಲ್ಲಿಸುವುದಾಗಿ ಧಮ್ಕಿ ಹಾಕಿ ಮನೆಯಲ್ಲಿ ಎಲ್ಲರ ಮೇಲೆ ಅಬ್ಬರಿಸಿದ್ದ ಲಾಯರ್ ಜಗದೀಶ್ ಎರಡನೇ ವಾರಕ್ಕೆ ತುಸು ಮೆತ್ತಗಾಗಿದ್ದಾರೆ. ಸುದೀಪ್ ಜೊತೆಗೆ ಮಾತನಾಡುತ್ತಾ ಒಮ್ಮೆಲೆ ಭಾವುಕರಾಗಿದ್ದಾರೆ ಜಗದೀಶ್.

ಬಿಗ್​​ಬಾಸ್​ಗೆ ಸವಾಲು ಹಾಕಿದ್ದ ಜಗದೀಶ್, ಕಿಚ್ಚನ ಮುಂದೆ ಭಾವುಕ
ಮಂಜುನಾಥ ಸಿ.
|

Updated on: Oct 13, 2024 | 8:54 AM

Share

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ಬಹಳ ಅಬ್ಬರಿಸುತ್ತಿದ್ದಾರೆ. ಮೊದಲ ವಾರವೇ ಮನೆಯಿಂದ ಹೊರಗೆ ಹೋಗುತ್ತೀನಿ ಎಂದಿದ್ದ ಜಗದೀಶ್, ಬಿಗ್​ಬಾಸ್ ಮನೆ ಬಾಗಿಲು ಒಡೆಯುತ್ತೀನಿ, ನನ್ನನ್ನು ಎದುರುಹಾಕಿಕೊಂಡು ಬಿಗ್​ಬಾಸ್ ನಡೆಸುತ್ತೀರ ಎಂದೆಲ್ಲ ಸವಾಲು ಹಾಕಿದ್ದರು. ಅದಕ್ಕೆ ಸುದೀಪ್ ಸಹ ಸಖತ್ ಟಾಂಗ್ ಕೊಟ್ಟಿದ್ದರು. ಮೊದಲ ವಾರಕ್ಕೆ ಹೋಲಿಸಿದರೆ ಎರಡನೇ ವಾರಕ್ಕೆ ಜಗದೀಶ್ ತುಸು ಮೆತ್ತಗಾಗಿದ್ದಾರಾದರೂ ಸ್ಪರ್ಧಿಗಳ ಮೇಲೆ ಆರ್ಭಟ ನಿಲ್ಲಿಸಿಲ್ಲ. ಉಗ್ರಂ ಮಂಜು, ಸುರೇಶ್, ಹಂಸ ಸೇರಿದಂತೆ ಇತರರ ಮೇಲೆ ತಮ್ಮ ಆರ್ಭಟ ಮುಂದುವರೆಸಿದ್ದರು. ಆದರೆ ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್​ನಲ್ಲಿ ಜಗದೀಶ್​ ಅಚಾನಕ್ಕಾಗಿ ಭಾವುಕರಾದರು. ಕಷ್ಟಪಟ್ಟು ಕಣ್ಣೀರು ತಡೆದುಕೊಂಡರು.

ಆಗಿದ್ದಿಷ್ಟು, ಮನೆಯ ಎಲ್ಲ ಸದಸ್ಯರಿಗೆ ಹೊರಗಡೆಯಿಂದ ಉಡುಗೊರೆಗಳು ಬಂದವು. ಜಗದೀಶ್​ಗೆ ಯಾರೂ ಊಹಿಸದ ರೀತಿ ಹೃದಯ ಉಡುಗೊರೆಯಾಗಿ ಬಂತು ಅದರ ಜೊತೆಗೆ ಕೆಂಪು ಬಣ್ಣದ ಬನಿಯನ್ ಮತ್ತು ಚಡ್ಡಿ ಸಹ ಬಂತು. ಇದನ್ನು ನೋಡಿ ಸ್ವತಃ ಜಗದೀಶ್ ಆಶ್ಚರ್ಯಪಟ್ಟರು. ಜೊತೆಗೆ ಪಾಸಿಟಿವ್ ಆದ ಸಂದೇಶ ಉಡುಗೊರೆಯ ಜೊತೆಗೆ ಬಂದಿತ್ತು. ‘ಕಂಟೆಂಟ್ ಕ್ರಶ್’ ಆಗಿದ್ದೀರ ಎಂದು ಸಂದೇಶದಲ್ಲಿತ್ತು. ಇದನ್ನು ನೋಡಿ ಜಗದೀಶ್ ಬಹಳ ಖುಷಿ ಪಟ್ಟರು. ಇಂಥಹಾ ಒಂದು ಒಳ್ಳೆಯ ಮಾತುಗಳು ನಾನು ಕೇಳಿಯೇ ಇರಲಿಲ್ಲ ಎಂದರು ಜಗದೀಶ್.

