ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ಬಿಗ್ ಬಾಸ್ (Bigg Boss Kannada Season 10) ಮನೆಗೆ ಎಂಟ್ರಿ ನೀಡಿದ್ದಾರೆ. ಎಲ್ಲ ಸ್ಪರ್ಧಿಗಳಿಗೂ ಒಂದೊಂದು ಹಿನ್ನೆಲೆ ಇರುತ್ತದೆ. ಕೆಲವರ ಬದುಕಿನ ಕಹಾನಿ ತುಂಬ ಕರುಣಾಜನಕ ಆಗಿರುತ್ತದೆ. ಈಗ ಹಾಸ್ಯ ನಟ ತುಕಾಲಿ ಸಂತೋಷ್ (Tukali Santosh) ಅವರು ತಮ್ಮ ಜೀವನದ ಕಷ್ಟದ ದಿನಗಳ ನೆನಪನ್ನು ಬಿಗ್ ಬಾಸ್ ಮನೆಯಲ್ಲಿ ಮೆಲುಕು ಹಾಕಿದ್ದಾರೆ. ತಾವು ಅನುಭವಿಸಿದ ಬಡತನವನ್ನು ಎಲ್ಲರ ಎದುರು ವಿವರಿಸಿದ್ದಾರೆ. ಸಂತೋಷ್ ಅವರ ತಾಯಿಗೆ ಅನಾರೋಗ್ಯ ಕಾಡುತ್ತಿತ್ತು. ಅದರಿಂದಾಗಿ ಅವರು ಮೃತಪಟ್ಟರು. ತಾಯಿಯನ್ನು ನೆನೆದು ತುಕಾಲಿ ಸಂತು ಕಣ್ಣೀರು ಹಾಕಿದ್ದಾರೆ. ಅವರ ಜೀವನದ ಕಥೆ ಹೇಳಿ ಇನ್ನುಳಿದ ಸ್ಪರ್ಧಿಗಳು ಕೂಡ ಅತ್ತಿದ್ದಾರೆ. ಇಂಥ ಒಂದು ಎಮೋಷನಲ್ ಘಟನೆಗೆ ಬಿಗ್ ಬಾಸ್ (Bigg Boss Kannada) ಮನೆ ಸಾಕ್ಷಿ ಆಗಿದೆ. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ದಿನದ 24 ಗಂಟೆಯೂ ಉಚಿತವಾಗಿ ನೋಡುವ ಅವಕಾಶ ಇದೆ.
ಪ್ರತಿ ಸೀಸನ್ನಲ್ಲಿ ಇಂಥ ಸನ್ನಿವೇಶ ಎದುರಾಗುತ್ತದೆ. ನಗುನಗುತ್ತಾ, ಎಲ್ಲರೊಂದಿಗೆ ಬೆರೆಯುತ್ತಾ, ಟಾಸ್ಕ್ಗಾಗಿ ಗುದ್ದಾಡುತ್ತಾ ಕಾಲ ಕಳೆಯುವ ಸ್ಪರ್ಧಿಗಳು ಒಮ್ಮೊಮ್ಮೆ ತಮ್ಮ ರಿಯಲ್ ಕೈಫ್ ಘಟನೆಗಳನ್ನು ನೆನಪಿಸಿಕೊಂಡು ಎಮೋಷನಲ್ ಆಗುತ್ತಾರೆ. ಈ ಸೀಸನ್ನಲ್ಲೂ ಅದು ಮರುಕಳಿಸಿದೆ. ಎಲ್ಲರನ್ನೂ ತಮ್ಮ ಕಾಮಿಡಿ ಮೂಲಕ ನಗಿಸುವ ತುಕಾಲಿ ಸಂತೋಷ್ ಅವರ ಬದುಕಿನಲ್ಲಿ ಟ್ರ್ಯಾಜಿಡಿ ನಡೆದಿತ್ತು. ಇಂದು ಸಂತು ಖ್ಯಾತಿ ಮತ್ತು ಹಣ ಗಳಿಸುತ್ತಿದ್ದಾರೆ. ಆದರೆ ಅದನ್ನು ನೋಡಿ ಖುಷಿಪಡಲು ತಾಯಿ ಇಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ.
