
ಬಿಗ್ ಬಾಸ್ ಕಾಲ ಆರಂಭ ಆಗಿದೆ. ಹಿಂದಿಯಲ್ಲಿ ಹೊಸ ಸೀಸನ್ ಶುರುವಾಗಿದೆ. ತೆಲುಗಿನಲ್ಲಿ ಸೆಪ್ಟೆಂಬರ್ 7ರಿಂದ ಬಿಗ್ ಬಾಸ್ 9ನೇ ಸೀಸನ್ ಪ್ರಸಾರ ಆಗಲಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಸೆಪ್ಟೆಂಬರ್ 28ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ನಡೆಸಿಕೊಡಲಿದ್ದಾರೆ. ಎಲ್ಲ ಭಾಷೆಗಳಲ್ಲೂ ಬಿಗ್ ಬಾಸ್ ರಿಯಾಲಿಟಿ ಶೋಗೆ ಜನಪ್ರಿಯತೆ ಇದೆ. ಈ ಬಾರಿ ಕೂಡ ತೆಲುಗಿನಲ್ಲಿ ನಾಗಾರ್ಜುನ (Nagarjuna) ಅವರು ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಟ್ವಿಸ್ಟ್ ಏನೆಂದರೆ ಅವರು ತಮ್ಮ ನಿರೂಪಣಾ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಿದ್ದಾರೆ. ಸುದೀಪ್ ರೀತಿ ಖಡಕ್ ಆಗಿ ಶೋ ನಡೆಸಿಕೊಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಯಾರೇ ಬಂದರೂ ಸುದೀಪ್ ಅವರು ಬೇಧ-ಭಾವ ಮಾಡುವವರಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಸ್ಪರ್ಧಿಗಳನ್ನು ತಮ್ಮ ಮನೆಯ ಸದಸ್ಯರಂತೆಯೇ ಪ್ರೀತಿಸುತ್ತಾರೆ. ಆದರೆ ಅದೇ ಸ್ಪರ್ಧಿಗಳು ತಪ್ಪು ಮಾಡಿದಾಗ ಮುಲಾಜಿಲ್ಲದೇ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಕಟು ಮಾತುಗಳಿಂದ ಟೀಕಿಸುತ್ತಾರೆ.
ಈ ಹಿಂದಿನ ಸೀಸನ್ಗಳಲ್ಲಿ ನಾಗಾರ್ಜುನ ಅವರು ಸ್ಪರ್ಧಿಗಳ ಬಗ್ಗೆ ಕೊಂಚ ಮೃದು ಧೋರಣೆ ಹೊಂದಿದ್ದರು. ಸ್ಪರ್ಧಿಗಳು ನಿಯಮ ಮುರಿದಾಗ ಅಷ್ಟೇನೂ ಗಟ್ಟಿ ಧ್ವನಿಯಲ್ಲಿ ಎಚ್ಚರಿಕೆ ನೀಡಿರಲಿಲ್ಲ. ಇದರಿಂದ ತೆಲುಗು ಬಿಗ್ ಬಾಸ್ ಮನೆಯೊಳಗೆ ಅಂಥದ್ದೇನೂ ಡ್ರಾಮಾ ನಡೆಯಲಿಲ್ಲ. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಅವರು ತೀರ್ಮಾನಿಸಿದ್ದಾರೆ.
ಕಿಚ್ಚ ಸುದೀಪ್ ರೀತಿಯೇ ನಾಗಾರ್ಜುನ ಕೂಡ ಈ ಬಾರಿ ಕಟ್ಟುನಿಟ್ಟಾಗಿ ನಡೆದುಕೊಳ್ಳಲಿದ್ದಾರೆ. ಒಂದುವೇಳೆ ಸ್ಪರ್ಧಿಗಳಿಂದ ಮನೆಯ ನಿಯಮಗಳು ಉಲ್ಲಂಘನೆ ಆದರೆ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಆ ಮೂಲಕ ಶೋನಲ್ಲಿ ಹೆಚ್ಚಿನ ಕುತೂಹಲ ಇರುವಂತೆ ನೋಡಿಕೊಳ್ಳಲಿದ್ದಾರೆ ಎಂದು ತೆಲುಗಿನ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ನಿರೂಪಣೆಗೆ ನಾಗಾರ್ಜುನ ಪಡೆಯುವ ಸಂಭಾವನೆ ಎಷ್ಟು ಕೋಟಿ?
ಈಗಾಗಲೇ ‘ತೆಲುಗು ಬಿಗ್ ಬಾಸ್ 9’ ಶೂಟಿಂಗ್ ಆರಂಭ ಆಗಿದೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಸೆಪ್ಟೆಂಬರ್ 7ರ ಸಂಜೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಹೊಸ ಸ್ಪರ್ಧಿಗಳ ಆಟ ನೋಡಲು ವೀಕ್ಷಕರು ಸಜ್ಜಾಗಿದ್ದಾರೆ. ಹೊಸ ಥೀಮ್ನಲ್ಲಿ ತೆಲುಗು ಬಿಗ್ ಬಾಸ್ ಮನೆ ಸಿದ್ಧವಾಗಿದೆ. ಹೆಚ್ಚಿನ ಎನರ್ಜಿಯೊಂದಿಗೆ ನಾಗಾರ್ಜುನ ಅವರು ನಿರೂಪಣೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.