
ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಬಳಿಕ ಒಪ್ಪಿಕೊಂಡ ಚಿತ್ರ ಎಂದರೆ ಅದು ‘ಪೆದ್ದಿ’ (Peddi Movie) ಸಿನಿಮಾ. ಈ ಚಿತ್ರದ ಮೊದಲ ಹಾಡು ಈಗ ಬಿಡುಗಡೆ ಕಂಡಿದೆ. ‘ಚಿಕಿರಿ ಚಿಕಿರಿ’ ಎಂಬ ಹಾಡು ತೆಲುಗು, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ಈ ಗೀತೆಯನ್ನ ಸಂಚಿತ್ ಹೆಗಡೆ ಹಾಡಿದ್ದಾರೆ ಎಂಬುದು ವಿಶೇಷ. ವರದರಾಜು ಚಿಕ್ಕಬಳ್ಳಾಪುರ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಮ್ ಚರಣ್ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
‘ಉಪ್ಪೆನ’ ಸಿನಿಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಅವರು ‘ಪೆದ್ದಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣದಿಂದ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿಯಾದ ಜಾನ್ವಿ ಕಪೂರ್ ಅವರು ನಟಿಸಿದ್ದಾರೆ. ಅವರು ಈ ಮೊದಲು ತೆಲುಗಿನಲ್ಲಿ ಜೂನಿಯರ್ ಎನ್ಟಿಆರ್ ಜೊತೆ ‘ದೇವರ’ ಸಿನಿಮಾದಲ್ಲಿ ನಟಿಸಿದ್ದರು ಎಂಬುದು ವಿಶೇಷವಾಗಿದೆ.
ಕನ್ನಡದ ನಟ ಶಿವರಾಜ್‌ಕುಮಾರ್ ಅವರು ‘ಪೆದ್ದಿ’ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಅವರು ಖಡಕ್ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ‘ಜೈಲರ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಮಾಡಿದ ಪಾತ್ರವನ್ನು ಯಾರೂ ಮರೆಯುವಂತಿಲ್ಲ. ಅದೇ ರೀತಿಯಲ್ಲಿ ಈ ಪಾತ್ರ ಇರುತ್ತದೆಯೇ ಎನ್ನುವ ಕುತೂಹಲ ಮೂಡಿದೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಜಿಮ್ ಫೋಟೋ ವೈರಲ್; ‘ಪೆದ್ದಿ’ ಸಿನಿಮಾಗಾಗಿ ಇಷ್ಟೆಲ್ಲ ವರ್ಕೌಟ್
‘ಪೆದ್ದಿ’ ಸಿನಿಮಾ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿರುವುದು ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡುವಂತೆ ಆಗಿದೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳು ಕೈ ಜೋಡಿಸಿವೆ. 2026ರ ಮಾರ್ಚ್ 27ಕ್ಕೆ ‘ಪೆದ್ದಿ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ‘ಟಾಕ್ಸಿಕ್’ (ಮಾರ್ಚ್ 19) ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.