ಒಂದೇ ದಿನ 3 ಹೊಸ ಸೀರಿಯಲ್ ಪ್ರಸಾರಕ್ಕೆ ಸಿರಿ ಕನ್ನಡ ವಾಹಿನಿ ಸಜ್ಜು; ಈ ಧಾರಾವಾಹಿಗಳ ವಿಶೇಷತೆ ಏನು?
Siri Kannada: ಸಿರಿ ಕನ್ನಡ ವಾಹಿನಿಯಲ್ಲಿ ‘ಯುಗಾಂತರ’, ‘ರಜಿಯಾ ರಾಮ್’ ಮತ್ತು ‘ಮರೆತು ಹೋದವರು’ ಧಾರಾವಾಹಿಗಳು ಪ್ರಸಾರ ಆರಂಭಿಸಲಿವೆ. ಮೇ 23ರಿಂದ ಬಿತ್ತರ ಆಗಲಿರುವ ಈ ಸೀರಿಯಲ್ಗಳಲ್ಲಿ ಡಿಫರೆಂಟ್ ಕಥಾಹಂದರ ಇದೆ.
ಸೀರಿಯಲ್ ಜಗತ್ತು ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಒಂದಕ್ಕಿಂತ ಒಂದು ಭಿನ್ನವಾದ ಧಾರಾವಾಹಿಗಳನ್ನು (Kannada Serial) ಪ್ರೇಕ್ಷಕರಿಗೆ ನೀಡಲಾಗುತ್ತಿದೆ. ಈ ವಿಚಾರದಲ್ಲಿ ಎಲ್ಲ ವಾಹಿನಿಗಳ ನಡುವೆ ಪೈಪೋಟಿ ಇದೆ. ಮನೆಮಂದಿಯೆಲ್ಲ ಕುಳಿತು ನೋಡುವಂತಹ ಧಾರಾವಾಹಿಗಳನ್ನು ನಿರ್ಮಿಸಿ, ಜನ ಮೆಚ್ಚುವಂತೆ ಪ್ರಸ್ತುತ ಪಡಿಸುವುದು ಸುಲಭದ ವಿಚಾರವಲ್ಲ. ‘ಸಿರಿ ಕನ್ನಡ’ (Siri Kannada) ವಾಹಿನಿ ಕೂಡ ಹಲವು ಸೀರಿಯಲ್ಗಳನ್ನು ಪ್ರಸಾರ ಮಾಡುತ್ತಿದೆ. ಈಗಾಗಲೇ ‘ಧ್ರುವ ನಕ್ಷತ್ರ’, ‘ಪ್ರೇಮ್ ಜೊತೆ ಅಂಜಲಿ’ ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ‘ಸಿರಿ ಕನ್ನಡ’ ವಾಹಿನಿಯು ಈಗ ಮೂರು ಹೊಸ ಸೀರಿಯಲ್ಗಳ ಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಈ ಮೂರೂ ಧಾರಾವಾಹಿಗಳು ಒಂದೇ ದಿನ ಪ್ರಸಾರ ಆರಂಭಿಸಲಿವೆ ಎಂಬುದು ವಿಶೇಷ. ಹೌದು, ಮೇ 23ರಂದು ‘ಯುಗಾಂತರ’, ‘ರಜಿಯಾ ರಾಮ್’, ‘ಮರೆತು ಹೋದವರು’ ಧಾರಾವಾಹಿಗಳು ಪ್ರೇಕ್ಷಕರ ಎದುರು ಬರಲಿವೆ. ಈ ಸೀರಿಯಲ್ಗಳ ಕಥೆ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದೆ. ಮೂರು ತಂಡಗಳು ಜತೆಯಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡವು. ಈ ಸೀರಿಯಲ್ಗಳ ಕಥಾಹಂದರ ಏನು ಎಂಬ ಬಗ್ಗೆ ಇಲ್ಲಿದೆ ವಿವರ..
