ಬಿಗ್ಬಾಸ್ಗೆ (BiggBoss) ಹೋಗಿ ಬಂದ ಮೇಲೆ ವರ್ತೂರು ಸಂತೋಷ್ (Varthur Santhosh) ಹವಾ ಹೆಚ್ಚಾಗಿದೆ. ಬಿಗ್ಬಾಸ್ನ ವಿನ್ನರ್ಗಿಂತಲೂ ಹೆಚ್ಚಿನ ಜನಪ್ರಿಯತೆ ವರ್ತೂರು ಸಂತೋಷ್ಗೆ ದೊರೆತಂತಿದೆ. ವಿವಿಧ ನಗರಗಳಿಗೆ ಓಡಾಡಿ ಮೆರವಣಿಗೆಗಳನ್ನು ಸಹ ವರ್ತೂರು ಸಂತೋಷ್ ಮಾಡಿದ್ದಾರೆ. ರಾಜ್ಯದ ಹಲವೆಡೆಯಿಂದ ಅಭಿಮಾನಿಗಳು ಆಗಮಿಸಿ ವರ್ತೂರು ಅವರೊಟ್ಟಿಗೆ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳವರು ವರ್ತೂರು ಸಂತೋಷ್ಗೆ ಸನ್ಮಾನಗಳನ್ನು ಮಾಡುತ್ತಿದ್ದಾರೆ. ಇದೇ ರೀತಿ ವರ್ತೂರು ಸಂತೋಷ್ ಅವರಿಗೆ ಸನ್ಮಾನ ಮಾಡಿ ಕೆಲ ಪೊಲೀಸ್ ಅಧಿಕಾರಿಗಳು ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಿಎಸ್ಐ ತಿಮ್ಮರಾಯಪ್ಪ ಎಂಬುವರು ಪೊಲೀಸ್ ಸಮವಸ್ತ್ರದಲ್ಲಿಯೇ ವರ್ತೂರು ಸಂತೋಷ್ ಅವರಿಗೆ ಸನ್ಮಾನ ಮಾಡಿದ್ದರು. ತಿಮ್ಮರಾಯಪ್ಪ, ವರ್ತೂರು ಸಂತೋಷ್ಗೆ ಪೇಟ, ಶಾಲು ತೊಡಿಸಿ ಸನ್ಮಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದನ್ನು ಗಮನಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ತಿಮ್ಮರಾಯಪ್ಪ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:‘ಕಾರ್ತಿಕ್ಗೂ ಇಷ್ಟು ಹೈಪ್ ಇಲ್ಲ’; ವರ್ತೂರು ಸಂತೋಷ್ಗೆ ಸಿಕ್ಕ ಸ್ವಾಗತ ನೋಡಿ ಅಭಿಪ್ರಾಯ ತಿಳಿಸಿದ ಫ್ಯಾನ್ಸ್
ವರ್ತೂರು ಸಂತೋಷ್ ಬಿಗ್ಬಾಸ್ ಮನೆಗೆ ಹೋದಾಗ, ಹುಲಿ ಉಗುರು ಧರಿಸಿದ್ದಾರೆಂಬ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಾಗಿ ಅವರನ್ನು ಬಿಗ್ಬಾಸ್ ಮನೆಯಿಂದಲೇ ಬಂಧಿಸಿ ಕರೆದೊಯ್ಯಲಾಗಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದ ವರ್ತೂರು ಸಂತೋಷ್ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿ ಹೊರಬಂದರು. ಅದಾದ ಬಳಿಕ ಮತ್ತೆ ಬಿಗ್ಬಾಸ್ ಮನೆಗೆ ಬಂದು ಅದ್ಭುತವಾಗಿ ಆಟವಾಡಿ ಫೈನಲಿಸ್ಟ್ ಆದರು. ಫೈನಲಿಸ್ಟ್ ಆಗಿ ಹೊರಬಂದ ಬಳಿಕ ವರ್ತೂರು ಅವರು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಮನೆಯಲ್ಲಿ ಖಾಸಗಿ ಕಾರ್ಯಕ್ರಮವೊಂದನ್ನು ಮಾಡಿ ಬಿಗ್ಬಾಸ್ ಸ್ಪರ್ಧಿಗಳನ್ನೆಲ್ಲ ಆಹ್ವಾನಿಸಿದ್ದರು. ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿ ತಾವು ರಾಷ್ಟ್ರಮಟ್ಟದ ಹಳ್ಳಿಕಾರ್ ರೇಸ್ ಮಾಡುವುದಾಗಿ ಹೇಳಿದ್ದರು. ಆ ರೇಸ್ಗೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಅವರನ್ನು ಕರೆಸುವುದಾಗಿಯೂ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