ಪ್ರತಿ ಬಾರಿಯೂ ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋನಲ್ಲಿ ವಿವಿಧ ಪ್ರದೇಶಗಳಿಂದ ಸ್ಪರ್ಧಿಗಳು ಬರುತ್ತಾರೆ. ಅವರ ಮನೆಯ ಭಾಷೆ ಯಾವುದೇ ಆಗಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಆದರೆ ಕೆಲವರು ಪ್ರತಿ ಮಾತಿಗೂ ಇಂಗ್ಲಿಷ್ (English) ಬಳಕೆ ಮಾಡುತ್ತಾರೆ. ಇದು ಬಿಗ್ ಬಾಸ್ ಮನೆಯ ನಿಯಮಕ್ಕೆ ವಿರುದ್ಧವಾದದ್ದು. ಈ ಬಾರಿ ಕೂಡ ಸಂಗೀತಾ ಶೃಂಗೇರಿ, ವಿನಯ್ ಗೌಡ, ನಮ್ರತಾ ಗೌಡ ಮುಂತಾದವರು ಹೆಚ್ಚು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದಾರೆ. ಅಂಥವರಿಗೆಲ್ಲ ಕಿಚ್ಚ ಸುದೀಪ್ (Kichcha Sudeep) ಅವರು ವೀಕೆಂಡ್ ಎಪಿಸೋಡ್ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಊಟಕ್ಕೆ ಉಪ್ಪಿನ ಕಾಯಿಯಂತೆ ಮಾತಿನ ಮಧ್ಯೆ ಇಂಗ್ಲಿಷ್ ಬಳಕೆಯಾದರೆ ಪರವಾಗಿಲ್ಲ. ಆದರೆ ಬಹುತೇಕ ಮಾತುಕಥೆ ಇಂಗ್ಲಿಷ್ನಲ್ಲಿಯೇ ನಡೆದರೆ ಅದನ್ನು ಬಿಗ್ ಬಾಸ್ ಸಹಿಸುವುದಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಗಳು ಅತಿಯಾಗಿ ಇಂಗ್ಲಿಷ್ ಬಳಸುತ್ತಿರುವುದರ ಬಗ್ಗೆ ಕಿಚ್ಚ ಸುದೀಪ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವೆಂಬರ್ 25ರ ಸಂಚಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪ ಆಯಿತು. ಸಾಧ್ಯವಾದಷ್ಟು ಎಲ್ಲರೂ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಅವರು ತಾಕೀತು ಮಾಡಿದ್ದಾರೆ.
ಇದನ್ನೂ ಓದಿ: ವಿನಯ್ಗಾಗಿ ಬಾತ್ರೂಂ ಕಾದ ಸ್ನೇಹಿತ್ಗೆ ಚಳಿ ಬಿಡಿಸಿದ ಸುದೀಪ್
ಬಿಗ್ ಬಾಸ್ ಸ್ಪರ್ಧಿಗಳ ಇಂಗ್ಲಿಷ್ ವ್ಯಾಮೋಹ ಕಂಡು ಈಗಾಗಲೇ ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಕನ್ನಡದ ಶೋನಲ್ಲಿ ಇಷ್ಟೊಂದು ಇಂಗ್ಲಿಷ್ ಬಳಕೆ ಸರಿಯಲ್ಲ ಎಂಬುದು ಎಲ್ಲರ ಅಭಿಪ್ರಾಯ. ಸಂಗೀತಾ ಶೃಂಗೇರಿ, ವಿನಯ್, ನಮ್ರತಾ, ತನಿಷಾ ಮುಂತಾದವರು ಇಂಗ್ಲಿಷ್ ಜಾಸ್ತಿ ಬಳಕೆ ಮಾಡುತ್ತಾರೆ. ಇದರಿಂದ ಶೋ ನೋಡುವ ಒಂದು ವರ್ಗದ ವೀಕ್ಷಕರಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ. ಆ ವರ್ಗದವರಿಗೂ ಅರ್ಥ ಆಗಬೇಕು ಎಂಬ ಕಾರಣಕ್ಕೆ ಕನ್ನಡವನ್ನೇ ಹೆಚ್ಚಾಗಿ ಬಳಸುವಂತೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ತಮ್ಮ ತಂಡದವರಿಗೇ ಮೋಸ ಮಾಡಿದ ಮೈಕೆಲ್ ಅಜಯ್
ಮೈಕೆಲ್ ಅಜಯ್ ಅವರಿಗೆ ಕನ್ನಡ ಮಾತನಾಡಲು ಅಷ್ಟು ಚೆನ್ನಾಗಿ ಬರುವುದಿಲ್ಲ. ಆದರೂ ಕೂಡ ಅವರು ಕನ್ನಡದ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಕಷ್ಟಪಟ್ಟು ಕನ್ನಡ ಮಾತನಾಡುವುದನ್ನು ಅವರು ಕಲಿಯುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಅವರನ್ನು ನೋಡಿ ಇನ್ನುಳಿದ ಸ್ಪರ್ಧಿಗಳು ಕಲಿಯಬೇಕಿದೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ. ‘ಕಲರ್ಸ್ ಕನ್ನಡ’ ಚಾನೆಲ್ನಲ್ಲಿ ಪ್ರತಿ ರಾತ್ರಿ 9.30ಕ್ಕೆ ಸಂಚಿಕೆ ಪ್ರಸಾರ ಆಗುತ್ತದೆ. ದಿನ 24 ಗಂಟೆಯೂ ಉಚಿತವಾಗಿ ‘ಜಿಯೋ ಸಿನಿಮಾ’ ಮೂಲಕ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.