ಮತ್ತೆ ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ; ಧಾರಾವಾಹಿ ಫಸ್ಟ್ ಲುಕ್ ವೈರಲ್
ಹೊಸ ರೂಪದಲ್ಲಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಪ್ರಸಾರಕ್ಕೆ ಸಜ್ಜಾಗಿದೆ. ನಟಿ ಸ್ಮೃತಿ ಇರಾನಿ ಅವರು ಈ ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳುತ್ತಿದ್ದಾರೆ. ಸ್ಮೃತಿ ಇರಾನಿ ಅವರ ತುಳಸಿ ಪಾತ್ರದ ಫಸ್ಟ್ ಲುಕ್ ವೈರಲ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚಿದ್ದ ನಟಿ ಸ್ಮೃತಿ ಇರಾನಿ (Smriti Irani) ಅವರು ರಾಜಕೀಯದಲ್ಲೂ ಯಶಸ್ಸು ಕಂಡರು. ಸಂಸದೆಯಾಗಿ, ಸಚಿವೆಯಾಗಿ ಕೆಲಸ ಮಾಡಿದರು. ಕಿರುತೆರೆ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಅವರಿಗೆ ದೇಶವ್ಯಾಪಿ ಜನಪ್ರಿಯತೆ ಸಿಕ್ಕಿತ್ತು. ಹಿಂದಿಯ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ (Kyunki Saas Bhi Kabhi Bahu Thi) ಧಾರಾವಾಹಿಯಲ್ಲಿ ನಟಿಸಿ ಅವರು ಫೇಮಸ್ ಆಗಿದ್ದರು. ರಾಜಕೀಯಕ್ಕೆ ಕಾಲಿಟ್ಟ ನಂತರ ಅವರು ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದರು. ಈಗ ಮತ್ತೆ ಅವರು ನಟನೆಗೆ ಮರಳುತ್ತಿದ್ದಾರೆ. ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಸೀರಿಯಲ್ (Tv Serial) ಮೂಲಕವೇ ಸ್ಮೃತಿ ಇರಾನಿ ಅವರು ಕಮ್ಬ್ಯಾಕ್ ಮಾಡುತ್ತಿದ್ದಾರೆ.
ಭಾರತದ ಕಿರುತೆರೆ ಲೋಕದಲ್ಲಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಏಕ್ತಾ ಕಪೂರ್ ನಿರ್ಮಾಣ ಮಾಡಿದ ಈ ಸೀರಿಯಲ್ 2000ನೇ ಇಸವಿಯ ಜುಲೈ 3ರಿಂದ 2008ರ ನವೆಂಬರ್ 6ರ ತನಕ ಪ್ರಸಾರ ಆಗಿತ್ತು. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಈ ಸೀರಿಯಲ್ ಬಿತ್ತರವಾಗಿತ್ತು. ಒಟ್ಟು 1,800 ಸಂಚಿಕೆಗಳು ಪ್ರಸಾರವಾಗಿದ್ದವು.
ಈಗ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಹೊಸ ರೂಪದಲ್ಲಿ ಬರಲು ಸಜ್ಜಾಗಿದೆ. ಇದರಲ್ಲಿ ಸ್ಮೃತಿ ಇರಾನಿ ಅವರು ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಬಾರಿಯೂ ಸ್ಮೃತಿ ಇರಾನಿ ಅವರು ತುಳಸಿ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ. ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಸ್ಮೃತಿ ಇರಾನಿ ಅವರು ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿಯ 25ನೇ ವರ್ಷವನ್ನು ಸಂಭ್ರಮಿಸಿದ್ದರು. ‘25 ವರ್ಷಗಳ ಹಿಂದೆ ಭಾರತದ ಮನೆಗಳಿಗೆ ಈ ಕಥೆ ತಲುಪಿತ್ತು. ಅಸಂಖ್ಯಾತ ಜನರ ಬದುಕಿನ ಭಾಗವೇ ಆಗಿತ್ತು. ಅದು ಕೇವಲ ಧಾರಾವಾಹಿ ಆಗಿರಲಿಲ್ಲ. ಅದು ಭಾವನೆ, ನೆನಪು ಮತ್ತು ಆಚರಣೆಯೇ ಆಯಿತು’ ಎಂದು ಸ್ಮೃತಿ ಇರಾನಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಧಾರಾವಾಹಿ ಚಿತ್ರೀಕರಣ ಪ್ರಾರಂಭಿಸಿದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
‘ಆ ಸಮಯದಲ್ಲಿ ಕುಟುಂಬದವರು ಎಲ್ಲ ಕೆಲಸ ನಿಲ್ಲಿಸಿ, ಜೊತೆಯಾಗಿ ಕುಳಿತು ನಗುತ್ತಿದ್ದರು, ಅಳುತ್ತಿದ್ದರು. ತುಳಸಿ ಎಂಬ ಪಾತ್ರವನ್ನು ತಮ್ಮದೇ ಕುಟುಂಬದ ವ್ಯಕ್ತಿ ಎಂದು ಪರಿಗಣಿಸಿದ ಎಲ್ಲ ವೀಕ್ಷಕರಿಗೆ ಧನ್ಯವಾದಗಳು. ಇದು ಕೇವಲ ನನ್ನ ಜರ್ನಿ ಆಗಿರಲಿಲ್ಲ. ಇದು ನಮ್ಮೆಲ್ಲರದ್ದೂ ಆಗಿತ್ತು. ಸದಾ ನಮ್ಮೆಲ್ಲರದ್ದೂ ಆಗಿರಲಿದೆ’ ಎಂದು ಸ್ಮೃತಿ ಇರಾನಿ ಬರೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.