‘ಮರೆತು ಹೋದವರು’ ಧಾರಾವಾಹಿಗೆ ಮಧುಸೂದನ್ ನಿರ್ದೇಶನ ಮಾಡುತ್ತಿದ್ದಾರೆ. ‘ಇಂದಿನ ಕಾಲದ ಯುವ ಜನರಿಗೆ ತಮ್ಮ ಸಂಬಂಧಿಕರು ಯಾರು ಎಂಬುದೇ ಸರಿಯಾಗಿ ತಿಳಿದಿರುವುದಿಲ್ಲ. ಎಷ್ಟೋ ದಿನಗಳ ಕಾಲ ಒಬ್ಬರನೊಬ್ಬರು ನೋಡಿರುವುದಿಲ್ಲ. ಸಂಬಂಧಗಳೇ ಇಲ್ಲ ಅಂದ ಮೇಲೆ ಸಂಭ್ರಮ ಇರಲು ಹೇಗೆ ಸಾಧ್ಯ? ಮರೆಯಾದ ಸಂಬಂಧಗಳನ್ನು ಒಂದುಗೂಡಿಸಿ ಮದುವೆ ಮಾಡಿಕೊಳ್ಳುವ ಆಶಯ ಈ ಸೀರಿಯಲ್ ಕಥೆಯಲ್ಲಿದೆ. ಮರೆತು ಹೋದ ಸಂಬಂಧಗಳ ಹುಡುಕಾಟವೇ ‘ಮರೆತು ಹೋದವರು’ ಧಾರಾವಾಹಿಯ ಕಥಾ ಸಾರಾಂಶ ಎಂದಿದ್ದಾರೆ ಮಧುಸೂದನ್. ನಿಖಿಲ್ ಹಾಗೂ ಸಿರಿ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ಈ ಸೀರಿಯಲ್ ಮೇ 23ರಿಂದ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿಯಲ್ಲಿ ಶೇ.99 ಅಂಕ ಪಡೆದ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಮಹತಿ ಭಟ್
ಪ್ರೇಮ ಎಂಬುದು ಎಲ್ಲ ಜಾತಿ-ಧರ್ಮಗಳನ್ನು ಮೀರಿದ್ದು. ಇಂಥ ಎಳೆ ಇಟ್ಟುಕೊಂಡು ‘ರಜಿಯಾ ರಾಮ್’ ಸೀರಿಯಲ್ ಸಿದ್ಧವಾಗಿದೆ. ಇದರ ಕಥಾನಾಯಕ ಬ್ರಾಹ್ಮಣ ಸಮುದಾಯದ ಹುಡುಗ. ಆತ ಆರ್ಎಸ್ಎಸ್ನ ವಿದ್ಯಾರ್ಥಿ ಕೂಡ ಹೌದು. ಲಾಯರ್ ಆಗುವ ಕನಸು ಹೊತ್ತು ಮನೆಬಿಟ್ಟು ಬಂದವಳು ಕಥಾನಾಯಕಿ ರಜಿಯಾ. ಇವರಿಬ್ಬರ ನಡುವಿನ ಕಥೆಯೇ ‘ರಜಿಯಾ ರಾಮ್’. ಈ ಧಾರಾವಾಹಿಗೆ ಸುಧಾಕರ್ ರೆಡ್ಡಿ ಗೋಪೇನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಿಂದಿಗೆ ಡಬ್ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್ ರಾಜ್-ರಂಜನಿ ರಾಘವನ್ ಫ್ಯಾನ್ಸ್ಗೆ ಹೆಮ್ಮೆ
ಜನಪ್ರಿಯ ‘ಮಾಯಾಮೃಗ’ ಸೀರಿಯಲ್ನಲ್ಲಿ ನಾರಾಯಣ ಮೂರ್ತಿ ಪಾತ್ರದ ಮೂಲಕ ಜನಮೆಚ್ಚುಗೆ ಗಳಿಸಿದ್ದ ಎಸ್.ಎನ್. ಸೇತುರಾಮ್ ಅವರು ನಂತರ ನಿರ್ದೇಶಕನಾಗಿಯೂ ಗುರುತಿಸಿಕೊಂಡರು. 13 ವರ್ಷಗಳ ಬಳಿಕ ಅವರು ‘ಯುಗಾಂತರ’ ಧಾರಾವಾಹಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸೀರಿಯಲ್ ಮೇ 23ರಿಂದ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ವಾಹಿನಿಯವರು ಎಲ್ಲಾ ಜವಾಬ್ದಾರಿ ನನಗೆ ನೀಡಿದ್ದಾರೆ. ಇದರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಅನುಕೂಲ ಆಗುತ್ತದೆ. ಅರುಂಧತಿ ಎಂಬ ಜಿಲ್ಲಾಧಿಕಾರಿ ಪಾತ್ರದ ಸುತ್ತ ನಡೆಯುವ ಸಾಮಾಜಿಕ ಹಾಗೂ ಭಾವ ಸಂಘರ್ಷದ ಸುತ್ತ ನಡೆಯುವ ಕಥೆ ಈ ಧಾರಾವಾಹಿಯಲ್ಲಿ ಇದೆ’ ಎಂದು ನಿರ್ದೇಶಕ ಸೇತುರಾಮ್ ಹೇಳಿದ್ದಾರೆ.
‘ಯಾವ ಪಂಗಡಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಯಾವುದೇ ರೀತಿಯ ಬೇಸರ ತರುವ ಅಂಶಗಳು ನಮ್ಮ ಧಾರಾವಾಹಿಗಳಲ್ಲಿ ಇಲ್ಲ. ಮನರಂಜನೆಗೆ ಹೆಚ್ಚು ಒತ್ತು ಕೊಡುತ್ತೇವೆ’ ಎಂದು ಸಿರಿ ಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.