ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಆದ ‘ಪುಷ್ಪ’ ಸಿನಿಮಾ (Pushpa Movie) ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಲ್ಲು ಅರ್ಜುನ್ ಅವರ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿದೆ. ವಿಶ್ವಾದ್ಯಂತ 300 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ’ ಸಿನಿಮಾದಿಂದ ದೇಶಾದ್ಯಂತ ಜನಪ್ರಿಯತೆ ಹೆಚ್ಚಿದೆ. ನಿರ್ದೇಶಕ ಸುಕುಮಾರ್ ಅವರ ಪ್ರತಿಭೆ ಎಂಥದ್ದು ಎಂಬುದು ಈ ಚಿತ್ರದಿಂದ ಮತ್ತೊಮ್ಮೆ ಸಾಬೀತಾಗಿದೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯಲ್ಲಿ ಬಂದ ಹಾಡುಗಳಂತೂ ಧೂಳೆಬ್ಬಿಸಿವೆ. ಸಮಂತಾ ಭರ್ಜರಿಯಾಗಿ ಕುಣಿದ ‘ಹು ಅಂತೀಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡು ಹಲವು ದಾಖಲೆ ಬರೆದಿದೆ. ಈಗ ಈ ಸಿನಿಮಾವನ್ನು ಟಿವಿಯಲ್ಲಿ (Pushpa Television Premiere) ಪ್ರಸಾರ ಮಾಡಲು ಸಿದ್ಧತೆ ನಡೆಯುತ್ತಿದೆ. ಕನ್ನಡಕ್ಕೂ ಡಬ್ ಆಗಿರುವ ಈ ಚಿತ್ರವನ್ನು ‘ಸ್ಟಾರ್ ಸುವರ್ಣ’ (Star Suvarna) ವಾಹಿನಿ ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಮಾರ್ಚ್ ತಿಂಗಳಲ್ಲೇ ‘ಪುಷ್ಪ’ ಚಿತ್ರದ ಟಿವಿಲಿಷನ್ ಪ್ರೀಮಿಯರ್ ಆಗಲಿದೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಫ್ಯಾನ್ಸ್ ಖುಷಿ ಆಗಿದ್ದಾರೆ.
2021ರ ಡಿ.17ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪುಷ್ಪ’ ಚಿತ್ರ ಬಿಡುಗಡೆ ಆಗಿತ್ತು. ತೆಲುಗಿನಲ್ಲಿ ಸಿದ್ಧವಾದ ಈ ಸಿನಿಮಾ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ರಿಲೀಸ್ ಆಗಿತ್ತು. ಕನ್ನಡ ವರ್ಷನ್ಗೆ ಹೆಚ್ಚು ಚಿತ್ರಮಂದಿರಗಳು ಸಿಗಲಿಲ್ಲ ಎಂಬ ಕಾರಣಕ್ಕೆ ಅನೇಕ ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದರು. ಈಗ ಮನೆಯಲ್ಲೇ ಕುಳಿತು ‘ಪುಷ್ಪ’ ಚಿತ್ರದ ಕನ್ನಡ ವರ್ಷನ್ ನೋಡುವ ಸಮಯ ಹತ್ತಿರವಾಗುತ್ತಿದೆ.
ಕನ್ನಡದಲ್ಲಿ ‘ಪುಷ್ಪ’ ಸಿನಿಮಾದ ಪ್ರಸಾರಕ್ಕೆ ‘ಸ್ಟಾರ್ ಸುವರ್ಣ’ ವಾಹಿನಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾರ್ಚ್ ತಿಂಗಳಲ್ಲಿಯೇ ಈ ಚಿತ್ರ ಪ್ರಸಾರ ಆಗಲಿದೆಯಾದರೂ ಪಕ್ಕಾ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆ ಬಗ್ಗೆ ವಾಹಿನಿ ಕಡೆಯಿಂದ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬರಲಿದೆ. ಸದ್ಯ ಕೊವಿಡ್ ಹಾವಳಿ ಕಡಿಮೆ ಆಗಿದೆ. ಆದರೆ ‘ಪುಷ್ಪ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆದಾಗ ಕೊರೊನಾ ಸೋಂಕಿಗೆ ಭಯ ಪಟ್ಟುಕೊಂಡು ಚಿತ್ರಮಂದಿರಕ್ಕೆ ಕಾಲಿಡದ ಒಂದು ಪ್ರೇಕ್ಷಕರ ವರ್ಗ ಕೂಡ ಇದೆ. ಅವರು ಸಹ ಈಗ ಟಿವಿಯಲ್ಲಿ ‘ಪುಷ್ಪ’ ಚಿತ್ರ ನೋಡಿ ಆನಂದಿಸಲಿದ್ದಾರೆ. ಕನ್ನಡದಲ್ಲಿ ‘ಸ್ಟಾರ್ ಸುವರ್ಣ’, ತೆಲುಗಿನಲ್ಲಿ ‘ಸ್ಟಾರ್ ಮಾ’, ತಮಿಳಿನಲ್ಲಿ ‘ಸ್ಟಾರ್ ವಿಜಯ್’ ಹಾಗೂ ಮಲಯಾಳಂ ಭಾಷೆಯಲ್ಲಿ ‘ಏಷ್ಯಾನೆಟ್ ಟಿವಿ’ ಮೂಲಕ ‘ಪುಷ್ಪ’ ಚಿತ್ರದ ಟಿಲಿವಿಷನ್ ಪ್ರೀಮಿಯರ್ ಆಗಲಿದೆ.
ಘಟಾನುಘಟಿ ಕಲಾವಿದರನ್ನು ಒಳಗೊಂಡ ಪಾತ್ರವರ್ಗ ಕೂಡ ಈ ಸಿನಿಮಾದ ಪ್ಲಸ್ ಪಾಯಿಂಟ್. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಫಹಾದ್ ಫಾಸಿಲ್, ಡಾಲಿ ಧನಂಜಯ್, ಅನುಸೂಯಾ, ರಾವ್ ರಮೇಶ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ಮೋಡಿ ಮಾಡಿದ್ದಾರೆ. ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಮಂತಾ ಕೂಡ ಈ ಚಿತ್ರದ ತಾರಾಮೆರುಗು ಹೆಚ್ಚಿಸಿದರು. ಎಲ್ಲದರ ಫಲವಾಗಿ ‘ಪುಷ್ಪ’ ಸೂಪರ್ ಹಿಟ್ ಆಯಿತು. ಈಗ ಟಿವಿಯಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
‘ಪುಷ್ಪ’ ಚಿತ್ರದ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅವರ ಚಾರ್ಮ್ ಹೆಚ್ಚಿದೆ. ಈ ಸೆಲೆಬ್ರಿಟಿಗಳು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಇದನ್ನೂ ಓದಿ:
ಹಿಂದಿ ಡಬ್ಬಿಂಗ್ ಮೂಲಕ 100 ಕೋಟಿ ರೂ. ಬಾಚಿದ ‘ಪುಷ್ಪ’ ಚಿತ್ರ; ಹಾಗಾದ್ರೆ ‘ಕೆಜಿಎಫ್’ ಗಳಿಸಿದ್ದೆಷ್ಟು?