‘ಸೋಲೋಕೆ ಬರ್ತೀರಿ, ನಾಚಿಕೆ ಆಗಬೇಕು’: ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಜಗದೀಶ್. ಸಮಯ ಸಿಕ್ಕಾಗಲೆಲ್ಲ ಅವರು ಜಗಳ ಮಾಡುತ್ತಾರೆ. ಹಾಗಾಗಿ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಗುತ್ತಿದೆ. ಈಗ ಅವರು ನರಕದಲ್ಲಿ ಇದ್ದಾರೆ. ನರಕಕ್ಕೆ ಬಂದ ಮೇಲೂ ಜಗದೀಶ್ ಅವರ ಹಾರಾಟ, ಚೀರಾಟ ಕಡಿಮೆ ಆಗಿಲ್ಲ. ಬೇರೆ ಸ್ಪರ್ಧಿಗಳಿಂದ ಚಿಕ್ಕ ತಪ್ಪಾದರೂ ಸಾಕು ಜಗದೀಶ್ ವಿಪರೀತ ಕೋಪ ಮಾಡಿಕೊಳ್ಳುತ್ತಾರೆ.
ಎರಡನೇ ವಾರದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಸ್ವರ್ಗ ವರ್ಸಸ್ ನರಕ ಎಂಬ ಕಾನ್ಸೆಪ್ಟ್ ಇರುವುದರಿಂದ ಈ ಬಾರಿಯ ಆಟದಲ್ಲಿ ಬದಲಾವಣೆ ಕಾಣಿಸಿದೆ. ನರಕದಲ್ಲಿ ಇದ್ದವರು ಸ್ವರ್ಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ನಾಮಿನೇಷನ್ನಿಂದಲೂ ಬಚಾವ್ ಆಗಲು ಎಲ್ಲರೂ ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ನೀಡಿದ್ದ ‘ಕಮಾನು ಬಿಲ್ಡಿಂಗ್’ ಟಾಸ್ಕ್ನಲ್ಲಿ ನರಕ ನಿವಾಸಿಗಳು ಸೋತಿದ್ದಾರೆ. ಅದರಿಂದ ಬೇಸರ ಮಾಡಿಕೊಂಡ ಜಗದೀಶ್ ಅವರು ತಮ್ಮದೇ ತಂಡದವರ ಮೇಲೆ ಕೂಗಾಡಿದ್ದಾರೆ.
‘ಕಮಾನು ಬಿಲ್ಡಿಂಗ್’ ಟಾಸ್ಕ್ನಲ್ಲಿ ಭಾಗವಹಿಸಲು ಜಗದೀಶ್ಗೆ ಅವಕಾಶ ನೀಡಿರಲಿಲ್ಲ. ಮೋಕ್ಷಿತಾ ಪೈ ಅವರು ಈ ಟಾಸ್ಕ್ನ ಉಸ್ತುವಾರಿ ವಹಿಸಿಕೊಂಡಿದ್ದರು. ನರಕದವರು ಸೋತಿದ್ದರಿಂದ ಜಗದೀಶ್ ಅವರಿಗೆ ಸಿಟ್ಟು ಬಂತು. ತಮ್ಮನ್ನು ಟಾಸ್ಕ್ ಆಡಲು ಸೇರಿಸಿಕೊಳ್ಳದೇ ಇರುವುದು ಮತ್ತು ತಮ್ಮ ಮಾತನ್ನು ಪರಿಗಣಿಸದೇ ಇರುವುದೇ ತಮ್ಮ ತಂಡದ ಸೋಲಿಗೆ ಕಾರಣ ಎಂದು ಅವರು ವಾದಿಸಿದ್ದಾರೆ.
ಟಾಸ್ಕ್ ಸೋತು ಸೈಡಲ್ಲಿ ನಿಂತಿಲ್ಲ ಶಿಶಿರ್, ಮೋಕ್ಷಿತಾ, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ ಮುಂತಾವರಿಗೆ ಜಗದೀಶ್ ಅವರು ಹಿಗ್ಗಾಮುಗ್ಗಾ ಬೈಯ್ದಿದ್ದಾರೆ. ‘ಸೋಲೋಕೆ ಬರುತ್ತೀರಿ. ನಿಮಗೆಲ್ಲ ನಾಚಿಕೆ ಆಗಬೇಕು’ ಎಂದು ಜಗದೀಶ್ ಹೇಳಿದ್ದನ್ನು ಕೇಳಿಸಿಕೊಂಡು ಎಲ್ಲರೂ ತಿರುಗಿಬಿದ್ದರು. ಅದಕ್ಕೆಲ್ಲ ಜಗದೀಶ್ ಕೇರ್ ಮಾಡಲಿಲ್ಲ. ‘ನಾನ್ ಸೆನ್ಸ್’ ಎಂದು ಕೂಡ ಬೈಯ್ದರು. ಆ ಪದ ಕೇಳಿಸಿಕೊಂಡು ಗೋಲ್ಡ್ ಸುರೇಶ್ ಕೆರಳಿದರು. ಹಾಗಿದ್ದರೂ ಕೂಡ ಜಗದೀಶ್ ಆರ್ಭಟ ನಿಲ್ಲಿಸಲಿಲ್ಲ. ಎಲ್ಲರ ಜೊತೆಗೂ ಜಗದೀಶ್ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೂ ಕೂಡ ಬಿಗ್ ಬಾಸ್ ಮನೆಯ ಪ್ರತಿ ಕ್ಷಣವನ್ನು ತಾವು ಎಂಜಾಯ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಗದೀಶ್ ಎದುರು ಮಾತಾಡಲು ಸಾಧ್ಯವಾಗದೇ ಸೋತ ಚೈತ್ರಾ ಕುಂದಾಪುರ; ಆಗಿದ್ದೇನು?
ಈ ವಾರ ಕೂಡ ಜಗದೀಶ್ ಅವರು ನಾಮಿನೇಟ್ ಆಗಿದ್ದಾರೆ. ವಿಶೇಷ ಅಧಿಕಾರ ಪಡೆದ ಗೌತಮಿ ಜಾದವ್ ಅವರು ನಾಮಿನೇಟ್ ಮಾಡಿದ್ದಾರೆ. ‘ಜಗದೀಶ್ ಹೆಚ್ಚಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೆ. ಪದೇ ಪದೇ ಹೇಳಿದರೂ ಕೂಡ ತಮ್ಮ ತಪ್ಪನ್ನು ಅವರು ಸರಿ ಮಾಡಿಕೊಳ್ಳುತ್ತಿಲ್ಲ’ ಎಂಬ ಕಾರಣವನ್ನು ಗೌತಮಿ ಜಾದವ್ ನೀಡಿದರು. ಅವರ ಜೊತೆ ಅನುಷಾ ರೈ ಅವರನ್ನು ಕೂಡ ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.