ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆಯುತ್ತಿದೆ. ಎರಡನೇ ವಾರಕ್ಕೆ ಕ್ಯಾಪ್ಟನ್ ಆಯ್ಕೆ ಆಗಬೇಕಿದೆ. ಈ ಸೀಸನ್ನ ಮೊದಲ ಕ್ಯಾಪ್ಟನ್ ಯಾರು ಆಗುತ್ತಾರೆ ಎಂಬ ಕೌತುಕ ಮೂಡಿದೆ. ಕ್ಯಾಪ್ಟನ್ ಆಗುವವರಿಗೆ ಒಂದು ವಾರದ ಇಮ್ಯುನಿಟಿ ಸಿಗುತ್ತದೆ. ಅಲ್ಲದೇ ಕೆಲವು ವಿಶೇಷ ಅಧಿಕಾರಗಳು ಸಿಗುತ್ತವೆ. ಹಾಗಾಗಿ ಕ್ಯಾಪ್ಟನ್ ಆಗಲು ಎಲ್ಲರೂ ಸಖತ್ ಪೈಪೋಟಿ ನೀಡುತ್ತಾರೆ. ಕ್ಯಾಪ್ಟನ್ ಆಗುವ ಅವಕಾಶ ಎಲ್ಲರಿಗೂ ಸಿಗುತ್ತಿಲ್ಲ. ನರಕವಾಸಿಗಳು ಈ ಟಾಸ್ಕ್ನಲ್ಲಿ ಭಾಗವಹಿಸುವಂತಿಲ್ಲ ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂದಿದೆ. ಹಾಗಾಗಿ ನರಕದ ಮಂದಿಗೆ ನಿರಾಸೆ ಆಗಿದೆ.
ಕೇವಲ ಸ್ವರ್ಗದಲ್ಲಿ ಇರುವವರು ಮಾತ್ರ ಕ್ಯಾಪ್ಟನ್ ಆಗುವ ಅರ್ಹತೆ ಪಡೆದಿದ್ದಾರೆ. ಸ್ವರ್ಗದಲ್ಲಿ 10 ಜನ ಇದ್ದಾರೆ. ಅವರಲ್ಲಿ 6 ಜನರು ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಆಯ್ಕೆ ಆಗಿದ್ದಾರೆ. ಭವ್ಯ, ಹಂಸಾ, ತ್ರಿವಿಕ್ರಮ್, ಉಗ್ರಂ ಮಂಜು, ಯಮುನಾ ಶ್ರೀನಿಧಿ, ಐಶ್ವರ್ಯಾ ಅವರು ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಭಾಗಿ ಆಗಲಿದ್ದಾರೆ. ಆದರೆ ಈ 6 ಜನರನ್ನು ಆಯ್ಕೆ ಮಾಡಿದ್ದು ಜಗದೀಶ್ ಅವರಿಗೆ ಸರಿ ಎನಿಸಿಲ್ಲ.
‘ಆಯ್ಕೆನಲ್ಲಿ ಮೋಸ ಆಗಿದೆ. ಇವರೆಲ್ಲ ಸಿಂಡಿಕೇಟ್ ಮಾಡಿಕೊಂಡು ಶೋ ನಡೆಸುತ್ತಿದ್ದಾರೆ. ಇದು ಅನ್ಯಾಯ ಅಂತ ನನಗೆ ಅನಿಸುತ್ತಿದೆ. ಈ ಆರು ಜನರು ನೆಟ್ಟಗೆ ಮಾತು ಕೂಡ ಆಡುವುದಿಲ್ಲ. ನನ್ನ ಅನಿಸಿಕೆ ನಾನು ಹೇಳಿದ್ದೇನೆ. ಅದನ್ನು ಪರಿಗಣಿಸುವುದು ಬಿಡುವುದು ಬಿಗ್ ಬಾಸ್ಗೆ ಬಿಟ್ಟಿದ್ದು’ ಎಂದು ಜಗದೀಶ್ ಹೇಳಿದ್ದಾರೆ. ಅವರ ವಾದವನ್ನು ಬಿಗ್ ಬಾಸ್ ಒಪ್ಪಿಕೊಂಡಿಲ್ಲ. ಹಾಗಾಗಿ ತಾವು ಈ ಶೋನಿಂದಲೇ ಹೊರಗೆ ಹೋಗುವುದಾಗಿ ಜಗದೀಶ್ ಹೇಳಿದ್ದಾರೆ. ಆದರೆ ದುಡುಕುವುದು ಬೇಡ ಎಂದು ಜಗದೀಶ್ಗೆ ಬಿಗ್ ಬಾಸ್ ಬುದ್ಧಿ ಹೇಳಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತಾ ತ್ರಿಕೋನ ಪ್ರೇಮ?
ಗೋಲ್ಡ್ ಸುರೇಶ್, ಮೋಕ್ಷಿತಾ ಪೈ, ಶಿಶಿರ್, ರಂಜಿತ್, ಚೈತ್ರಾ ಕುಂದಾಪುರ, ಅನುಷಾ ರೈ, ಮಾನಸಾ ಅವರು ನರಕದಲ್ಲಿ ಇದ್ದಾರೆ. ಇನ್ನುಳಿದ ಸ್ಪರ್ಧಿಗಳಿಗೆ ಸ್ವರ್ಗದಲ್ಲಿ ಸ್ಥಾನ ಸಿಕ್ಕಿದೆ. ಮೊದಲ ಕ್ಯಾಪ್ಟನ್ ಆಗುವವರು ಸ್ವರ್ಗ ಮತ್ತು ನರಕ ನಿವಾಸಿಗಳನ್ನು ಅದಲು ಬದಲು ಮಾಡುವ ಅಧಿಕಾರ ಪಡೆಯಲಿದ್ದಾರೆ. ಹಾಗಾಗಿ ಈ ಬಾರಿ ಕ್ಯಾಪ್ಟನ್ ಯಾರಾಗುತ್ತಾರೆ ಎಂಬುದು ಬಹಳ ಮುಖ್ಯವಾಗಲಿದೆ. ಮೊದಲ ವಾರದ ಪಂಚಾಯಿತಿಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಲಾಯರ್ ಜಗದೀಶ್ ತೋರಿದ ಅತಿರೇಖಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.