ಇದನ್ನೂ ಓದಿ: ನನ್ನ ಗಂಡನ್ನ ಟಾರ್ಗೆಟ್ ಮಾಡ್ತಿದ್ದಾರೆ: ತುಕಾಲಿ ಸಂತು ಪತ್ನಿ ಚಿನ್ನಿ ಮಾತು
‘ನಮ್ಮ ಅಮ್ಮ ಮತ್ತು ನಾನು ಒಟ್ಟಿಗೆ ಫುಟ್ಪಾತ್ನಲ್ಲಿ ಮಲಗುತ್ತಿದ್ದೆವು. ತುಂಬ ಕಷ್ಟ ಇತ್ತು. ತಾಯಿಗೆ ಹುಷಾರಿರಲಿಲ್ಲ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬೇಕು ಅಂತ ನಾನು ಕಾರು ತೆಗೆದುಕೊಂಡು. ಅಮ್ಮ ಆ ಕಾರನ್ನು ಮುಟ್ಟಿ ‘ಕಾರು ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದುಬಿಟ್ಟೆಯಲ್ಲ. ನನ್ನನ್ನು ಉಳಿಸಿಕೊಳ್ಳುತ್ತೀಯ ಅಲ್ವಾ’ ಅಂತ ಕೇಳಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ’ ಎಂದಿದ್ದಾರೆ ತುಕಾಲಿ ಸಂತೋಷ್.
‘ನಾನು ಬರುವವರೆಗೂ ನಮ್ಮ ಅಮ್ಮ ಜೀವ ಬಿಟ್ಟಿರಲಿಲ್ಲ. ಓಡಿ ಬಂದು ನೋಡಿದೆ. ಅಮ್ಮನ ಕಣ್ಣಲ್ಲಿ ನೀರು ಹರಿದುಹೋಯ್ತು’ ಎಂದು ತಮ್ಮ ನೋವಿನ ದಿನಗಳನ್ನು ತುಕಾಲಿ ಸಂತೋಷ್ ಅವರು ನೆನಪು ಮಾಡಿಕೊಂಡಿದ್ದಾರೆ. ಅವರು ಹೇಳಿದ್ದನ್ನೆಲ್ಲ ಕೇಳಿ ಮನೆಯ ಇತರೆ ಸದಸ್ಯರು ಕಂಬನಿ ಸುರಿಸಿದ್ದಾರೆ. ಇತ್ತೀಚೆಗೆ ಸಂತೋಷ್ ಅವರ ಪತ್ನಿ ಮಾನಸಾ ಕೂಡ ಇದೇ ಘಟನೆಯ ಕುರಿತು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದರು. ‘ಸಂತೋಷ್ ಮೊದಲೇ ಎಚ್ಚೆತ್ತುಕೊಂಡಿದ್ದರೆ ಅಮ್ಮನನ್ನು ಬದುಕಿಸಿಕೊಳ್ಳಬಹುದಿತ್ತು ಎನಿಸುತ್ತೆ. ನೋಡಿಕೊಳ್ಳುವವರು ಯಾರೂ ಇಲ್ಲದೇ ಆಸ್ಪತ್ರೆಗೆ ಸರಿಯಾಗಿ ತೋರಿಸುವುದಕ್ಕೆ ಆಗಲಿಲ್ಲ. ಸಂತು ಕಡೆಯಿಂದ ತಪ್ಪಾಗಿಹೋಯ್ತು. ಆ ಬಗ್ಗೆ ಈಗಲೂ ಕೊರಗು ಇದೆ’ ಎಂದು ಮಾನಸಾ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.