ಮುಂಬೈನಲ್ಲಿ ನೆರವೇರಿತು ಸಿದ್ದಾರ್ಥ್ ಶುಕ್ಲಾ ಅಂತ್ಯಸಂಸ್ಕಾರ; ಕಣ್ಣೀರಿಟ್ಟ ಕುಟುಂಬದ ಸದಸ್ಯರು
ಚಿತಾಗಾರಾದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗಳಲ್ಲಿ ಕುಟುಂಬದವರು ತೀವ್ರವಾಗಿ ದುಃಖತಪ್ತವಾಗಿದ್ದು ಕಂಡು ಬಂದಿದೆ.
ಬಿಗ್ ಬಾಸ್ ಸೀಸನ್ 13ರ ವಿನ್ನರ್ , ಖ್ಯಾತ ನಟ ಸಿದ್ದಾರ್ಥ್ ಶುಕ್ಲಾ ಅಂತ್ಯ ಸಂಸ್ಕಾರ ಮುಂಬೈನಲ್ಲಿ ನೆರವೇರಿದೆ. ಬ್ರಹ್ಮಕುಮಾರಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ನಡೆದಿದೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಕೊವಿಡ್ ನಿಯಮಗಳನ್ನು ಸಂಪೂರ್ಣವಾಗಿ ಸಡಿಲ ಮಾಡಿಲ್ಲ. ಹೀಗಾಗಿ, ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಗಳು ನಡೆದಿವೆ.
ಮುಂಬೈನ ಓಶಿವರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ. ಸಿದ್ಧಾರ್ಥ್ ಹೃದಯಾಘಾತದಿಂದ ಮೃತಪಟ್ಟಿದ್ದು ಖಚಿತವಾಗಿತ್ತು. ಇದರ ಮಧ್ಯೆ, ಅವರು ಔಷಧ ಸೇವಿಸಿದ್ದಾರೆ ಎಂಬಿತ್ಯಾದಿ ವಿಚಾರಗಳು ವೈರಲ್ ಆಗಿತ್ತು. ಈ ಕಾರಣಕ್ಕೆ ಸಾವಿನ ನಂತರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ನಂತರ ಆಸ್ಪತ್ರೆಯಿಂದ ಅವರ ಶವವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಸದ್ಯ, ಚಿತಾಗಾರದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗಳಲ್ಲಿ ಕುಟುಂಬದವರು ತೀವ್ರವಾಗಿ ದುಃಖತಪ್ತವಾಗಿದ್ದು ಕಂಡು ಬಂದಿದೆ. ಅವರ ಸಾವಿನ ಸುದ್ದಿಯಿಂದ ಆದ ಶಾಕ್ನಿಂದ ಇನ್ನೂ ಅನೇಕ ಅಭಿಮಾನಿಗಳು ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಅವರ ಅಂತ್ಯಕ್ರಿಯೆ ನಡೆದಿದೆ.
ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದ ಅವರು ನಂತರ ಕಿರುತೆರೆಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಹಲವು ಧಾರಾವಾಹಿಗಳಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಬಿಗ್ ಬಾಸ್ ಸೀಸನ್ 13ರಲ್ಲಿ ಅವರು ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್ ಬಾಸ್ ಮಾತ್ರವಲ್ಲದೆ, ‘ಕತ್ರೋಂಕೆ ಕಿಲಾಡಿ ಸೀಸನ್ 7’ರಲ್ಲೂ ಅವರು ವಿನ್ನರ್ ಆಗಿದ್ದರು. ಬಿಗ್ ಬಾಸ್ 14ರಲ್ಲಿ ಅವರು ಗೆಸ್ಟ್ ಆಗಿ ದೊಡ್ಮನೆ ಪ್ರವೇಶಿಸಿದ್ದರು.
ಸೀರಿಯಲ್ನಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು ಮಾತ್ರವಲ್ಲದೆ, ಹಲವು ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ಅತಿಥಿ ಪಾತ್ರ ಮಾಡಿದ್ದರು. ಬಾಲಿವುಡ್ನ ಕೆಲವು ಸಿನಿಮಾಗಳಲ್ಲೂ ಕೂಡ ಅವರು ನಟಿಸಿದ್ದರು. ವರುಣ್ ಧವನ್ ನಾಯಕತ್ವದ ‘ಹಂಪ್ಟಿ ಶರ್ಮಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವರೊಂದು ಪಾತ್ರ ಮಾಡಿದ್ದರು. ಏಕ್ತಾ ಕಪೂರ್ ನಿರ್ಮಾಣದ ‘ಬ್ರೋಕನ್ ಬಟ್ ಬ್ಯೂಟಿಫುಲ್ 3’ ವೆಬ್ ಸಿರೀಸ್ನಲ್ಲಿ ಸಿದ್ಧಾರ್ಥ್ ನಟಿಸಿದ್ದರು. ಈ ವರ್ಷ ಓಟಿಟಿ ಮೂಲಕ ಅದು ರಿಲೀಸ್ ಆಗಿತ್ತು.
ಇದನ್ನೂ ಓದಿ: ಸುಶಾಂತ್ ಮತ್ತು ಸಿದ್ದಾರ್ಥ್ ಶುಕ್ಲಾ ಸಾವಿನ ನಡುವೆ ಹಲವು ಹೋಲಿಕೆ; ಧ್ವನಿ ಎತ್ತಿದ ನೆಟ್ಟಿಗರು