ಈ ಬಾರಿ ಬಿಗ್ ಬಾಸ್ (BBK 10) ಗೆಲ್ಲುವುದು ಯಾರು? ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ಈ ಪ್ರಶ್ನೆ ಕೊರೆಯುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನ ಫಿನಾಲೆ ಸಂಚಿಕೆ ಶೀಘ್ರದಲ್ಲೇ ಪ್ರಸಾರ ಆಗಲಿದೆ. ಅಂತಿಮ ಹಂತಕ್ಕೆ ಈ ಕಾರ್ಯಕ್ರಮ ತಲುಪಿದೆ. ಜನವರಿ 20ರಂದು ಕಿಚ್ಚ ಸುದೀಪ್ (Kichcha Sudeep) ಅವರು ಈ ಆವೃತ್ತಿಯ ಕೊನೆಯ ಪಂಚಾಯ್ತಿ ನಡೆಸಿದ್ದಾರೆ. ಈ ಕೊನೇ ವಾರದಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ (Vinay Gowda) ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಈ ಗೌರವ ಸಿಕ್ಕಿದ್ದಕ್ಕೆ ಇಬ್ಬರೂ ಖುಷಿಯಾಗಿದ್ದಾರೆ. ಚಪ್ಪಾಳೆ ನೀಡಿದ ಬಳಿಕ ಸುದೀಪ್ ಅವರು ಆಡಿದ ಮಾತುಗಳು ಕೌತುಕಕ್ಕೆ ಕಾರಣ ಆಗಿವೆ.
ಪ್ರತಿ ವೀಕೆಂಡ್ನಲ್ಲಿ ಆಯಾ ವಾರದ ಪರ್ಫಾರ್ಮೆನ್ಸ್ ಆಧರಿಸಿ ಸುದೀಪ್ ಅವರು ‘ಕಿಚ್ಚನ ಚಪ್ಪಾಳೆ’ ನೀಡುತ್ತಾರೆ. ಒಮ್ಮೆಯಾದರೂ ಸುದೀಪ್ ಅವರಿಂದ ಚಪ್ಪಾಳೆ ಪಡೆಯಬೇಕು ಎಂಬುದು ಸ್ಪರ್ಧಿಗಳ ಆಸೆ ಆಗಿರುತ್ತದೆ. ಕೊನೇ ವಾರದಲ್ಲಿ ಸುದೀಪ್ ಅವರು ಇಬ್ಬರಿಗೆ ಚಪ್ಪಾಳೆ ನೀಡಿರುವುದು ವಿಶೇಷ. ಅದಕ್ಕಿಂತಲೂ ಅಚ್ಚರಿ ಏನೆಂದರೆ, ಅವರು ಈ ಬಾರಿ ಚಪ್ಪಾಳೆ ಕೊಟ್ಟಿರುವುದು ಒಂದು ವಾರದ ಆಟವನ್ನು ಪರಿಗಣಿಸಿ ಅಲ್ಲ. ಬದಲಿಗೆ, ಇಡೀ ಸೀಸನ್ನಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರ ಪರ್ಫಾರ್ಮೆನ್ಸ್ ಅನ್ನು ಗಮನದಲ್ಲಿ ಇಟ್ಟುಕೊಂಡು ಸುದೀಪ್ ಅವರು ಈ ಚಪ್ಪಾಳೆ ನೀಡಿದ್ದಾರೆ.
‘ಈ ಇಡೀ ಸೀಸನ್ನಲ್ಲಿ ಕೆಲವು ವಿಚಾರಗಳನ್ನು ನೋಡಿದ ಬಳಿಕ ಈ ಚಪ್ಪಾಳೆ ನೀಡುತ್ತಿದ್ದೇನೆ. ಈ ಜರ್ನಿಯಲ್ಲಿ ಕೊಡುಗೆ ಎಂಬುದು ಬಹಳ ಮುಖ್ಯ. ಸರಿ ಮಾಡಿದ್ದಾರೆ, ತಪ್ಪು ಮಾಡಿದ್ದಾರೆ. ಬೈಯ್ಯಿಸಿಕೊಂಡಿದ್ದಾರೆ, ಅತ್ತಿದ್ದಾರೆ. ಇವರನ್ನು ಮನೆಯಿಂದ ಹೊರಗೆ ಇಟ್ಟರೆ ಈ ಸೀಸನ್ನ ಬೆಲೆ ಎಷ್ಟು ಎಂಬ ಪ್ರಶ್ನೆ ಬರುತ್ತದೆ. ಹಾಗಂತ ಯಾವುದೇ ವ್ಯಕ್ತಿ ಇಲ್ಲ ಎಂದರೆ ಒಂದು ಸೀಸನ್ ನಡೆಯಲ್ಲ ಅಂತೇನೂ ಇಲ್ಲ. ಯಾರೇ ಇಲ್ಲದಿದ್ದರೂ ಸೀಸನ್ ನಡೆಯುತ್ತದೆ. ಆದರೂ ಇವರನ್ನು ಹೊರಗಿಟ್ಟರೆ ಈ ಸೀಸನ್ ಅಪೂರ್ಣ ಎನಿಸಿಕೊಳ್ಳುತ್ತದೆ. ಈ ಕೊನೆಯ ವಾರದಲ್ಲಿ ವಿನಯ್ ಮತ್ತು ಸಂಗೀತಾಗೆ ನಾನು ಚಪ್ಪಾಳೆ ಕೊಡುತ್ತೇನೆ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ‘ನನ್ನಿಂದ ತನಿಷಾನ ದೂರ ಮಾಡಿದ ಪಾಪಿ ಇವನು’: ಕಾರ್ತಿಕ್ ಕಡೆ ಕೈ ತೋರಿಸಿದ ವರ್ತೂರು
‘ನಿಮ್ಮಿಬ್ಬರಿಂದ ಈ ಶೋ ಬಹಳ ಭಿನ್ನ ಎನಿಸಿಕೊಂಡಿದೆ. ಸರಿ-ತಪ್ಪು ಎಂಬ ಅಭಿಪ್ರಾಯ ಹೇಳಿದ್ದೀರಿ, ಜಗಳ ಆಡಿದ್ದೀರಿ, ಒಳ್ಳೆಯವರು ಆಗಿದ್ದೀರಿ, ಕೆಟ್ಟವರೂ ಆಗಿದ್ದೀರಿ. ಕಡೆಗೂ ಈ 7 ಜನರಲ್ಲಿ ಸ್ಥಾನ ಪಡೆದುಕೊಂಡಿದ್ದೀರಿ. ಅದ್ಭುತವಾದ ಕೊಡುಗೆ ನೀಡಿದ್ದೀರಿ’ ಎಂದು ಸುದೀಪ್ ಅವರು ಹೊಗಳಿದ್ದಾರೆ. ಇಡೀ ಸೀಸನ್ನ ಆಟವನ್ನು ಪರಿಗಣಿಸಿ ಸುದೀಪ್ ಅವರು ಇಷ್ಟೆಲ್ಲ ಹೊಗಳಿದ್ದಾರೆ ಎಂದರೆ ಅದು ದೊಡ್ಡ ಸೂಚನೆ ಆಗಿರಬಹುದು ಎಂದು ಕಿರುತೆರೆ ಪ್ರೇಕ್ಷಕರು ಅಂದಾಜಿಸುತ್ತಿದ್ದಾರೆ. ಫಿನಾಲೆ ವೇದಿಕೆಯಲ್ಲಿ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರು ಕಿಚ್ಚನ ಅಕ್ಕ-ಪಕ್ಕ ನಿಲ್ಲಬಹುದೇ ಎಂಬ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