ಇದನ್ನೂ ಓದಿ:ಪುಂಡಾಟ ಮೆರೆದಿದ್ದ ಲಾಯರ್ ಜಗದೀಶ್​ ಅನ್ನು ಮಾತಿನಲ್ಲೇ ದಾರಿಗೆ ತಂದ ಕಿಚ್ಚ

‘ನಾನು ಹೊರಗೆ ಸದಾ ವಿವಾದ ಅದು ಇದು ಎಂದು ಇದ್ದವನು. ನನ್ನೊಳಗು ಒಬ್ಬ ಮಗು ಇದ್ದಾನೆ ಎಂದು ತೋರಿಸೋಣ ಎಂದೇ ಇಲ್ಲಿಗೆ ಬಂದಿದ್ದೆ’ ಎಂದರು ಜಗದೀಶ್. ‘ಇಲ್ಲಿಗೆ ಬಂದ ಮೇಲೆ ನಾನು ಹೊರಗೆ ಏನೆಲ್ಲ ಮಾಡಬಹುದಿತ್ತು, ಏನೆಲ್ಲ ಮಾಡಿಲ್ಲ ಎಂಬುದು ಗೊತ್ತಾಗುತ್ತಿದೆ. ಇಲ್ಲಿ ಕೆಲವರಿಗೆ ನೇಲ್ ಪಾಲಿಶ್ ಹಾಕಿದೆ. ಆದರೆ ಎಂದಿಗೂ ನಾನು ನನ್ನ ಪತ್ನಿಗೆ ನೇಲ್ ಪಾಲಿಶ್ ಹಾಕಿಲ್ಲ. ನಾನು ಯಾಕೆ ನನ್ನ ಪತ್ನಿಯೊಂದಿಗೆ ಹೀಗೆ ಇರಲಿಲ್ಲ ಎಂದು ನನಗೆ ಬೇಸರ ಆಯ್ತು. ನಾನು ಆಕೆಗೆ ಮೋಸ ಮಾಡಿದೆನಾ ಎಂದೆಲ್ಲ ಅನ್ನಿಸಲು ಶುರುವಾಯ್ತು’ ಎಂದು ಉಮ್ಮಳಿಸಿ ಬಂದ ದುಃಖವನ್ನು ತಡೆಹಿಡಿದರು ಜಗದೀಶ್.

ಜಗದೀಶ್​ಗೆ ಪ್ರತಿಕ್ರಿಯೆ ನೀಡಿದ ಸುದೀಪ್, ‘ಊಟದ ಎಲೆಯ ರೀತಿ ಬಿಗ್​ಬಾಸ್ ಮನೆಯಲ್ಲಿ ಇರಬೇಕಾಗುತ್ತದೆ. ಇಲ್ಲಿ ಕೇವಲ ಒಂದೇ ಎಮೋಷನ್ ಇದ್ದರೆ ಸರಿ ಆಗುವುದಿಲ್ಲ. ಇಲ್ಲಿ ಸಿಟ್ಟು ಇರಬೇಕು, ಕೋಪವೂ ಇರಬೇಕು, ನಗು, ಭಾವುಕತೆ ಎಲ್ಲವೂ ಇರಬೇಕು. ಹೇಗೆ ಎಲೆಯಲ್ಲಿ ಎಲ್ಲವೂ ಇದ್ದರೆ ಸರಿಯಾದ ಊಟ ಎನಿಸಿಕೊಳ್ಳುತ್ತದೆಯೋ ಹಾಗೆ’ ಎಂದು ಉದಾಹರಣೆ ಸಹಿತ ವಿವರಿಸಿದರು. ಕಳೆದ ವಾರಕ್ಕೆ ಹೋಲಿಸಿದರೆ ಜಗದೀಶ್ ಎರಡನೇ ವಾರಕ್ಕೆ ತುಸು ಮೆತ್ತಗಾಗಿದ್ದಾರೆ. ಕೆಲ ಸ್ಪರ್ಧಿಗಳೊಟ್ಟಿಗೆ ಈಗಲೂ ಮುನಿಸು ಇದ್ದೇ ಇದೆ, ಆದರೆ ಅದರ ಜೊತೆಗೆ ಕೆಲವು ಗೆಳೆಯರನ್ನೂ ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